ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ: ಶ್ರೀರಾಮ ಮಂದಿರಕ್ಕೆ ಇದುವರೆಗೆ 500 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ : Ayodhya Ram Mandir

ಶ್ರೀ ರಾಮ ಮಂದಿರ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಮಹೋತ್ಸವದಿಂದ ಇದುವರೆಗೆ 15 ಕೋಟಿಗೂ ಹೆಚ್ಚು ಜನರು ಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ ದೇವಸ್ಥಾನಕ್ಕೆ 500 ಕೋಟಿ ರೂಪಾಯಿಗಿಂತಲೂ ಹೆಚ್ಚು ದೇಣಿಗೆ ಬಂದಿದ್ದು, ಈ ಪೈಕಿ ಅಂದಾಜು 150 ಕೋಟಿ ರೂಪಾಯಿ ಕಾಣಿಕೆ ಪೆಟ್ಟಿಗೆಗಳಿಂದ ಹಾಗೂ ಉಳಿದ 350 ಕೋಟಿ ರೂಪಾಯಿ ಆನ್‌ಲೈನ್ ಮತ್ತು ಪ್ರತ್ಯಕ್ಷವಾಗಿ ಜಮೆಯಾಗಿದೆ. ಅದನ್ನು ಒಂದು ಪಾರದರ್ಶಕ ವ್ಯವಸ್ಥೆಯ ಮೂಲಕ ಸುರಕ್ಷಿತವಾಗಿ ಇಡಲಾಗಿದೆ. ಈ ದೇಣಿಗೆಗಳನ್ನು ಮಂದಿರದ ನಿರ್ವಹಣೆ, ಸೇವಾ ಕಾರ್ಯಗಳು ಮತ್ತು ಭವಿಷ್ಯದ ಯೋಜನೆಗಳಿಗಾಗಿ ಬಳಸಲಾಗುವುದು ಎಂದು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಸ್ಪಷ್ಟಪಡಿಸಿದೆ.

ಪ್ರತಿದಿನ ಸರಾಸರಿ 8 ರಿಂದ 10 ಲಕ್ಷ ರೂಪಾಯಿ ದೇಣಿಗೆ!

ಶ್ರೀರಾಮ ಮಂದಿರದಲ್ಲಿ ದೇಣಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸಲು 6 ದೊಡ್ಡ ಕಾಣಿಕೆ ಪೆಟ್ಟಿಗೆಗಳನ್ನು ಲಭ್ಯಗೊಳಿಸಲಾಗಿದೆ. ಇದಲ್ಲದೆ ಆವರಣದ ಇತರ ಮಂದಿರಗಳಲ್ಲೂ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದೆ. ದೇಣಿಗೆ ಸ್ವೀಕರಿಸಲು 4 ಕೌಂಟರ್‌ಗಳನ್ನೂ ಸ್ಥಾಪಿಸಲಾಗಿದೆ. ಅಲ್ಲಿ ಭಕ್ತರು ತಮ್ಮ ಶ್ರದ್ಧೆಗೆ ಅನುಗುಣವಾಗಿ ನಗದು ದೇಣಿಗೆಯನ್ನು ಜಮೆ ಮಾಡಬಹುದು ಮತ್ತು ತಕ್ಷಣವೇ ಗಣಕೀಕೃತ ರಶೀದಿಯನ್ನು ಪಡೆಯಬಹುದು. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಶ್ರೀರಾಮ ಮಂದಿರದಲ್ಲಿ ಪ್ರಸ್ತುತ ಪ್ರತಿದಿನ 8 ರಿಂದ 10 ಲಕ್ಷ ರೂಪಾಯಿ ದೇಣಿಗೆ ಜಮೆಯಾಗುತ್ತಿದೆ. ಸಂಪೂರ್ಣ ದೇಣಿಗೆ ಪ್ರಕ್ರಿಯೆಯ ಮೇಲೆ ಸಿಸಿಟಿವಿ ಮೂಲಕ ನಿಗಾ ಇಡಲಾಗುತ್ತದೆ.

ದೇಣಿಗೆಯ ಹಣ ಟ್ರಸ್ಟ್‌ನ ಖಾತೆಗೆ ಜಮೆಯಾಗುತ್ತದೆ!

ಲಭ್ಯವಿರುವ ಮಾಹಿತಿಯ ಪ್ರಕಾರ, ದೇಣಿಗೆಗಳ ಎಣಿಕೆಯ ನಂತರ ಈ ಹಣವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಾತೆಗೆ ಜಮೆ ಮಾಡಲಾಗುತ್ತದೆ. ಹಣವನ್ನು ಎಣಿಸಲು ಒಂದು ವಿಶೇಷ ವ್ಯವಸ್ಥೆಯನ್ನು ನೇಮಿಸಲಾಗಿದ್ದು, ಎರಡು ಪಾಳಿಗಳಲ್ಲಿ ನಿಯೋಜಿಸಲಾದ ಸಿಬ್ಬಂದಿ ಹಣವನ್ನು ಎಣಿಸುತ್ತಾರೆ. ಇದಲ್ಲದೆ ಟ್ರಸ್ಟ್ ನೇಮಿಸಿದ ಅಧಿಕಾರಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಕೂಡ ಸಹಾಯ ಮಾಡುತ್ತಾರೆ. ಹಣ ಎಣಿಸುವ ಸ್ಥಳವು ವಾಯ್ಸ್ ರೆಕಾರ್ಡಿಂಗ್ ಸೌಲಭ್ಯದೊಂದಿಗೆ ಆಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿದೆ.

ವರ್ಷದಲ್ಲಿ ಎರಡು ಬಾರಿ ಲೆಕ್ಕಪರಿಶೋಧನೆ ಮಾಡಲಾಗುತ್ತದೆ!

ಟ್ರಸ್ಟ್ ಆನ್‌ಲೈನ್, ಚೆಕ್, ಯುಪಿಐ ಮತ್ತು ಕಾಣಿಕೆ ಪೆಟ್ಟಿಗೆಗಳ ಮೂಲಕ ಬಂದ ದೇಣಿಗೆಗಳ ಅರ್ಧವಾರ್ಷಿಕ ಲೆಕ್ಕಪರಿಶೋಧನೆಯನ್ನು ಸಹ ಮಾಡುತ್ತದೆ. ಈ ಕೆಲಸಕ್ಕಾಗಿ ಸನದಿ ಲೆಕ್ಕಪರಿಶೋಧಕರನ್ನು ನೇಮಿಸಲಾಗಿದ್ದು, ಬ್ಯಾಂಕಿನ ಆಂತರಿಕ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಈ ಲೆಕ್ಕಪರಿಶೋಧನೆಯಲ್ಲಿ ಆದಾಯ ಮತ್ತು ವೆಚ್ಚದೊಂದಿಗೆ ಪ್ರತಿಯೊಂದು ರೂಪಾಯಿಯ ಲೆಕ್ಕವನ್ನು ಇಡಲಾಗುತ್ತದೆ.