ಅಶ್ಲೀಲತೆ ಹರಡುವ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳಿಗೆ ಸೆನ್ಸಾರ್ ಮಂಡಳಿಯ ಪೂರ್ವಾನ್ಮತಿ ಕಡ್ಡಾಯಗೊಳಿಸಿ!

ಶಿವಸೇನಾ ಶಾಸಕಿ ಡಾ. ಮನೀಷಾ ಕಾಯಂದೆ ಅವರಿಂದ ಮುಖ್ಯಮಂತ್ರಿಗಳಿಗೆ ಒತ್ತಾಯ

(‘ಸ್ಟ್ಯಾಂಡ್-ಅಪ್ ಕಾಮಿಡಿ’ ಎಂದರೆ ‘ಏಕಪಾತ್ರ ಅಭಿನಯದ ಹಾಸ್ಯ ಕಾರ್ಯಕ್ರಮ’)

ಮುಂಬಯಿ – ಕಲೆಯ ಹೆಸರಿನಲ್ಲಿ ಅಶ್ಲೀಲ ಮತ್ತು ಅನೈತಿಕ ಸಂಭಾಷಣೆಗಳನ್ನು ಒಳಗೊಂಡ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳನ್ನು ನಡೆಸುವ ಪ್ರಣಿತ್ ಮೋರೆ ಮತ್ತು ಇತರರ ವಿರುದ್ಧ ಮೊಕದ್ದಮೆ ದಾಖಲಿಸಬೇಕು, ಹಾಗೆಯೇ ಇಂತಹ ಕಾರ್ಯಕ್ರಮಗಳನ್ನು ‘ಸೆನ್ಸಾರ್’ (ಪರಿನಿರೀಕ್ಷಕ ಮಂಡಳಿ) ವ್ಯಾಪ್ತಿಗೆ ತರಬೇಕು ಎಂದು ಶಿವಸೇನೆಯ ವಿಧಾನ ಪರಿಷತ್ತಿನ ಮುಖ್ಯ ಸಚೇತಕರು (ಸಂಬಂಧಿತ ರಾಜಕೀಯ ಪಕ್ಷದ ಶಾಸನಸಭೆಯ ಜವಾಬ್ದಾರಿಯುತ ವ್ಯಕ್ತಿ) ಹಾಗೂ ವಕ್ತಾರರಾಗಿರುವ ಶಾಸಕಿ ಡಾ. ಮನೀಷಾ ಕಾಯಂದೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಈ ಪತ್ರದ ಪ್ರತಿಯನ್ನು ಶಾಸಕಿ (ಡಾ.) ಮನೀಷಾ ಕಾಯಂದೆ ಅವರು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೇಲಾರ್ ಅವರಿಗೂ ಕಳುಹಿಸಿದ್ದಾರೆ.

ಪತ್ರದಲ್ಲಿ ಡಾ. ಮನೀಷಾ ಕಾಯಂದೆ ಅವರು…

1. ಕಳೆದ ಕೆಲವು ದಿನಗಳ ಹಿಂದೆ ಪ್ರಣಿತ್ ಮೋರೆ ತನ್ನ ಕಾರ್ಯಕ್ರಮದಲ್ಲಿ ಮಾಡಿದ ಅಶ್ಲೀಲ ಸಂಭಾಷಣೆ ಮತ್ತು ಅವಹೇಳನಕಾರಿ ಹೇಳಿಕೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರವಾಗಿವೆ. ಈ ಹೇಳಿಕೆಗಳಿಂದಾಗಿ ವಿವಿಧ ಸರಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ದೇಹದಾನ ಅಥವಾ ಅಂಗಾಂಗ ದಾನ ಮಾಡುವವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಂಗಾಂಗ ದಾನದ ಅಭಿಯಾನದ ಮೇಲೆಯೂ ಇಂತಹ ಹೇಳಿಕೆಗಳು ತೀವ್ರ ನಕಾರಾತ್ಮಕ ಪರಿಣಾಮ ಬೀರಬಹುದು.

2. ಸಾಮಾಜಿಕ ಜಾಲತಾಣಗಳ ಮೇಲೆ ಪ್ರಭಾವ ಬೀರುವವರು ಮನರಂಜನೆ ಮತ್ತು ಕಲೆಯ ಹೆಸರಿನಲ್ಲಿ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಮೂಲಕ ಸಮಾಜದಲ್ಲಿ ಅಶ್ಲೀಲತೆಯನ್ನು ಹರಡುತ್ತಿದ್ದಾರೆ. ಏಕನಾಥ ಶಿಂದೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗಲೂ ಅವರ ಕುರಿತು ‘ಸ್ಟ್ಯಾಂಡ್-ಅಪ್ ಕಾಮಿಡಿ’ಯಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿತ್ತು.

3. ಈ ಕಾರ್ಯಕ್ರಮವನ್ನು ನಡೆಸಿದ ಪ್ರಣಿತ ಮೋರೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಸೆಜಲ್ ಪವಾರ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ; ಆದರೆ ಇಂತಹ ಪದೇ ಪದೇ ನಡೆಯುವ ಘಟನೆಗಳನ್ನು ಶಾಶ್ವತವಾಗಿ ತಡೆಯಲು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.”

ಏನಿದು ಪ್ರಕರಣ?

ಪ್ರಣಿತ್ ಮೋರೆ ಅವರ ಏಕಪಾತ್ರ ಹಾಸ್ಯ ಕಾರ್ಯಕ್ರಮದಲ್ಲಿ, ಮುಂಬಯಿನ ‘ಕೆಇಎಂ’ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಡಾ. ಸೆಜಲ್ ಪವಾರ್ ಎಂಬಾಕೆ ಆಸ್ಪತ್ರೆಗೆ ದೇಹದಾನದ ಮೂಲಕ ಬಂದಿದ್ದ ಪುರುಷರ ಶವಗಳ ಖಾಸಗಿ ಅಂಗಗಳ ಬಗ್ಗೆ ಅಶ್ಲೀಲ ಮತ್ತು ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದಳು. ಆಕೆಯ ಈ ಟಿಪ್ಪಣಿಗೆ ಪ್ರಣಿತ್ ನಕ್ಕು ಪ್ರೋತ್ಸಾಹ ನೀಡಿದ್ದನು. ಈ ಸಮಯದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ನಕ್ಕು ಪ್ರತಿಕ್ರಿಯಿಸಿದ್ದರು. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದಾಗ, ಎಲ್ಲಾ ವಲಯಗಳಿಂದ ತೀವ್ರ ಆಕ್ರೋಶ ಮತ್ತು ಟೀಕೆಗಳು ವ್ಯಕ್ತವಾದವು. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಆಸ್ಪತ್ರೆ ಆಡಳಿತ ಮಂಡಳಿಯು ಡಾ. ಸೆಜಲ್ ಪವಾರ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ.