Canada Alberta Separation : ಕೆನಡಾದ ಆಲ್ಬರ್ಟಾ ಪ್ರಾಂತ್ಯಕ್ಕೆ ಸ್ವತಂತ್ರವಾಗುವ ಇಚ್ಛೆ !

ಸ್ವತಂತ್ರ ದೇಶಕ್ಕಾಗಿ ಆಗ್ರಹಿಸುವವರಿಂದ ೩ ಲಕ್ಷ ಸಹಿಗಳ ಸಂಗ್ರಹ

ಓಟಾವಾ (ಕೆನಡಾ) – ಕೆನಡಾದಲ್ಲಿ ಖಲಿಸ್ತಾನ್ ಬೆಂಬಲಿತ ಸಿಖ್ಖರಿಂದ ಭಾರತದ ಪಂಜಾಬ್ ಅನ್ನು ಸ್ವತಂತ್ರ ‘ಖಲಿಸ್ತಾನ್’ ದೇಶವೆಂದು ಘೋಷಿಸಲು ಯಾವಾಗಲೂ ಜನಮತ ಸಂಗ್ರಹದ ಪ್ರಯತ್ನಗಳು ನಡೆಯುತ್ತಿರುತ್ತವೆ. ಈಗ ಕೆನಡಾದಲ್ಲಿಯೇ ಅದರ ಪಶ್ಚಿಮ ಪ್ರಾಂತ್ಯವಾದ ಆಲ್ಬರ್ಟಾವನ್ನು ಪ್ರತ್ಯೇಕ ದೇಶವನ್ನಾಗಿ ಮಾಡುವ ಬೇಡಿಕೆಯು ಹೆಚ್ಚು ತೀವ್ರಗೊಂಡಿದೆ. ಪ್ರತ್ಯೇಕತಾವಾದಿಗಳು ತಾವು ಎಷ್ಟು ಬೆಂಬಲವನ್ನು ಗಳಿಸಿದ್ದೇವೆ ಎಂದರೆ, ಈಗ ಸ್ವಾತಂತ್ರ್ಯದ ಕುರಿತು ಜನಮತ ಸಂಗ್ರಹ (ರೆಫರೆಂಡಮ್) ನಡೆಸಬಹುದೆಂದು ಹೇಳಿದ್ದಾರೆ. ಪ್ರತ್ಯೇಕತಾವಾದಿಗಳು ಸುಮಾರು ೩ ಲಕ್ಷ ಸಹಿಗಳನ್ನು ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ, ಆದರೆ ಕೇವಲ ೧ ಲಕ್ಷ ೭೮ ಸಹಸ್ರ ಸಹಿಗಳ ಅವಶ್ಯಕತೆಯಿತ್ತು. ಈ ಪ್ರಕ್ರಿಯೆಯ ಬಗ್ಗೆ ಪ್ರಸ್ತುತ ನ್ಯಾಯಾಲಯದ ಆದೇಶದ ಮೇರೆಗೆ ತಡೆ ನೀಡಲಾಗಿದೆ. ಒಂದು ವೇಳೆ ಮತದಾನವು ಆಲ್ಬರ್ಟಾದ ಪರವಾಗಿ ನಡೆದರೆ, ಈ ಪ್ರಾಂತ್ಯವು ಕೆನಡಾದಿಂದ ಬೇರ್ಪಟ್ಟು ಪ್ರತ್ಯೇಕ ದೇಶವಾಗಬಹುದು.

ಆಲ್ಬರ್ಟಾದಲ್ಲಿ ಸುಮಾರು ೫೦ ಲಕ್ಷ ಜನರು ವಾಸಿಸುತ್ತಿದ್ದು, ದೀರ್ಘಕಾಲದಿಂದ ಆ ಪ್ರಾಂತವನ್ನು ಕೆನಡಾದಿಂದ ಬೇರೆ ಎಂದು ಪರಿಗಣಿಸಲಾಗುತ್ತಿತ್ತು. ಆಲ್ಬರ್ಟಾ ತೈಲ ಮತ್ತು ಅನಿಲ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ರಾಜ್ಯವಾಗಿದೆ. ಅಲ್ಲಿ ಕೆನಡಾದ ಒಟ್ಟು ತೈಲ ಉತ್ಪಾದನೆಯ ಸುಮಾರು ಶೇ. ೮೪% ರಷ್ಟು ಪಾಲು ತೈಲ ತೆಗೆಯಲಾಗುತ್ತದೆ. ಅಲ್ಲಿನ ಜನರಿಗೆ ತಾವು ಹೆಚ್ಚು ಸಂಪಾದಿಸುತ್ತೇವೆ; ಆದರೆ ಅದರ ಲಾಭ ಉಳಿದ ಕೆನಡಾಗೆ ಹೆಚ್ಚು ಸಿಗುತ್ತಿದೆ ಎಂದು ಅನಿಸುತ್ತಿದೆ. ತೆರಿಗೆಯ ಹಣ ಓಟಾವಾಗೆ ಹೋಗಿ ಖರ್ಚಾಗುತ್ತದೆ; ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಾತ್ರ ತಮ್ಮ ಮಾತನ್ನು ಅಲ್ಪ ಪ್ರಮಾಣದಲ್ಲಿ ಆಲಿಸಲಾಗುತ್ತದೆ ಎಂಬುದು ಅಲ್ಲಿನ ಜನರ ದೂರಾಗಿದೆ. ಅವರ ಸಂಸ್ಕೃತಿ, ಆರ್ಥಿಕತೆ ಮತ್ತು ರಾಜಕೀಯವು ವಿಭಿನ್ನವಾಗಿದೆ; ಆದರೆ ನಿರ್ಧಾರಗಳನ್ನು ಮಾತ್ರ ಓಟಾವಾದಲ್ಲಿ ಕುಳಿತು ತೆಗೆದುಕೊಳ್ಳಲಾಗುತ್ತದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.