ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!

ಪಂಢರಪುರ – ಶ್ರೀ ವಿಠ್ಠಲನ ಮೂರ್ತಿಯು ವಾರಕರಿ ಸಂಪ್ರದಾಯಕ್ಕೆ ಅತ್ಯಂತ ಪ್ರಮುಖವಾಗಿದ್ದು, ಮೂರ್ತಿಯು ನಿರಂತರವಾಗಿ ಸವೆದುಹೋಗುತ್ತಿರುವ ಕಾರಣ ನೀಡಿ ಮಹಾಪೂಜೆಯನ್ನು ನಿಲ್ಲಿಸಲಾಗಿದೆ. ಅಲ್ಲದೆ, ಇದುವರೆಗೆ ಮೂರು ಬಾರಿ ರಾಸಾಯನಿಕ ಪ್ರಕ್ರಿಯೆಯ ಮೂಲಕ ಮೂರ್ತಿಯ ಸವೆತವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿತ್ತು; ಆದರೆ ಈ ರಾಸಾಯನಿಕ ಲೇಪನವು ನಿಷ್ಪ್ರಯೋಜಕವಾಗಿದ್ದು, ಇದರಿಂದ ಮೂರ್ತಿಗೆ ಹಾನಿಯಾಗುತ್ತಿದೆ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲೂ ಶ್ರೀ ವಿಠ್ಠಲನ ಮೂರ್ತಿಗೆ ರಾಸಾಯನಿಕ ಲೇಪನ ಮಾಡಬಾರದೆಂದು ವಾರಕರಿ ಸಂಪ್ರದಾಯದ ಪ್ರಮುಖರು ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕಠಿಣವಾಗಿ ಆಗ್ರಹಿಸಿದರು. ಮೂರ್ತಿಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ವಾರಕರಿ ಸಂಪ್ರದಾಯದ ಒಂದು ಸಮಿತಿಯನ್ನು ಸ್ಥಾಪಿಸಬೇಕು, ಆ ಮೂಲಕ ದೇಶಾದ್ಯಂತದ ತಜ್ಞ ಮೂರ್ತಿ ಸಂಶೋಧಕರನ್ನು ಆಹ್ವಾನಿಸಬೇಕು. ಮೂರ್ತಿ ಲೇಪನ ತಜ್ಞರ ಅಭಿಪ್ರಾಯಗಳನ್ನು ಪಡೆದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಈ ಹಿಂದೆ ಮಹಾರಾಷ್ಟ್ರ ಮಂದಿರ ಮಹಾಸಂಘ ಕೂಡ ಈ ರಾಸಾಯನಿಕ ಲೇಪನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

(ವಾಸ್ತವವಾಗಿ, ದೇವತೆಗಳ ಮೂರ್ತಿಯ ಮೇಲೆ ಯಾವುದೇ ರೀತಿಯ ರಾಸಾಯನಿಕ ಲೇಪನ ಮಾಡುವುದು ಸಂಪೂರ್ಣವಾಗಿ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಸಮಸ್ಯೆಯ ಮೂಲವನ್ನು ಪರಿಹರಿಸದೆ, ರಾಸಾಯನಿಕ ಲೇಪನದಂತಹ ಮೇಲ್ನೋಟದ ಕ್ರಮಗಳನ್ನು ಕೈಗೊಳ್ಳುವುದರಿಂದ ದೇವತೆಯ ಮೂರ್ತಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ರಾಸಾಯನಿಕ ಲೇಪನಕ್ಕೆ ಮಂದಿರ ಮಹಾಸಂಘ ಮತ್ತು ವಾರಕರಿ ಸಂಪ್ರದಾಯದ ತೀವ್ರ ವಿರೋಧವಿದ್ದರೂ ಸಹ, ಆಡಳಿತ ಮಂಡಳಿಯು ಪದೇ-ಪದೇ ಲೇಪನಕ್ಕಾಗಿ ಏಕೆ ಒತ್ತಾಯಿಸುತ್ತಿದೆ? ಈ ಹಿಂದೆ ಮೂರು ಬಾರಿ ಮಾಡಿದ ಲೇಪನದ ವರದಿಯನ್ನು ಮಂದಿರ ಸಮಿತಿಯು ಬಹಿರಂಗಪಡಿಸಬೇಕು, ಹಾಗೆಯೇ ಈ ಲೇಪನ ಮಾಡಿದ್ದಕ್ಕೆ ಯಾರು ಜವಾಬ್ದಾರರು? ಎಂಬುದನ್ನೂ ಸಹ ಘೋಷಿಸಬೇಕು! – ಸಂಪಾದಕರು)

ಈ ಸಭೆಯಲ್ಲಿ ಸೋಲಾಪುರದ ಜಿಲ್ಲಾಧಿಕಾರಿ ಕಾರ್ತಿಕೇಯನ್ ಎಸ್., ಮಂದಿರ ಸಮಿತಿಯ ಸಹ-ಅಧ್ಯಕ್ಷರಾದ ಹ.ಭ.ಪ. ಗಹಿನಾಥ್ ಔಸೇಕರ್ ಮಹಾರಾಜ್, ‘ವಾರಕರಿ ಪಾಈಕ್ ಸಂಘ’ ಸಂಸ್ಥಾಪಕರಾದ ಹ.ಭ.ಪ. ದೇವವ್ರತ್ (ರಾಣಾ) ಮಹಾರಾಜ್ ವಾಸ್ಕರ್, ಹ.ಭ.ಪ. ಭಾಗವತ್ ಮಹಾರಾಜ್ ಶಿರವಳಕರ್, ಹ.ಭ.ಪ. ರಘುನಾಥ್ ಮಹಾರಾಜ್ ಕಬೀರ್, ಹ.ಭ.ಪ. ರಾಮಕೃಷ್ಣ ಮಹಾರಾಜ್ ವೀರ್, ಹ.ಭ.ಪ. ಬಾಪು ಮಹಾರಾಜ್ ಉಖಳೀಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಕುರಿತು ವಾರಕರಿ ಸಂಪ್ರದಾಯವು ದೇವಸ್ಥಾನ ಸಮಿತಿಗೆ ವಿವರವಾದ ಮನವಿಯನ್ನು ಸಲ್ಲಿಸಿದ್ದು, ಈ ಲೇಪನದಿಂದಾಗಿ ಕೊಲ್ಹಾಪುರದ ಶ್ರೀ ಮಹಾಲಕ್ಷ್ಮಿ ದೇವಿಯ ಮೂರ್ತಿಗೆ ಹೇಗೆ ಹಾನಿಯಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದೆ. ಈ ಸಭೆಯಲ್ಲಿ ವಾರಕರಿ ಸಂಪ್ರದಾಯದ ಪ್ರಮುಖರು ರಾಸಾಯನಿಕ ಲೇಪನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಪರಿಸ್ಥಿತಿಯಲ್ಲೂ ‘ಪದಸ್ಪರ್ಶ ದರ್ಶನ’ (ಪಾದ ಮುಟ್ಟಿ ನಮಸ್ಕರಿಸುವ ದರ್ಶನ) ವನ್ನು ಸ್ಥಗಿತಗೊಳಿಸಬಾರದೆಂದು ಬಲವಾಗಿ ಒತ್ತಾಯಿಸಿದರು.

ಆಷಾಢಕ್ಕೂ ಮುನ್ನ ಲೇಪನ ಮಾಡಲು ಯತ್ನ! – ಕಾರ್ತಿಕೇಯನ್ ಎಸ್., ಜಿಲ್ಲಾಧಿಕಾರಿ

ಸಭೆಯ ನಂತರ ಮಾತನಾಡಿದ ಸೋಲಾಪುರದ ಜಿಲ್ಲಾಧಿಕಾರಿ ಕಾರ್ತಿಕೇಯನ್ ಎಸ್. ಅವರು, ‘‘ಈ ವಿಷಯಕ್ಕೆ ಸಂಬಂಧಿಸಿದಂತೆ ವಾರಕರಿ ಸಂಪ್ರದಾಯದ ಪ್ರಮುಖ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಅವರ ಬೇಡಿಕೆಯಂತೆ ಎಪಾಕ್ಸಿ ಲೇಪನ (ರಾಸಾಯನಿಕ ಲೇಪನ) ಮಾಡುವುದಿಲ್ಲ, ಬದಲಿಗೆ ‘ಸ್ಟೋನ್ ಪೌಡರ್’ (ಕಲ್ಲಿನ ಪುಡಿ) ಬಳಸಿ ಮೂರ್ತಿಯ ಸವೆತವನ್ನು ಸರಿಪಡಿಸಲಾಗುವುದು. ಇದಕ್ಕಾಗಿ ದೇಶಾದ್ಯಂತದ ಉತ್ತಮ ಸಂಶೋಧಕರು ಮತ್ತು ತಜ್ಞರನ್ನು ಆಹ್ವಾನಿಸಲಾಗುವುದು. ಮುಂದಿನ ವಾರ ಶ್ರೀ ವಿಠ್ಠಲನ ಮೂರ್ತಿಯನ್ನು ಸಂಶೋಧಕರು ಹಾಗೂ ಮಹಾರಾಜರ ಸಮ್ಮುಖದಲ್ಲಿ ಪರಿಶೀಲನೆಗೆ ಒಳಪಡಿಸಲಾಗುವುದು. ಆಷಾಢ ಏಕಾದಶಿಗಿಂತ ಮೂರು ದಿನಗಳ ಮುಂಚಿತವಾಗಿ ಪದಸ್ಪರ್ಶ ದರ್ಶನವನ್ನು ಸ್ಥಗಿತಗೊಳಿಸಿ, ಮುಖದರ್ಶನವನ್ನು ಮುಂದುವರಿಸುವ ಮೂಲಕ, ಮೂರ್ತಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸವೆತವನ್ನು ಸರಿಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು’’ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ರಾಸಾಯನಿಕ ಲೇಪನದಂತಹ ಧರ್ಮಶಾಸ್ತ್ರವಿರೋಧಿ ಕಾರ್ಯಕ್ಕಾಗಿ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯು ಪದೇ ಪದೇ ಹಠ ಹಿಡಿಯುತ್ತಿರುವುದೇಕೆ?