Andhra Pradesh Gold : ಆಂಧ್ರಪ್ರದೇಶದಲ್ಲಿ 50 ಟನ್ ಚಿನ್ನದ ದಾಸ್ತಾನು ಪತ್ತೆಯಾಗಿರುವ ದಾವೆ

ನವ ದೆಹಲಿ – ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜೊನಾಗಿರಿ ಗ್ರಾಮದಲ್ಲಿ ಬೃಹತ್ ಪ್ರಮಾಣದ ಚಿನ್ನದ ದಾಸ್ತಾನು ಇರುವ ಅಂದಾಜು ವ್ಯಕ್ತಪಡಿಸಲಾಗಿದೆ. ಅಧಿಕಾರಿಗಳ ಪ್ರಕಾರ ಈ ಪ್ರದೇಶದಲ್ಲಿ ಬರೋಬ್ಬರಿ 50 ಟನ್ ಚಿನ್ನ ಇರುವ ಸಾಧ್ಯತೆಯಿದೆ. ರಾಜ್ಯದಲ್ಲಿ ಚಿನ್ನದ ಗಣಿಗಾರಿಕೆಗಾಗಿ ಜೊನಾಗಿರಿ, ರಾಮಗಿರಿ, ಜವ್ವಕುಲಾ ಮತ್ತು ಚಿಗುರುಕುಂಟಾ ಬಿಸ್ನಾತಮ್ ಪ್ರದೇಶಗಳನ್ನು ಸೇರಿಸಿಕೊಳ್ಳಲಾಗಿದೆ. ‘ಈ ಎಲ್ಲಾ ಸ್ಥಳಗಳ ಪೈಕಿ ಜೊನಾಗಿರಿ ಯೋಜನೆಯಿಂದ ಅತ್ಯಂತ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ’, ಎಂದು ಆಂಧ್ರಪ್ರದೇಶ ಸರಕಾರದ ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಖೇಶ ಕುಮಾರ ಮೀಣಾ ತಿಳಿಸಿದ್ದಾರೆ.

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, 10 ವರ್ಷಗಳ ಹಿಂದೆ ಜೊನಾಗಿರಿಯಲ್ಲಿ ಚಿನ್ನದ ಗಣಿಗಾರಿಕೆಗಾಗಿ 1 ಸಾವಿರ 500 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಇದುವರೆಗೆ ಕೇವಲ 500 ಎಕರೆ ಪ್ರದೇಶದಲ್ಲಿ ಮಾತ್ರ ಸಂಶೋಧನಾ ಕಾರ್ಯ ಪೂರ್ಣಗೊಂಡಿದ್ದು, ಈ ಪ್ರದೇಶದಿಂದ ಸುಮಾರು 13 ಟನ್ ಚಿನ್ನ ಸಿಗುವ ಅಂದಾಜಿದೆ. ಇನ್ನುಳಿದ 1 ಸಾವಿರ ಎಕರೆ ಪ್ರದೇಶದ ಸಂಪೂರ್ಣ ಅಧ್ಯಯನ ಮತ್ತು ಗಣಿಗಾರಿಕೆ ಬಾಕಿ ಇದೆ. ಈ ಸಂಪೂರ್ಣ ಪ್ರದೇಶದ ಶೋಧ ಕಾರ್ಯ ಪೂರ್ಣಗೊಂಡ ನಂತರ ಕೇವಲ ಜೊನಾಗಿರಿ ಪರಿಸರದಿಂದಲೇ ಸುಮಾರು 50 ಟನ್ ಚಿನ್ನ ಸಿಗಬಹುದು ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗಣಿ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿರುವಂತೆ, ಚಿನ್ನದ ಗಣಿಗಾರಿಕೆಯು ಅತ್ಯಂತ ವೆಚ್ಚದಾಯಕ ಮತ್ತು ತಾಂತ್ರಿಕ ಕೌಶಲ್ಯದ ಅಗತ್ಯವಿರುವ ಕೆಲಸವಾಗಿದೆ. ಆದ್ದರಿಂದ ಸರಕಾರವು ಟೆಂಡರ್ ಪ್ರಕ್ರಿಯೆಯನ್ನು ನಡೆಸಿ ಈ ಕೆಲಸವನ್ನು ಖಾಸಗಿ ಕಂಪನಿಗಳಿಗೆ ವಹಿಸಿಕೊಟ್ಟಿದೆ.

1 ಟನ್ ಅದಿರನ್ನು ಸಂಸ್ಕರಿಸಿದಾಗ ಸಿಗುವುದು ಕೇವಲ 1 ಗ್ರಾಂ ಚಿನ್ನ!

ಹಿಂದೆ ಒಂದು ಟನ್ ಮಣ್ಣು ಅಥವಾ ಅದಿರು ಪದಾರ್ಥದಿಂದ ಅಂದಾಜು 3 ಗ್ರಾಂ ಚಿನ್ನ ಸಿಗುತ್ತಿತ್ತು; ಆದರೆ ಈಗ ಒಂದು ಟನ್ ಅದಿರು ಪದಾರ್ಥವನ್ನು ಸಂಸ್ಕರಿಸಿದ ನಂತರ ಕೇವಲ 1 ಗ್ರಾಂ ಚಿನ್ನ ಸಿಗುತ್ತಿದೆ. ತಜ್ಞರ ಪ್ರಕಾರ, ಒಂದು ಟನ್ ಅದಿರು ಪದಾರ್ಥದಿಂದ 0.8 ಗ್ರಾಂ ಗಿಂತ ಕಡಿಮೆ ಚಿನ್ನ ಸಿಕ್ಕರೆ, ಗಣಿಗಾರಿಕೆ ಮತ್ತು ಸಂಸ್ಕರಣೆಯ ಮೇಲಿನ ವೆಚ್ಚವೂ ವಸೂಲಾಗುವುದಿಲ್ಲ. ಆದ್ದರಿಂದ ಚಿನ್ನದ ಗಣಿಗಳು ಆರ್ಥಿಕ ದೃಷ್ಟಿಯಿಂದ ಲಾಭದಾಯಕವಾಗಿರುವುದು ಅತ್ಯಂತ ಪ್ರಮುಖವೆನಿಸುತ್ತದೆ.