ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ

ನ್ಯಾಯವಾದಿ ವಿಷ್ಣು ಶಂಕರ ಜೈನ್

ನವ ದೆಹಲಿ – ಶ್ರೀರಾಮಮಂದಿರದ ನಿರ್ಮಾಣದ ನಂತರ ನಾವೆಲ್ಲರೂ ಅಲ್ಲಿ ಪ್ರಭು ಶ್ರೀರಾಮನನ್ನು ಪ್ರತಿಷ್ಠಾಪಿಸಿದೆವು. ಆ ಸಮಯದಲ್ಲಿ ಎಲ್ಲರೂ ‘ಇದು ಇಡೀ ದೇಶದಲ್ಲೇ ಒಂದು ಆದರ್ಶ ಮಂದಿರವಾಗಬೇಕು’ ಎಂದು ಯೋಚಿಸಿದ್ದರು. ಆದ್ದರಿಂದ ಆ ಸ್ಥಳದಲ್ಲಿ ಅವ್ಯವಹಾರದ ಘಟನೆ ನಡೆದಿರುವುದು ಅತ್ಯಂತ ಗಂಭೀರವಾಗಿದೆ. ಈ ಘಟನೆಯ ಆಳವಾದ ತನಿಖೆ ಖಂಡಿತವಾಗಿಯೂ ನಡೆಯುತ್ತದೆ; ಆದರೆ ಇಂತಹ ವಿಷಯಗಳು ಭವಿಷ್ಯದಲ್ಲಿ ಮತ್ತೆ ಮರುಕಳಿಸದಂತೆ ತಡೆಯಲು ಅಲ್ಲಿ ಒಂದು ವಿಶೇಷ ವ್ಯವಸ್ಥೆಯನ್ನು ನಿರ್ಮಿಸುವುದು ಅತ್ಯಗತ್ಯ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯವಾದಿ ವಿಷ್ಣು ಶಂಕರ ಜೈನ್ ಮಾತನ್ನು ಮುಂದುವರೆಸುತ್ತಾ, ಮಂದಿರ ನ್ಯಾಸದ (ಟ್ರಸ್ಟ್) ಕೋಶಾಧಿಕಾರಿಗಳು ನೈತಿಕತೆಯ ಆಧಾರದ ಮೇಲೆ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ವಿಶೇಷ ತನಿಖಾ ತಂಡವು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ತನಿಖಾ ವರದಿಯನ್ನು ಸಲ್ಲಿಸಿದೆ. ತನಿಖಾ ಸಂಸ್ಥೆಗಳು ಈಗ ಅದರ ತನಿಖೆ ನಡೆಸಲಿವೆ. ಅದರಲ್ಲಿ ಯಾರು ದೋಷಿಗಳೆಂದು ಕಂಡುಬರುತ್ತಾರೋ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗುವುದು. ಒಂದು ವೇಳೆ ಅದರಲ್ಲಿ ಯಾರದಾದರೂ ಹೆಸರು ಬಿಟ್ಟು ಹೋಗಿದ್ದರೆ, ಅದನ್ನು ಪೂರಕ ದೋಷಾರೋಪ ಪಟ್ಟಿಯಲ್ಲಿ ಸೇರಿಸಬಹುದಾಗಿದೆ ಎಂದರು.

ಮಂದಿರಗಳು ಸರಕಾರದ ನಿಯಂತ್ರಣದಿಂದ ಮುಕ್ತವಾಗಬೇಕು !

ನ್ಯಾಯವಾದಿ ಜೈನ್ ಅವರು, ಸದ್ಯದ  ಪರಿಸ್ಥಿತಿಯಲ್ಲಿ ದೇವಸ್ಥಾನಗಳು ಸರಕಾರದ ನಿಯಂತ್ರಣದಿಂದ ಮುಕ್ತವಾಗಬೇಕು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಇಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಸಮಾಜದ ಚಿಂತಕರ ಸಹಭಾಗಿತ್ವವಿರುವಾಗ, ಇಂತಹ ಆರೋಪಗಳು ಮುಂಚೂಣಿಗೆ ಬರುತ್ತಿದ್ದರೆ ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಆದ್ದರಿಂದ ಈ ಪ್ರಕರಣದ ತನಿಖೆಯು ಅತ್ಯಂತ ಗಂಭೀರವಾಗಿ ನಡೆಯಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಎಂತಹ ವ್ಯವಸ್ಥೆಯನ್ನು ನಿರ್ಮಿಸಬೇಕು ?, ಎಂಬುದರ ಕುರಿತು ದೇಶದ ಎಲ್ಲಾ ಸರಕಾರಗಳು ಮತ್ತು ಸಮಾಜವು ಒಟ್ಟಾಗಿ ಯೋಚಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.