ಹಿಜಾಬ್ ಧರಿಸದೆ ಹಾಡಿದ್ದಕ್ಕೆ ಇರಾನ್ ಗಾಯಕಿಗೆ 74 ಚಾಟಿ ಏಟುಗಳ ಶಿಕ್ಷೆ!

(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ವಸ್ತ್ರ)

ಟೆಹ್ರಾನ್ (ಇರಾನ್) – ಇರಾನ್‌ನಲ್ಲಿ ಹಿಜಾಬ್ ಧರಿಸದೆ ಹಾಡಿದ್ದಕ್ಕಾಗಿ ಗಾಯಕಿಯೊಬ್ಬಳಿಗೆ 74 ಚಾವಟಿ ಏಟುಗಳ ಶಿಕ್ಷೆಯನ್ನು ವಿಧಿಸಲಾಗಿದೆ. ಇದರೊಂದಿಗೆ ಎರಡು ವರ್ಷಗಳ ಕಾಲ ಇರಾನ್ ತೊರೆಯುವುದನ್ನು ನಿಷೇಧಿಸಲಾಗಿದೆ ಮತ್ತು ಎರಡು ವರ್ಷಗಳ ಕಾಲ ಸಂಗೀತ ಕಾರ್ಯಕ್ರಮ ನಡೆಸುವುದಕ್ಕೂ ನಿಷೇಧ ಹೇರಲಾಗಿದೆ.
29 ವರ್ಷದ ಪರಸ್ತೂ ಅಹಮದಿ ಎಂಬಾಕೆಯೇ ಈ ಶಿಕ್ಷೆಗೆ ಒಳಗಾದ ಗಾಯಕಿ. ‘ಲೈವ್‌ಸ್ಟ್ರೀಮ್ ಪರ್ಫಾರ್ಮೆನ್ಸ್’ (ಆನ್‌ಲೈನ್ ಪ್ರಸ್ತುತಿ) ಕಾರ್ಯಕ್ರಮವೊಂದರಲ್ಲಿ ಆಕೆ ಹಿಜಾಬ್ ಧರಿಸದ ಕಾರಣ ಈ ಶಿಕ್ಷೆ ನೀಡಲಾಗಿದೆ. ಇರಾನ್‌ನ ನ್ಯಾಯಾಲಯವೊಂದು ಈ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದ ನಿರ್ಮಾಣ ತಂಡದ 8 ಸದಸ್ಯರು ಹಾಗೂ ಸಂಗೀತಗಾರರೂ ದೋಷಿಗಳೆಂದು ಪರಿಗಣಿಸಿದೆ. ಪ್ರಪಂಚದಾದ್ಯಂತದ ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಕಲಾವಿದರು ಈ ನಿರ್ಧಾರವನ್ನು ಖಂಡಿಸಿದ್ದಾರೆ.

1. ಡಿಸೆಂಬರ್ 2024 ರಂದು ನಡೆದ ಒಂದು ಸಂಗೀತ ಕಾರ್ಯಕ್ರಮದ ಬಳಿಕ ಈ ಪ್ರಕರಣ ದಾಖಲಾಗಿದೆ. ಈ ಕಾರ್ಯಕ್ರಮದಲ್ಲಿ ಅಹಮದಿ ಹಿಜಾಬ್ ಧರಿಸದೆ ದೇಶಭಕ್ತಿ ಗೀತೆಯೊಂದನ್ನು ಹಾಡಿದ್ದರು. ಈ ಸಂಗೀತ ಕಾರ್ಯಕ್ರಮ ಆಕೆಯ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಿತ್ತು. ಕಾರ್ಯಕ್ರಮ ಪ್ರಸಾರವಾದ ನಂತರ ಅಹಮದಿ ಮತ್ತು ಹಲವು ಸಂಗೀತಗಾರರನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.

2. ಇರಾನ್ ಗಾಯಕಿಗೆ ಶಿಕ್ಷೆ ವಿಧಿಸಿದ್ದಕ್ಕಾಗಿ ವಿಶ್ವದಾದ್ಯಂತ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಅಮೆರಿಕದ ‘ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಇನ್ ಇರಾನ್’ ನ ನಿರ್ದೇಶಕಿ ಬಹಾರ್ ಗಂಧೇಹರಿ ಈ ಬಗ್ಗೆ ಮಾತನಾಡಿ, ಇರಾನ್‌ನಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಇಂತಹ ಶಿಕ್ಷೆ ಪುನಃ ನೆನಪಿಸುತ್ತದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಶಬರಿಮಲೈ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಹಗಲಿರುಳು ಕೂಗಾಡುವ ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ಅಥವಾ ಮಹಿಳಾ ಹಕ್ಕುಗಳು ಎಂಬುದು ಕೇವಲ ಅವರ ಮುಖವಾಡವಾಗಿದ್ದು, ಮೂಲಭೂತವಾಗಿ ಹಿಂದೂ ಧರ್ಮವನ್ನು ವಿರೋಧಿಸುವುದೇ ಅವರ ಅಜೆಂಡಾ ಆಗಿದೆಯೇ?