ದೇವಭೂಮಿಯನ್ನು ಕಸದಿಂದ ತುಂಬಿಸಬೇಡಿ! – ಭಾರತೀಯರಿಗೆ ವಿದೇಶಿ ಮಹಿಳೆಯ ಮನವಿ

  • ಹಿಮಾಚಲ ಪ್ರದೇಶದ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಲ್ಲಿನ ಕಸವನ್ನು ಕಂಡು ಭಾರತೀಯರಿಗೆ ವಿದೇಶಿ ಮಹಿಳೆಯ ಮನವಿ

  • ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸುವಂತೆಯೂ ಮನವಿ

ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶವನ್ನು ‘ದೇವಭೂಮಿ’ ಎಂದು ಕರೆಯಲಾಗುತ್ತದೆ. “ನಾನು ನಿಮ್ಮ ದೇಶ, ಸಂಸ್ಕೃತಿ ಮತ್ತು ದೇವಾಲಯಗಳನ್ನು ಗೌರವಿಸುತ್ತೇನೆ; ಆದರೆ ಇಲ್ಲಿ ಎಲ್ಲೆಡೆ ಮದ್ಯದ ಬಾಟಲಿಗಳು ಮತ್ತು ಕಸ ಬಿದ್ದಿರುವುದನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ. ಇಂತಹ ಸುಂದರವಾದ ಪ್ರಕೃತಿ ರಮಣೀಯ ಸ್ಥಳದ ಈ ಸ್ಥಿತಿಯನ್ನು ನೋಡುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ದೇವಭೂಮಿಯನ್ನು ಕಸದಿಂದ ತುಂಬಿಸಬೇಡಿ,” ಎಂದು ವಿದೇಶಿ ಮಹಿಳಾ ಪ್ರವಾಸಿಯೊಬ್ಬರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈ ಮಹಿಳೆ ಯಾವ ದೇಶದವರು ಎಂಬುದು ಸ್ಪಷ್ಟವಾಗಿಲ್ಲ. ಮಹಿಳೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಅರಣ್ಯ ಪ್ರದೇಶದ ವಿಡಿಯೋವನ್ನು ತೋರಿಸುತ್ತಾ ಈ ಮಹಿಳೆ ಕಸದ ರಾಶಿಯ ಕಡೆಗೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ. “ಇಲ್ಲಿನ ಪರಿಸರ ಮತ್ತು ದೃಶ್ಯಗಳು ಅತ್ಯಂತ ಸುಂದರವಾಗಿವೆ; ಆದರೆ ಎಲ್ಲೆಡೆ ಬಿದ್ದಿರುವ ಬಾಟಲಿಗಳು ಹಾಗೂ ಪ್ಲಾಸ್ಟಿಕ್‌ನಿಂದಾಗಿ ಅದರ ಸೌಂದರ್ಯ ಮಸುಕಾಗುತ್ತಿದೆ. ಹೀಗೆ ಮಾಡುವುದನ್ನು ನಿಲ್ಲಿಸಿ,” ಎಂದು ಅವರು ಹೇಳಿದ್ದಾರೆ. ಪ್ರವಾಸಿಗರು ಮತ್ತು ಸ್ಥಳೀಯ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಮಹಿಳೆ, “ಕಸವನ್ನು ನಿಮ್ಮ ಸ್ವಂತ ವಾಹನದಲ್ಲೇ ಇಟ್ಟುಕೊಳ್ಳಿ. ಮನೆ, ಹೋಟೆಲ್ ಅಥವಾ ಕಸದ ಬುಟ್ಟಿ ಸಿಕ್ಕಿದ ನಂತರವೇ ಅದನ್ನು ವಿಲೇವಾರಿ ಮಾಡಿ. ನಿಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸಿ,” ಎಂದು ಕೊನೆಯಲ್ಲಿ ಕೈ ಮುಗಿದು ವಿನಂತಿಸಿದ್ದಾರೆ.

ಸಂಪಾದಕೀಯ ನಿಲುವು

ಒಬ್ಬ ವಿದೇಶಿ ಮಹಿಳೆ ಇದನ್ನು ಹೇಳಬೇಕಾಗಿ ಬಂದಿರುವುದು ಭಾರತೀಯರಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿ! ಸ್ವಾತಂತ್ರ್ಯದ ನಂತರದ ಇಂದಿನವರೆಗಿನ ಸರಕಾರಗಳು ಜನರಲ್ಲಿ ಶಿಸ್ತನ್ನು ಬೆಳೆಸದ ಹಿನ್ನೆಲೆಯೇ ಇದಕ್ಕೆ ಕಾರಣ!