ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !

ಕೆಲವು ಮಟ್ಟದಲ್ಲಿ ಸುಧಾರಣೆಯ ಪ್ರಯತ್ನಗಳು !

ಪಿಂಪರಿ-ಚಿಂಚವಡ – ಇಲ್ಲಿನ ವಲ್ಲಭನಗರ ಬಸ್ ನಿಲ್ದಾಣವು ಕೈಗಾರಿಕಾ ಮತ್ತು ವಸತಿ ಪ್ರದೇಶದ ಪ್ರಯಾಣಿಕರಿಗಾಗಿ ಪ್ರಮುಖ ಕೇಂದ್ರವಾಗಿದೆ; ಆದರೆ ಸದ್ಯ ಈ ನಿಲ್ದಾಣದಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಪ್ರಯಾಣಿಕರು ಮಾನಸಿಕ ತೊಂದರೆ ಅನುಭವಿಸಬೇಕಾಗಿ ಬಂದಿದೆ.

ನಿಲ್ದಾಣದಲ್ಲಿ ಸದ್ಯ ಇರುವ ನೀರಿನ ವ್ಯವಸ್ಥೆ

1. ಕುಡಿಯುವ ನೀರಿನ ವ್ಯವಸ್ಥೆಯು ಅಪೇಕ್ಷಿತ ಮಟ್ಟದಲ್ಲಿಲ್ಲ. ಅಲ್ಲಿನ ನೀರು ‘ಕೈ ತೊಳೆಯುವುದಕ್ಕೋ ಅಥವಾ ಕುಡಿಯುವುದಕ್ಕೋ?’ ಎಂಬುದು ತಿಳಿಯುವುದಿಲ್ಲ. ಈ ಬಗ್ಗೆ ವಿಚಾರಿಸಿದಾಗ ಅಲ್ಲಿದ್ದ ಸಿಬ್ಬಂದಿಯೊಬ್ಬರು, ಶೀಘ್ರದಲ್ಲೇ 3 ಜಲಶೀತಕಗಳನ್ನು (ವಾಟರ್ ಕೂಲರ್) ಅಳವಡಿಸಲಾಗುವುದು, ಎಂದು ಹೇಳಿದರು. ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಪ್ರತ್ಯಕ್ಷವಾಗಿ ಅಲ್ಲಿ ಕುಡಿಯುವ ನೀರು ಲಭ್ಯವಿಲ್ಲದ ಕಾರಣ ಪ್ರಯಾಣಿಕರಿಗೆ ದುಡ್ಡು ಕೊಟ್ಟು ನೀರನ್ನು ಖರೀದಿಸುವುದರ ಹೊರತು ಬೇರೆ ಮಾರ್ಗವಿಲ್ಲ.

2. ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಬಿದ್ದಿರುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಕಸ, ಕೊಳಕು ಮತ್ತು ಧೂಳಿನ ಸಾಮ್ರಾಜ್ಯವಿದೆ. ಆ ಬಗ್ಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಅವರು, ನಾವು ನಮ್ಮ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇವೆ; ಆದರೆ ಇದರಲ್ಲಿ ಪ್ರಯಾಣಿಕರ ಸಹಕಾರವೂ ನಮಗೆ ಅಪೇಕ್ಷಿತವಾಗಿದೆ. ಕೆಲವರಿಗೆ ನಾವು ಇಲ್ಲಿ ತೆರೆದ ಸ್ಥಳದಲ್ಲಿ ಶೌಚ ಮಾಡಬೇಡಿ, ಸುಲಭ ಶೌಚಾಲಯ ಅಲ್ಲಿ ಇದೆ ಎಂದು ಹೇಳಬೇಕಾಗುತ್ತದೆ. ಉಗುಳಬೇಡಿ, ಪ್ಲಾಸ್ಟಿಕ್ ಎಸೆಯಬೇಡಿ, ಅದಕ್ಕಾಗಿ ಕಸದ ಬುಟ್ಟಿ ಇಡಲಾಗಿದೆ ಎಂದು ತಿಳಿಸಬೇಕಾಗುತ್ತದೆ, ಎಂದರು. (ಹೀಗೆ ಮಾಡುವ ಪ್ರಯಾಣಿಕರಿಗೆ ಕಠಿಣ ದಂಡ ವಿಧಿಸುವುದೇ ಇದಕ್ಕಿರುವ ಏಕೈಕ ಉಪಾಯವಾಗಿದೆ ! – ಸಂಪಾದಕರು) ಕೆಲವು ದಿನಗಳ ಹಿಂದೆ ಇತರ ವೃತ್ತಪತ್ರಿಕೆಗಳಲ್ಲಿ ನಿಲ್ದಾಣದ ಅಸ್ವಚ್ಛತೆಯ ಕುರಿತು ವಾರ್ತೆ ಬಂದಿತ್ತು. ಅದರಲ್ಲಿ ಡಿಪೋ ಮ್ಯಾನೇಜರ್ ವೈಶಾಲಿ ಕಾಂಬಳೆಯವರು, `ಪ್ರಯಾಣಿಕರಿಂದ ಪಡೆಯಲಾಗುವ ಸ್ವಚ್ಛತಾ ಸರ್ ಚಾರ್ಜ ಬಸ್ ನಿಲ್ದಾಣದ ಸ್ವಚ್ಛತೆಗಾಗಿ ಅಲ್ಲದೇ ಬಸ್‌ಗಳ ಸ್ವಚ್ಛತೆಗಾಗಿ ಇದೆ. ಲಭ್ಯವಿರುವ ಸಿಬ್ಬಂದಿಗಳನ್ನು ಬಳಸಿಕೊಂಡು ನಾವು ನಿಲ್ದಾಣವನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತೇವೆ ಎಂದಿದ್ದರು. ಈ ವಾರ್ತೆಯಲ್ಲಿ ಪ್ರಯಾಣಿಕರೂ ಸಹ ಅಸ್ವಚ್ಛತೆಯ ಬಗ್ಗೆ ಅಸಂತೋಷ ವ್ಯಕ್ತಪಡಿಸಿದ್ದರು.

3. ದೂರದೂರದ ಪ್ರಯಾಣದ ಪ್ರಯಾಣಿಕರಿಗೆ ಬಸ್ಸಿಗಾಗಿ ಕಾಯುತ್ತಿರುವಾಗ ವಿಶ್ರಮಿಸಲು ಹಕ್ಕಿನ ವಿಶ್ರಾಂತಿ ಗೃಹವೂ ಇಲ್ಲ.

4. ಬಸ್ ನಿಲ್ದಾಣದಲ್ಲಿರುವ ಮಹಿಳೆಯರಿಗಾಗಿನ ‘ಶಿಶುಪಾಲನಾ ಕೊಠಡಿ’ (ಸಣ್ಣ ಮಕ್ಕಳಿಗೆ ಹಾಲುಣಿಸಲು ಮಹಿಳೆಯರಿಗಾಗಿ ಇರುವ ಕೊಠಡಿ) ಸಾಮಾನ್ಯವಾಗಿ ಮುಚ್ಚಿರುತ್ತದೆ; ಆದರೆ ಯಾವುದೇ ಮಹಿಳೆಗೆ ಅದರ ಉಪಯೋಗ ಪಡೆಯಬೇಕಾಗಿದ್ದರೆ, ಅದು ಮುಚ್ಚಿರುವುದರಿಂದ ಅವರಿಗೆ ತಿಳಿಯುವುದಿಲ್ಲ. ಆದಾಗ್ಯೂ ಅದರ ಅವಶ್ಯಕತೆ ಯಾರಿಗಾದರೂ ಇದ್ದರೆ, ಅದರ ಕೀಲಿ ಎಲ್ಲಿ ಲಭ್ಯವಿರುತ್ತದೆ ಎಂಬ ಮಾಹಿತಿಯನ್ನು ನೀಡುವ ಫಲಕವನ್ನು ಅಳವಡಿಸುವುದು ಅಗತ್ಯವಾಗಿದೆ.

ಸರಕಾರದ ಕಡೆಯಿಂದ ಆಗುತ್ತಿರುವ ಸಕಾರಾತ್ಮಕ ಬದಲಾವಣೆಗಳು !

ಒಂದೆಡೆ ಕೆಲವು ಗಂಭೀರ ಲೋಪದೋಷಗಳಿದ್ದರೂ, ಮತ್ತೊಂದೆಡೆ ಕೆಲವು ವಿಷಯಗಳಲ್ಲಿ ಆಡಳಿತಾತ್ಮಕ ತತ್ಪರತೆಯೂ ಕಂಡುಬರುತ್ತಿದೆ.

1. ದುರಸ್ತಿ ಮತ್ತು ಸ್ವಚ್ಛತೆ : ಬಸ್ ನಿಲ್ದಾಣದಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಸ್ತುತ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಹಾಗೆಯೇ, ಹಿಂದಿನ ದಿನಗಳಿಗೆ ಹೋಲಿಸಿದರೆ ಶೌಚಾಲಯಗಳ ಸ್ವಚ್ಛತೆಯನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ.

2. ಸಂವಹನ ವ್ಯವಸ್ಥೆ ಕಾರ್ಯಾರಂಭ : ನಿಲ್ದಾಣದಲ್ಲಿ ಡಿಪೋ ವ್ಯವಸ್ಥಾಪಕರು ಮತ್ತು ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ. ವಿಶೇಷವೆಂದರೆ ಈ ಸಂಖ್ಯೆಗಳಿಗೆ ಸಂಪರ್ಕಿಸಿದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಂಶಯಗಳನ್ನು ಪರಿಹರಿಸಿದ್ದಾರೆ.

3. ನಿಯೋಜಿತ ವಾಹನ ನಿಲ್ದಾಣ ವ್ಯವಸ್ಥೆ : ಖಾಸಗಿ ಗುತ್ತಿಗೆದಾರರ ಮೂಲಕ ವಾಹನ ನಿಲ್ದಾಣದ ಯೋಗ್ಯ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದ್ದು, ದ್ವಿಚಕ್ರ ವಾಹನಗಳಿಗೆ 10 ರೂಪಾಯಿ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 20 ರೂಪಾಯಿಗಳಂತೆ ಕನಿಷ್ಟ ಶುಲ್ಕವನ್ನು ವಿಧಿಸಲಾಗುತ್ತಿದೆ.

4. ಇತರ ಸೌಲಭ್ಯಗಳು : ನಿಲ್ದಾಣದಲ್ಲಿ ವೇಳಾಪಟ್ಟಿಯನ್ನು ಎದ್ದು ಕಾಣುವಂತೆ ಹಾಕಲಾಗಿದೆ. ಉಪಹಾರ ಗೃಹದ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಸದ್ಯ ಆ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಹಿಂಭಾಗದಲ್ಲಿ ಮಾಡಲಾಗಿದೆ. ಚಾಲಕರ-ನಿರ್ವಾಹಕರ ವಿಶ್ರಾಂತಿಗಾಗಿಯೂ ಹೊಸ ಸೌಲಭ್ಯವನ್ನು ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ.

ಸಂಪಾದಕೀಯ ನಿಲುವು

ರಾಜ್ಯ ಸಾರಿಗೆ ಮಹಾಮಂಡಳಿಯ ಆಡಳಿತಕ್ಕೆ ಈ ಮೂಲಭೂತ ಸಮಸ್ಯೆ ಕಾಣಿಸುತ್ತಿಲ್ಲವೇ? ಅಥವಾ ಕೇವಲ ಕಾಗದದ ಮೇಲೆ ಸೌಲಭ್ಯಗಳನ್ನು ತೋರಿಸಿ ಆಡಳಿತವು ಪ್ರಯಾಣಿಕರ ದಾರಿ ತಪ್ಪಿಸುತ್ತಿದೆಯೇ ?