ಭೋಜಶಾಲೆಗಾಗಿ ಸಂಘರ್ಷ ಮಾಡುತ್ತಿರುವ ಹಿಂದೂತ್ವವಾದಿಗಳು, ಅರ್ಜಿದಾರರು ಮುಂತಾದವರು ‘ಸನಾತನ ಪ್ರಭಾತ’ದ ಬಳಿ ವ್ಯಕ್ತಪಡಿಸಿದ ಅಭಿಪ್ರಾಯಗಳು!

ಗುರುದೇವರು ಒಂದು ದಿವ್ಯ ಶಕ್ತಿಯ ರೂಪದಲ್ಲಿ ಬೆಂಬಲವಾಗಿ ನಿಂತಿದ್ದರು! – ಭೋಜಶಾಲಾ ಮುಕ್ತಿ ಆಂದೋಲನದ ಅಂದಿನ ಪ್ರಮುಖರಾದ ಸ್ವಾಮಿ ರಾಮ ಚೈತನ್ಯಜಿ (ನವಲ್ ಕಿಶೋರ್ ಶರ್ಮಾ)

ಇದೊಂದು ದಿವ್ಯ ಸಾಧನೆ; ಯಾರೂ ಜೊತೆಯಲ್ಲಿ ಇಲ್ಲದಿದ್ದಾಗ, ಎಲ್ಲರೂ ಕೈಬಿಟ್ಟಿದ್ದಾಗ, ತಾಯಿ ಭಗವತಿಯ ಈ ಯಜ್ಞದಲ್ಲಿ ನಿಮ್ಮಂತಹ ಸಂಗಾತಿಗಳು (ಹಿಂದೂ ಜನಜಾಗೃತಿ ಸಮಿತಿ) ಮತ್ತು ಪ.ಪೂ. ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಮಾರ್ಗದರ್ಶಕರು ಹಾಗೂ ಆಶೀರ್ವಾದ ನೀಡುವವರ ರೂಪದಲ್ಲಿ ಬೆಂಬಲವಾಗಿ ನಿಂತರು, ಈ ಬಗ್ಗೆ ಕೃತಜ್ಞತೆ ಸಲ್ಲಿಸಲು ಪದಗಳಿಲ್ಲ. ಪ.ಪೂ. ಗುರುದೇವರು ಒಂದು ದಿವ್ಯ ಶಕ್ತಿಯ ರೂಪದಲ್ಲಿ ಬೆಂಬಲವಾಗಿ ನಿಂತಿದ್ದರು, ಇದು ಅದೇ ಶಕ್ತಿಯ ಪ್ರಸಾದ (ಆಶೀರ್ವಾದ) ಆಗಿದೆ!

ಭೋಜಶಾಲಾ ಈಗ ಸಂಪೂರ್ಣವಾಗಿ ಹಿಂದೂಗಳ ದೇವಾಲಯ ! – ಅರ್ಜಿದಾರ ಕುಲದೀಪ್ ತಿವಾರಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಭೋಜಶಾಲಾ ಪ್ರಕರಣದ ಐತಿಹಾಸಿಕ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ, ಈ ಪ್ರಕರಣದ ಪ್ರಮುಖ ಅರ್ಜಿದಾರರು ಮತ್ತು ಲಕ್ಷ್ಮಣಪುರಿಯ ಪ್ರಖರ ಹಿಂದುತ್ವವಾದಿ ಶ್ರೀ. ಕುಲದೀಪ್ ತಿವಾರಿ ಅವರು ನ್ಯಾಯಾಲಯದ ಮುಂದೆ ಮಂಡಿಸಿದ ಪುರಾವೆಗಳು ಮತ್ತು ನಿರ್ಧಾರದ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಅವರು, “ಈ ತೀರ್ಪು ತರ್ಕ ಮತ್ತು ಸತ್ಯದ ಆಧಾರದ ಮೇಲೆ ಸಿಕ್ಕಿರುವ ವಿಜಯವಾಗಿದೆ” ಎಂದು ಹೇಳಿದರು.

೨ ಅರ್ಜಿಗಳು ಮತ್ತು ಕಾನೂನು ಹೋರಾಟ

ಈ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತಾ ತಿವಾರಿ ಅವರು, “ನಮ್ಮ ಪರವಾಗಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು” ಎಂದರು. ಮೊದಲನೇ ಅರ್ಜಿ ‘ಕುಲದೀಪ್ ತಿವಾರಿ ವಿರುದ್ಧ ಕೇಂದ್ರ ಸರಕಾರ’ (ಕ್ರಮಾಂಕ ೧೦೪೮೪) ಮತ್ತು ಎರಡನೇ ಅರ್ಜಿ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್ ವಿರುದ್ಧ ಕೇಂದ್ರ ಸರಕಾರ’ (ಕ್ರಮಾಂಕ ೧೦೪೯೭) ಆಗಿತ್ತು. ಈ ಎರಡೂ ಅರ್ಜಿಗಳನ್ನು ೨ ಮೇ ೨೦೨೨ ರಂದು ಒಂದೇ ದಿನದಂದು ಸಲ್ಲಿಸಲಾಗಿತ್ತು.

ಐತಿಹಾಸಿಕ ಮತ್ತು ಶಾಸ್ತ್ರೀಯ ಪುರಾವೆಗಳು

ನ್ಯಾಯಾಲಯದಲ್ಲಿ ಹಾಜರುಪಡಿಸಿದ ಪುರಾವೆಗಳ ಬಗ್ಗೆ ಮಾತನಾಡುತ್ತಾ ತಿವಾರಿ ಅವರು, ಈ ಹೋರಾಟ ೪ ವರ್ಷಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ಹಿಂದೂ ಸಮಾಜದ ವತಿಯಿಂದ ಮಧ್ಯಪ್ರದೇಶ ಸರಕಾರದ ರಾಜಪತ್ರ, ಕಾನೂನು ದಾಖಲೆಗಳು ಮತ್ತು ಅನೇಕ ಪ್ರಮುಖ ಪುಸ್ತಕಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು ಎಂದು ಸ್ಪಷ್ಟಪಡಿಸಿದರು. “ನಾವು ರಾಜಾ ಭೋಜ ಬರೆದ ‘ಸಮರಾಂಗಣ ಸೂತ್ರಧಾರ’ ಎಂಬ ಪುಸ್ತಕವನ್ನು ನ್ಯಾಯಾಲಯಕ್ಕೆ ನೀಡಿದೆವು. ಈ ಪುಸ್ತಕವು ಪರಮಾರ ವಂಶದ ವಾಸ್ತುಶಿಲ್ಪ ಹೇಗಿರಬೇಕು ಎಂಬುದರ ಮೇಲೆ ಆಧಾರಿತವಾಗಿದೆ. ಇದರಲ್ಲಿ ಮೂರ್ತಿಗಳ ರಚನೆ, ದೇವಾಲಯದ ರಚನೆ ಮತ್ತು ಭವನಗಳ ಸ್ವರೂಪವನ್ನು ಸ್ಪಷ್ಟಪಡಿಸಲಾಗಿದೆ” ಎಂದು ತಿವಾರಿ ಅವರು ಹೇಳಿದರು.

ಅವರು ಮಾತು ಮುಂದುವರೆಸುತ್ತಾ, “ಭೋಜಶಾಲಾ ಕೇವಲ ಒಂದು ದೇವಾಲಯವಾಗಿರದೆ, ಅದು ಒಂದು ಪ್ರಖ್ಯಾತ ಸಂಸ್ಕೃತ ವಿಶ್ವವಿದ್ಯಾಲಯ (ಸರಸ್ವತಿ ಕಂಠಾಭರಣ) ಆಗಿತ್ತು, ಅಲ್ಲಿ ೫೦೦ ಕ್ಕೂ ಹೆಚ್ಚು ಆಚಾರ್ಯರು ಶಿಕ್ಷಣ ನೀಡುತ್ತಿದ್ದರು. ರಾಜಾ ಭೋಜ ಅವರನ್ನು ಸರಸ್ವತಿ ಮಾತೆಯ ವರಪುತ್ರ ಎಂದು ಪರಿಗಣಿಸಲಾಗುತ್ತದೆ, ಅವರು ಸ್ವತಃ ೮೪ ಗ್ರಂಥಗಳನ್ನು ರಚಿಸಿದ್ದಾರೆ. ನಾವು ಮೇರುತುಂಗ ಅವರು ೧೩೦೫ ನೇ ಇಸವಿಯಲ್ಲಿ ಬರೆದ ‘ಪ್ರಬಂಧ ಚಿಂತಾಮಣಿ’ ಮತ್ತು ‘ಆರ್ಟ್ ಆಫ್ ಪರಮಾರ್ ಆಫ್ ಮಾಳ್ವಾ’ ದಂತಹ ಅನೇಕ ಪುರಾವೆಗಳನ್ನು ನೀಡಿದೆವು, ಇವುಗಳನ್ನು ನ್ಯಾಯಾಲಯವು ಸ್ವೀಕರಿಸಿತು” ಎಂದರು.

ನ್ಯಾಯಾಲಯದ ಐತಿಹಾಸಿಕ ತೀರ್ಪು

ನ್ಯಾಯಾಲಯದ ತೀರ್ಪನ್ನು ಓದುತ್ತಾ ತಿವಾರಿ ಅವರು, ಸುಮಾರು ಒಂದೂವರೆ ತಿಂಗಳ ಕಾಲ ಪ್ರತಿದಿನ ೨-೨ ಗಂಟೆಗಳ ಕಾಲ ಇದರ ಬಗ್ಗೆ ವಿಚಾರಣೆ ನಡೆಯಿತು. ಪುರಾವೆಗಳ ಆಧಾರದ ಮೇಲೆ ಭೋಜಶಾಲಾ ಒಂದು ಹಿಂದೂ ದೇವಾಲಯವೇ ಎಂಬುದು ಸಾಬೀತಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಾಲಯವು ೨೦೦೩ ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಆದೇಶವನ್ನು ರದ್ದುಗೊಳಿಸಿದೆ, ಇದರಲ್ಲಿ ಮುಸಲ್ಮಾನರಿಗೆ ನಮಾಜ್ ಮಾಡಲು ಅನುಮತಿ ನೀಡಲಾಗಿತ್ತು. ನ್ಯಾಯಾಲಯವು ಈ ಆದೇಶವನ್ನು ಸಂವಿಧಾನ ವಿರೋಧಿ ಎಂದು ತೀರ್ಮಾನಿಸಿದ್ದು, ಈಗ ಅಲ್ಲಿ ನಮಾಜ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. “ಈಗ ಇದು ಸಂಪೂರ್ಣವಾಗಿ ಹಿಂದೂಗಳ ದೇವಾಲಯವಾಗಿದೆ, ಮುಸಲ್ಮಾನರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಹೇಳುತ್ತಾ ತಿವಾರಿ ಅವರು ತೀರ್ಪಿನ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು.

ಭೋಜಶಾಲೆಯ ತೀರ್ಪು ಕೇವಲ ದೇವಾಲಯದ್ದಲ್ಲ, ಬದಲಿಗೆ ‘ಸಭ್ಯತೆಯ ಹೇಳಿಕೆ’! – ಲೇಖಕ ಸಂದೀಪ್ ಸಿಂಗ್

ಮುಂಬಯಿ – ಭೋಜಶಾಲಾ ತೀರ್ಪಿನ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಸಂಬಂಧಿಸಿದ ಪ್ರಸಿದ್ಧ ಲೇಖಕ ಸಂದೀಪ್ ಸಿಂಗ್ ಅವರು ಹಿಂದೂ ಪರಂಪರೆ ಮತ್ತು ದೇವಾಲಯಗಳ ಪುನರುತ್ಥಾನದ ಬಗ್ಗೆ ‘ಸನಾತನ ಪ್ರಭಾತ’ದೊಂದಿಗೆ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ‘ಟೆಂಪಲ್ ಎಕನಾಮಿಕ್ಸ್’ ಮತ್ತು ‘ಅ ಡಿಕೇಡ್ ಫಾರ್ ಮಂದಿರ್’ ಎಂಬ ಗ್ರಂಥಗಳ ಲೇಖಕ ಸಂದೀಪ್ ಸಿಂಗ್ ಅವರ ಪ್ರಕಾರ, ಭೋಜಶಾಲೆಯ ಮುಕ್ತಿಯು ಕೇವಲ ಒಂದು ಸ್ಥಳವನ್ನು ಮರಳಿ ಪಡೆಯುವುದಲ್ಲ, ಬದಲಾಗಿ ಇದು ಒಂದು ‘ಸಭ್ಯತೆಯ ಹೇಳಿಕೆ’ ಆಗಿದೆ.

ಸಿಂಗ್ ಅವರು ಮಾತು ಮುಂದುವರೆಸುತ್ತಾ…,

ನಿಷ್ಕ್ರಿಯತೆಯನ್ನು ಬಿಡಿ

ಹಿಂದೂಗಳು ಈಗ ಕೇವಲ ಪ್ರೇಕ್ಷಕರಾಗಿ ಉಳಿಯುವುದನ್ನು ನಿಲ್ಲಿಸಬೇಕು. ನಮ್ಮ ಪರಂಪರೆ, ಗುರುತು ಮತ್ತು ಪವಿತ್ರ ಸ್ಥಳಗಳ ರಕ್ಷಣೆಗಾಗಿ ಹಿಂದೂಗಳು ಈಗ ದೃಢವಾಗಿ ನಿಲ್ಲುವ ಸಮಯ ಬಂದಿದೆ.

ದೇವಾಲಯಗಳ ಮರುಹಕ್ಕು!

ನಾಶವಾದ, ಅತಿಕ್ರಮಣಕ್ಕೊಳಗಾದ ಅಥವಾ ಭಕ್ತರಿಗೆ ಪ್ರವೇಶ ನಿರಾಕರಿಸಲಾದ ಪ್ರತಿಯೊಂದು ದೇವಾಲಯದ ಮೇಲೂ ಮರಳಿ ಹಕ್ಕನ್ನು ಪಡೆದು ಅದರ ಪುನರ್ನಿರ್ಮಾಣ ಮಾಡಬೇಕು.

ಐತಿಹಾಸಿಕ ಸತ್ಯದ ವಿಜಯ!

ಇತಿಹಾಸದ ವಿಕೃತಿಗಳನ್ನು ಈಗ ಮುಚ್ಚಿಡಲು ಸಾಧ್ಯವಿಲ್ಲ. ದೇವಾಲಯಗಳು, ವಿದೇಶಿ ಆಕ್ರಮಣಗಳು ಮತ್ತು ಸಾಂಸ್ಕೃತಿಕ ವಿನಾಶದ ಸತ್ಯವು ಈಗ ಸಾರ್ವಜನಿಕವಾಗಿ ಜನರ ಮುಂದೆ ಬರುತ್ತಿದೆ.

ಹಿಂದೂ ಏಕತೆ ಅನಿವಾರ್ಯ

ಹಿಂದೂಗಳಲ್ಲಿ ಜಾತಿ, ಪ್ರಾಂತ್ಯ ಅಥವಾ ಭಾಷೆಯ ಹೆಸರಿನಲ್ಲಿ ಆಗುವ ವಿಭಜನೆಯು ನಮ್ಮ ನಾಗರಿಕತೆಯ ನಿರಂತರತೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ನಾಗರಿಕತೆಯ ರಕ್ಷಣೆಗಾಗಿ ಹಿಂದೂ ಏಕತೆಯು ಕಾಲದ ಅವಶ್ಯಕತೆಯಾಗಿದೆ.

ಧರ್ಮದ ಪುನರುಜ್ಜೀವನ

ದೇವಾಲಯಗಳ ಪುನರುಜ್ಜೀವನವು ಕೇವಲ ಒಂದು ಧಾರ್ಮಿಕ ಕಾರ್ಯವಲ್ಲ. ಇದು ಧರ್ಮವನ್ನು ಮರುಸ್ಥಾಪಿಸಲು, ಸಾಂಸ್ಕೃತಿಕ ಆತ್ಮವಿಶ್ವಾಸವನ್ನು ಜಾಗೃತಗೊಳಿಸಲು, ಐತಿಹಾಸಿಕ ನ್ಯಾಯವನ್ನು ಪಡೆಯಲು ಮತ್ತು ರಾಷ್ಟ್ರೀಯ ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಹೆಜ್ಜೆಯಾಗಿದೆ.

ನಮ್ಮದಾಗಿದ್ದನ್ನು ನಾವು ಮರಳಿ ಪಡೆದಿದ್ದೇವೆ ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್

ಭೋಜಶಾಲೆಯ ತೀರ್ಪು ಹಿಂದೂಗಳ ಪರವಾಗಿ ಬಂದಿರುವುದು ಬಹಳ ಮಹತ್ವದ್ದಾಗಿದೆ. ದೀರ್ಘ ಹೋರಾಟದ ನಂತರ ಹಿಂದೂಗಳಿಗೆ ಆ ಆವರಣದಲ್ಲಿ ಪೂಜೆ ಮಾಡುವ ಹಕ್ಕು ಮರಳಿ ಸಿಕ್ಕಿದೆ. ಶ್ರೀರಾಮಮಂದಿರವನ್ನು ಬಾಬರ್ ಧ್ವಂಸ ಮಾಡಿದ ಘಟನೆ ೧೫೨೮ ನೇ ಇಸವಿಯಲ್ಲಿ ನಡೆದಿತ್ತು. ಭೋಜಶಾಲೆಯ ಪ್ರಕರಣವು ಅದಕ್ಕಿಂತಲೂ ಹಳೆಯದು, ಅಂದರೆ ೧೧ ನೇ ಶತಮಾನದ್ದಾಗಿದೆ. ಕತ್ತಿಗಿಂತ ಲೇಖನಿ ಹೆಚ್ಚು ಶಕ್ತಿಶಾಲಿಯಾಗಿದೆ ಎಂಬುದು ನ್ಯಾಯಾಲಯದ ತೀರ್ಪಿನಿಂದ ಮತ್ತೊಮ್ಮೆ ಸಾಬೀತಾಗಿದೆ, ಎಂದು ಹೇಳಿದರು.