ನಾಶಿಕ್: ಸಿಂಹಸ್ಥ ಕುಂಭಮೇಳದ ಧ್ವಜಸ್ತಂಭ ಶಿಲಾನ್ಯಾಸ ಪೂಜಾ ಸಮಾರಂಭ !

ಕುಂಭಮೇಳವನ್ನು ಯಶಸ್ವಿಗೊಳಿಸಲು ಎಲ್ಲರ ಸಹಭಾಗಿತ್ವ ಅಗತ್ಯ ! - ಗಿರೀಶ ಮಹಾಜನ, ಕುಂಭಮೇಳ ಸಚಿವ

ಪೂಜಾ ಸಮಾರಂಭದ ಸಂದರ್ಭದಲ್ಲಿ ಕುಂಭಮೇಳ ಸಚಿವ ಗಿರೀಶ ಮಹಾಜನ ಮತ್ತು ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಮಹಾರಾಜ್, ಹಾಗೂ ಇತರ ಸಂತ-ಮಹಂತರು ಮತ್ತು ಗಣ್ಯರು

ನಾಶಿಕ್ – ಇಲ್ಲಿ ಮುಂದಿನ ವರ್ಷ ನಡೆಯಲಿರುವ ಸಿಂಹಸ್ಥ ಕುಂಭಪರ್ವದ ಸಿದ್ಧತೆಯು ಧ್ವಜಸ್ತಂಭ ಶಿಲಾನ್ಯಾಸ ಪೂಜಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಮುಂಬರುವ ಕುಂಭಪರ್ವವನ್ನು ಸ್ವಚ್ಛ, ಸುರಕ್ಷಿತ ಮತ್ತು ಭವ್ಯ ರೂಪದಲ್ಲಿ ನಡೆಸಲು ಸರಕಾರ, ಆಡಳಿತ, ಸಾಧು-ಸಂತರು, ಮಹಂತರು, ವಿವಿಧ ಸಾಮಾಜಿಕ, ಧಾರ್ಮಿಕ ಸಂಸ್ಥೆಗಳು ಮತ್ತು ನಾಗರಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ. ಸಿಂಹಸ್ಥ ಕುಂಭಪರ್ವಕ್ಕಾಗಿ ದೇಶ-ವಿದೇಶಗಳಿಂದ ಬರುವ ಭಕ್ತರನ್ನು ಆದರದಿಂದ ಸತ್ಕರಿಸಲು ಎಲ್ಲರೂ ಮುಂದೆ ಬರಬೇಕೆಂದು ಕುಂಭಮೇಳ ಸಚಿವ ಗಿರೀಶ ಮಹಾಜನ ಕರೆ ನೀಡಿದರು. ಶ್ರೀ ಗಂಗಾ ಗೋದಾವರಿ ಪಂಚಕೋಠಿ (ತೀರ್ಥ) ಪುರೋಹಿತ ಸಂಘದ ಉಪಸ್ಥಿತಿಯಲ್ಲಿ ಶ್ರೀರಾಮನ ಜಯಘೋಷ ಮತ್ತು ವೇದಮಂತ್ರಗಳ ಪಠಣದೊಂದಿಗೆ ಸಿಂಹಸ್ಥ ಕುಂಭಪರ್ವದ ಧ್ವಜಸ್ತಂಭ ಶಿಲಾನ್ಯಾಸ ಪೂಜಾ ಸಮಾರಂಭವು ಕಮಲಾ ಏಕಾದಶಿಯ ಪವಿತ್ರ ದಿನದಂದು ನಡೆಯಿತು. ಸಚಿವ ಶ್ರೀ. ಮಹಾಜನ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಮಹಾರಾಜ್, ಮೇಯರ್ ಹಿಮಗೌರಿ ಆಡಕೆ-ಆಹೇರ, ಪೊಲೀಸ್ ಕಮಿಷನರ್ ಸಂದೀಪ್ ಕರ್ಣಿಕ್, ಕುಂಭಮೇಳ ಕಮಿಷನರ್ ಶೇಖರ್ ಸಿಂಗ್, ಪುರೋಹಿತ ಸಂಘದ ಸತೀಶ್ ಶುಕ್ಲ ಸೇರಿದಂತೆ ವಿವಿಧ ಅಖಾಡಾಗಳ ಪ್ರಮುಖ ಸಾಧು-ಸಂತರು, ಮಹಂತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಚಿವ ಮಹಾಜನ ಅವರು ಮಾತನಾಡಿ,

1. ಮುಂದಿನ ವರ್ಷದ ಸಿಂಹಸ್ಥ ಕುಂಭಪರ್ವದಲ್ಲಿ ಕಳೆದ ಕುಂಭಪರ್ವಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚು, ಅಂದರೆ 12 ಕೋಟಿಗೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದೆ. ಆದ್ದರಿಂದ ಕುಂಭಪರ್ವವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಸರಕಾರ, ಆಡಳಿತ ಮತ್ತು ನಾಗರಿಕರ ಮೇಲಿದೆ.

2. ಗೋದಾವರಿ ನದಿಯನ್ನು ಸ್ವಚ್ಛವಾಗಿಡಲು ವಿವಿಧ ಸಂಸ್ಥೆಗಳು ಮತ್ತು ಭಕ್ತಾದಿಗಳು ಮುಂದೆ ಬಂದಿದ್ದು, ಈ ಸ್ವಚ್ಛತೆಯು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿ ಮುಂದುವರಿಯಲಿದೆ.

3. ದೇಶ-ವಿದೇಶಗಳಿಂದ ಬರುವ ಭಕ್ತರನ್ನು ಸತ್ಕರಿಸಲು ಪ್ರತಿಯೊಬ್ಬ ನಾಶಿಕ್ ನಿವಾಸಿಯೂ ಸ್ವಯಂಸೇವಕರಾಗಿ ಮುಂದೆ ಬರಬೇಕು.

ಗಣ್ಯರ ಶುಭ ಹಸ್ತದಿಂದ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಗಂಗಾ ಗೋದಾವರಿಯನ್ನು ಪೂಜಿಸಲಾಯಿತು. ಶಂಖನಾದ ಮತ್ತು ಉಪಸ್ಥಿತರಿದ್ದವರ ಚಪ್ಪಾಳೆಯ ಸದ್ದಿನೊಂದಿಗೆ ಪೂಜಾ ಸಮಾರಂಭವು ಭಕ್ತಿಮಯ ವಾತಾವರಣದಲ್ಲಿ ನೆರವೇರಿತು.