ಥೈಲ್ಯಾಂಡ್‌ನಲ್ಲಿ ಭೀಕರ ಅಪಘಾತ: ಬಾಲಕ ಚಾಲನೆ ಮಾಡಿದ ವಾಹನಕ್ಕೆ 9 ಭಿಕ್ಕುಗಳು ಬಲಿ : Thailand Truck Crash

ಬ್ಯಾಂಕಾಕ್ (ಥೈಲ್ಯಾಂಡ್) – ಥೈಲ್ಯಾಂಡ್ ಈಶಾನ್ಯ ಭಾಗದಲ್ಲಿ ಜುಲೈ 2 ರಂದು 11 ವರ್ಷದ ಬಾಲಕ ಚಲಾಯಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಬೌದ್ಧ ಭಿಕ್ಕುಗಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಆರೋಪಿ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಬಾಲ ಸಂರಕ್ಷಣಾ ಅಧಿಕಾರಿಗಳ ಸಮ್ಮುಖದಲ್ಲಿ ಆತನ ವಿಚಾರಣೆ ನಡೆಸಲಾಗುವುದು.

1. ಮುಕದಾಹನ್ ಪ್ರಾಂತ್ಯದ 35 ಬೌದ್ಧ ಭಿಕ್ಕುಗಳು 260 ಕಿಲೋಮೀಟರ್ ಉದ್ದದ ಪಾದಯಾತ್ರೆ (ತೀರ್ಥಯಾತ್ರೆ) ಕೈಗೊಂಡಿದ್ದರು. ಯಾತ್ರೆ ಆರಂಭವಾದ ಕೇವಲ 30 ನಿಮಿಷಗಳಲ್ಲೇ ಈ ದುರಂತ ಸಂಭವಿಸಿದೆ.

2. ಐದು ಭಿಕ್ಕುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 13 ಭಿಕ್ಕುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

3. ಬೌದ್ಧ ಭಿಕ್ಕುಗಳು ರಸ್ತೆಯ ಬದಿಯಲ್ಲಿ ಒಂದೇ ಸಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಾಲಕನ ನಿಯಂತ್ರಣ ತಪ್ಪಿದ ಟ್ರಕ್ ಅವರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದನ್ನು ಪತ್ತೆಹಚ್ಚಲಾಗುತ್ತಿದೆ.