ಎಬಿವಿಪಿಯ ವಿದ್ಯಾರ್ಥಿಗಳಿಂದ ಇತಿಹಾಸ ವಿಭಾಗದ ಹೊರಗೆ ಪ್ರತಿಭಟನೆ

ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ‘ಬ್ರಾಹ್ಮಣವಾದಿ ಪಿತೃಪ್ರಭುತ್ವ’ ಪ್ರಶ್ನೆಗೆ ವಿವಾದ!

ವಾರಾಣಸಿ (ಉತ್ತರ ಪ್ರದೇಶ) – ಬನಾರಸ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಎಂ.ಎ. ಇತಿಹಾಸದ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಬ್ರಾಹ್ಮಣರಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಯೊಂದರ ಸುತ್ತ ವಿವಾದ ಸೃಷ್ಟಿಯಾಗಿದೆ. ಈ ವಿಷಯವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಹೊರಗೆ ಪ್ರತಿಭಟನೆ ನಡೆಸಿದರು. ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಸುತಾಪಾ ದಾಸರವರು ಈ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದ್ದರು; ಆದರೆ ವಿವಾದದ ನಂತರ ಅವರ ಕಡೆಯಿಂದ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸಂಬಂಧಪಟ್ಟ ಪ್ರಶ್ನೆಯನ್ನು ಮರುಪರಿಶೀಲಿಸಿ ತಪ್ಪಿತಸ್ಥರ ಜವಾಬ್ದಾರಿಯನ್ನು ನಿಗದಿಪಡಿಸಬೇಕು ಮತ್ತು ಭವಿಷ್ಯದಲ್ಲಿ ಯಾವುದೇ ರೀತಿಯ ವೈಚಾರಿಕ ಪೂರ್ವಾಗ್ರಹ ಪೀಡಿತ ಪ್ರಶ್ನೆಗಳು ಪರೀಕ್ಷಾ ಪ್ರಕ್ರಿಯೆಯ ಭಾಗವಾಗದಂತೆ ಗಮನ ಹರಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಒತ್ತಾಯಿಸಿದೆ.

ಪರೀಕ್ಷೆಯಲ್ಲಿದ್ದ ಪ್ರಶ್ನೆ ಏನು ?

ಎಂ.ಎ. (ಇತಿಹಾಸ) ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ‘ವುಮೆನ್ ಇನ್ ಮಾಡರ್ನ್ ಇಂಡಿಯನ್ ಹಿಸ್ಟರಿ’ (ಆಧುನಿಕ ಭಾರತೀಯ ಇತಿಹಾಸದಲ್ಲಿ ಮಹಿಳೆಯರು) ವಿಷಯದ ಅಡಿಯಲ್ಲಿ ಕೇಳಲಾದ, ‘ಬ್ರಾಹ್ಮಣಶಾಹಿ ಪಿತೃಪ್ರಭುತ್ವದ ವ್ಯವಸ್ಥೆಯು ಪ್ರಾಚೀನ ಭಾರತದಲ್ಲಿ ಮಹಿಳೆಯರ ಪ್ರಗತಿಗೆ ಹೇಗೆ ಅಡ್ಡಿಯುಂಟುಮಾಡಿತು?’ ಎಂಬ ಪ್ರಶ್ನೆಯಿಂದ ವಿವಾದ ಆರಂಭವಾಗಿದೆ. ವಿಶ್ವವಿದ್ಯಾಲಯದ ಅನುಸಾರ, ‘ಬ್ರಾಹ್ಮಣಶಾಹಿ ಪಿತೃಪ್ರಭುತ್ವ’ ಎಂಬ ವಿಷಯವು ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದ್ದು, ಇದೇ ಆಧಾರದ ಮೇಲೆ ಪ್ರಶ್ನೆಯನ್ನು ಕೇಳಲಾಗಿತ್ತು. ಇತಿಹಾಸ ವಿಷಯದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಜ್ಞಾನ, ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ವಿವಿಧ ದೃಷ್ಟಿಕೋನಗಳ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂತಹ ವಿಷಯಗಳನ್ನು ಬೋಧಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಯಾವುದೇ ಪರಿಕಲ್ಪನೆಯ ಮೇಲೆ ಶೈಕ್ಷಣಿಕ ಚರ್ಚೆ ಮತ್ತು ಭಿನ್ನಾಭಿಪ್ರಾಯಗಳಿರುವುದು ಸಹಜ ಎಂದೂ ಆಡಳಿತ ಮಂಡಳಿ ಹೇಳಿದೆ.