ದೇವಸ್ಥಾನ ಇನಾಮ್ ನಿರ್ಮೂಲನಾ ಮಸೂದೆಯ ವಿರುದ್ಧ ಮುಖ್ಯಮಂತ್ರಿಯವರಿಂದ ಹಿಡಿದು ತಹಶೀಲ್ದಾರರವರೆಗೆ ೩೦೦ ಕ್ಕೂ ಹೆಚ್ಚು ಮನವಿಗಳು!

  • ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನಾ ಕರಡು ಅಧಿನಿಯಮ’ದ ವಿರುದ್ಧ ರಾಜ್ಯದ ಸಾವಿರಾರು ದೇವಸ್ಥಾನಗಳು ಒಗ್ಗೂಡಿದವು!

  • ಹಿಂದೂ ದೇವಸ್ಥಾನಗಳ ಭೂಮಿಯನ್ನು ಕಿತ್ತುಕೊಳ್ಳುವ ಸರಕಾರದ ನೀತಿಯ ವಿರುದ್ಧ ತೀವ್ರ ಅಸಮಾಧಾನ!

ದೇವಸ್ಥಾನ ಇನಾಮ್ ನಿರ್ಮೂಲನಾ ಮಸೂದೆಯ ವಿರುದ್ಧ ಮುಖ್ಯಮಂತ್ರಿ ಮಾ. ದೇವೇಂದ್ರ ಫಡ್ನವಿಸ್ ಅವರಿಗೆ ಮನವಿ ಸಲ್ಲಿಸುತ್ತಿರುವ ಶ್ರೀ. ಸುನಿಲ ಘನವಟ, ಜೊತೆಯಲ್ಲಿ ಭಾಜಪ ಶಾಸಕ ಶ್ರೀ. ಪ್ರತಾಪ ಅಡಸಡ ಮತ್ತು ಶಾಸಕ ಶ್ರೀ. ವಿಕ್ರಮ ಪಾಚಪುತೆ.

ಮುಂಬಯಿ – ಮಹಾರಾಷ್ಟ್ರ ಸರಕಾರದ ಕಂದಾಯ ಮತ್ತು ಅರಣ್ಯ ಇಲಾಖೆಯು ಪ್ರಸ್ತಾಪಿಸಿರುವ ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನಾ ಕರಡು ಅಧಿನಿಯಮ, ೨೦೨೬’ ಇದು ರಾಜ್ಯದ ಸಾವಿರಾರು ಹಿಂದೂ ದೇವಸ್ಥಾನಗಳ ಭೂಮಿಯನ್ನು ಕಿತ್ತುಕೊಳ್ಳುವ ಮತ್ತು ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುವಂತಹದ್ದಾಗಿದೆ. ಸರಕಾರವು ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಈ ಕಾಯಿದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿರುವುದರಿಂದ, ಈ ಅನ್ಯಾಯದ ಕಾಯಿದೆಯ ವಿರುದ್ಧ ಮಹಾರಾಷ್ಟ್ರ ದೇವಸ್ಥಾನ ಮಹಾಸಂಘದೊಂದಿಗೆ ರಾಜ್ಯದ ಅಷ್ಟವಿನಾಯಕ ದೇವಸ್ಥಾನಗಳು ಹಾಗೂ ಎಲ್ಲಾ ಪ್ರಮುಖ ದೇವಸ್ಥಾನಗಳ ೧ ಸಾವಿರಕ್ಕೂ ಹೆಚ್ಚು ವಿಶ್ವಸ್ತರು, ದೇವಸ್ಥಾನದ ಪ್ರತಿನಿಧಿಗಳು ಮತ್ತು ಹಿಂದೂ ಸಂಘಟನೆಗಳು ಒಟ್ಟಾಗಿವೆ.

ಎಡಭಾಗದಿಂದ ಸುನೀಲ್ ಘನವಟ್ ಮತ್ತು ಮನವಿಯ ವಿಷಯವನ್ನು ಅರ್ಥಮಾಡಿಕೊಳ್ಳುತ್ತಿರುವ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ

ಕಾಯಿದೆಯನ್ನು ಖಂಡಿಸಲು ರಾಜ್ಯಾದ್ಯಂತದ ದೇವಸ್ಥಾನದ ವಿಶ್ವಸ್ತರು ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅನೇಕ ಸಚಿವರು, ರಾಜ್ಯ ಸಚಿವರು, ಶಾಸಕರು, ಹಾಗೂ ವಿವಿಧ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಪ್ರಾಂತ್ಯಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಏಕಕಾಲದಲ್ಲಿ ೩೦೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಮನವಿಗಳನ್ನು ಸಲ್ಲಿಸಿದ್ದಾರೆ. ‘ಹಿಂದೂ ದೇವಸ್ಥಾನಗಳ ಅಸ್ತಿತ್ವವನ್ನು ಮುಗಿಸುವ ಈ ಮಾರಕ ಕಾಯಿದೆಯನ್ನು ಸರಕಾರವು ಬೇಷರತ್ತಾಗಿ ತಕ್ಷಣವೇ ಹಿಂಪಡೆಯಬೇಕು’, ಎಂದು ಈ ಮನವಿಗಳ ಮೂಲಕ ಒಕ್ಕೊರಲಿನಿಂದ ಒತ್ತಾಯಿಸಲಾಗಿದೆ. ಈ ಜನಾಗ್ರಹವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯದ ಅನೇಕ ಶಾಸಕರು ಕೂಡ ಜನಭಾವನೆಗಳಿಗೆ ಗೌರವ ನೀಡಿ, ‘ಬರುವ ಮಳೆಗಾಲದ ಅಧಿವೇಶನದಲ್ಲಿ ಈ ಕಾಯಿದೆಯನ್ನು ವಿರೋಧಿಸುತ್ತೇವೆ’, ಎಂಬ ದೃಢವಾದ ನಿಲುವನ್ನು ದೇವಸ್ಥಾನದ ಪ್ರತಿನಿಧಿಗಳ ಮುಂದೆ ಇಟ್ಟಿದ್ದಾರೆ.

ಮನವಿಯಲ್ಲಿ…,

೧. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಐತಿಹಾಸಿಕ ರಾಜಮನೆತನದವರು ದೇವಸ್ಥಾನಗಳ ನೈವೇದ್ಯ, ಅನ್ನದಾಸೋಹ ಮತ್ತು ಉತ್ಸವಗಳಿಗಾಗಿ ನೂರಾರು ಎಕರೆ ಭೂಮಿಯನ್ನು ‘ಇನಾಮ್’ ಆಗಿ ದೇವಸ್ಥಾನಗಳ ಹೆಸರಿಗೆ ಮಾಡಿದ್ದರು.

೨. ‘ಮಹಾರಾಷ್ಟ್ರ ದೇವಸ್ಥಾನ ಇನಾಮ್ ನಿರ್ಮೂಲನಾ ಕರಡು ಅಧಿನಿಯಮ’ ಈ ಪ್ರಸ್ತಾಪಿತ ಕಾಯಿದೆಯ ಕಲಂ ೩ ಮತ್ತು ೪ ರ ಮೂಲಕ ಈ ಎಲ್ಲಾ ಇನಾಮ್‌ ಗಳನ್ನು ರದ್ದುಗೊಳಿಸಿ ದೇವರಿಗೆ ದಾನ ಮಾಡಿದ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಸಂಚು ರೂಪಿಸಲಾಗಿದೆ. ಈ ಕಾಯಿದೆಯ ಕಲಂ ೧ (ಉಪಕಲಂ ೨) ಅತ್ಯಂತ ತಾರತಮ್ಯದಿಂದ ಕೂಡಿದೆ. ಈ ಮೂಲಕ ವಕ್ಫ್ ಬೋರ್ಡ್‌ನ ಭೂಮಿಯನ್ನು ಈ ಕಾಯಿದೆಯಿಂದ ಸಂಪೂರ್ಣವಾಗಿ ಹೊರಗಿಟ್ಟು ವಿಶೇಷ ರಕ್ಷಣೆಯನ್ನು ನೀಡಲಾಗಿದೆ.

೩. ಹಿಂದೂ ದೇವಸ್ಥಾನಗಳ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ಯಾವ ವಕ್ಫ್ ಸಾವಿರಾರು ಹಿಂದೂಗಳ ಭೂಮಿಯನ್ನು ಕಾನೂನುಬಾಹಿರವಾಗಿ ಕಬಳಿಸಿದೆಯೋ, ಆ ವಕ್ಫನ ಭೂಮಿಗೆ ರಕ್ಷಣೆ ನೀಡಲಾಗುತ್ತಿದೆ. ಈ ಧಾರ್ಮಿಕ ತಾರತಮ್ಯವನ್ನು ಹಿಂದೂಗಳ ಮತಗಳಿಂದಲೇ ಆರಿಸಿ ಬಂದ ಸರಕಾರವು ಮಾಡುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

೪. ಈ ಕರಡಿನ ಕಲಂ ೧೮ ರ ಪ್ರಕಾರ, ಕಂದಾಯ ಅಧಿಕಾರಿಗಳ ಯಾವುದೇ ಮನಸೋ ಇಚ್ಛೆ ನಿರ್ಧಾರದ ವಿರುದ್ಧ ಭಕ್ತರು ಅಥವಾ ವಿಶ್ವಸ್ತರು ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅವಕಾಶವಿರುವುದಿಲ್ಲ. ಹಿಂದೂಗಳಿಗಾಗಿ ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತಿದೆ. ದೇವಸ್ಥಾನಗಳ ಭೂಮಿಯಲ್ಲಿರುವ ಕಾನೂನುಬಾಹಿರ ಒತ್ತುವರಿಗಳನ್ನು ತೆರವುಗೊಳಿಸುವ ಬದಲಿಗೆ, ಜನವರಿ ೧, ೨೦೧೧ ಕ್ಕಿಂತ ಮುಂಚಿನ ಒತ್ತುವರಿದಾರರಿಗೆ ನೇರವಾಗಿ ಮಾಲೀಕತ್ವದ ಹಕ್ಕನ್ನು ನೀಡುವುದು ಎಂದರೆ ದೇವಸ್ಥಾನಗಳ ಪವಿತ್ರ ಆಸ್ತಿಯನ್ನು ಕಾನೂನುಬದ್ಧವಾಗಿ ಲೂಟಿ ಮಾಡಿದಂತೆಯೇ ಸರಿ.

ಸಾಂಗ್ಲಿಯಲ್ಲಿ ಉಪಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ದೇವಸ್ಥಾನದ ವಿಶ್ವಸ್ತರು !

ಕಾಯಿದೆಯ ವಿರುದ್ಧ ಕಂದಾಯ ಸಚಿವರೊಂದಿಗೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಭರವಸೆ!

ಈ ರಾಜ್ಯವ್ಯಾಪಿ ಆಂದೋಲನವನ್ನು ಗಂಭೀರವಾಗಿ ಪರಿಗಣಿಸಿದ ರತ್ನಗಿರಿಯ ಉಸ್ತುವಾರಿ ಸಚಿವ ಉದಯ ಸಾಮಂತ ಅವರು ‘ಈ ಕಾಯಿದೆಯನ್ನು ಜಾರಿಗೊಳಿಸಬಾರದು’ ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ. ದೇವಸ್ಥಾನ ಮಹಾಸಂಘದ ರಾಷ್ಟ್ರೀಯ ಸಂಘಟಕರಾದ ಶ್ರೀ. ಸುನಿಲ ಘನವಟ ಅವರು ಸ್ವತಃ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಪ್ರತ್ಯಕ್ಷವಾಗಿ ಭೇಟಿ ಮಾಡಿ ಕಾಯಿದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ‘ಕಂದಾಯ ಸಚಿವರೊಂದಿಗೆ ತಕ್ಷಣವೇ ಸಭೆ ಕರೆಯುತ್ತೇವೆ’, ಎಂದು ತಿಳಿಸಿದ್ದಾರೆ.