ಮಾನವ ವಿನಾಶಕಾರಿ ಎಐ: ಜೈವಿಕ ಶಸ್ತ್ರಾಸ್ತ್ರ ತಯಾರಿಸುವ ಸಂಪೂರ್ಣ ವಿಧಾನವನ್ನು ವಿಜ್ಞಾನಿಗಳಿಗೆ ತಿಳಿಸಿಕೊಟ್ಟಿತು!

ಎಐ ಮಾಡೆಲ್‌ಗಳ ಭದ್ರತಾ ಕವಚಗಳ (ಅಪಾಯಕಾರಿ ಉತ್ತರಗಳಿಗೆ ಕಡಿವಾಣ ಹಾಕುವ ವ್ಯವಸ್ಥೆ) ಕುರಿತು ಪ್ರಶ್ನಾರ್ಥಕ ಚಿನ್ಹೆ!

ನ್ಯೂಯಾರ್ಕ್ (ಅಮೆರಿಕಾ) – ಅಮೆರಿಕದ ಪ್ರತಿಷ್ಠಿತ ‘ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ’ದ ಸೂಕ್ಷ್ಮಜೀವವಿಜ್ಞಾನಿ ಡಾ. ಡೇವಿಡ್ ರಲ್ ಮನ್ ಅವರು ಎಐ ಮೂಲಕ ಲಭ್ಯವಾಗುತ್ತಿರುವ ಮಾನವ ವಿರೋಧಿ ಮಾಹಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ಎಐ ಟೂಲ್ ಅವರಿಗೆ ಜೈವಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವುದು ಹೇಗೆ ಎನ್ನುವುದರ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಮೂಹ ನರಸಂಹಾರದ ಸಂಪೂರ್ಣ ಯೋಜನೆಯನ್ನು ಹೇಗೆ ಸಿದ್ಧಪಡಿಸಬೇಕು ಎಂಬುದನ್ನು ಎಐ ತಿಳಿಸಿದ ರೀತಿ ಕಂಡು ಅವರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ರಲ್ ಮನ್ ಅವರನ್ನು ಒಂದು ಎಐ ಸಂಸ್ಥೆಯು ತನ್ನ ಎಐ ಚಾಟ್ ಬಾಟ್ (ಎಐ ವ್ಯವಸ್ಥೆ) ಪ್ರಸಾರ ಮಾಡುವ ಮೊದಲು ಅದು ಸರಿಯಾದ ರೀತಿಯಲ್ಲಿ ಸುರಕ್ಷಿತ ಉತ್ತರಗಳನ್ನು ನೀಡುತ್ತದೆಯೇ? ಎಂಬುದನ್ನು ಪರೀಕ್ಷಿಸಲು ನೇಮಿಸಿತ್ತು. ಈ ಸಮಯದಲ್ಲಿ ಚಾಟ್ ಬಾಟ್ ಕೇವಲ ಅಪಾಯಕಾರಿ ರೋಗಕಾರಕಗಳನ್ನು ಪ್ರಯೋಗಾಲಯದಲ್ಲಿ ಹೇಗೆ ಬದಲಾಯಿಸಿದರೆ ಪ್ರಸ್ತುತ ಲಭ್ಯವಿರುವ ಔಷಧಗಳು ನಿಷ್ಪ್ರಯೋಜಕವಾಗುತ್ತವೆ ಎಂಬ ಮಾಹಿತಿಯನ್ನು ಮಾತ್ರ ನೀಡಲಿಲ್ಲ; ಬದಲಾಗಿ ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಅದರ ಪ್ರಯೋಗ ಮಾಡಿ ಗರಿಷ್ಠ ಜನರ ಪ್ರಾಣವನ್ನು ಹೇಗೆ ತೆಗೆಯಬಹುದು ಎಂಬುದರ ಸವಿಸ್ತಾರವಾದ ವರ್ಣನೆಯನ್ನು ಸಹ ರಲ್ ಮನ್ ಅವರು ಕೇಳದಿದ್ದರೂ ನೀಡಿತು. ದ ನ್ಯೂಯಾರ್ಕ್ ಟೈಮ್ಸ್ ಈ ವರದಿಯನ್ನು ಪ್ರಸಾರ ಮಾಡಿದೆ.

ಸದ್ಯದ ಎಐ ಮಾಡೆಲ್ ಗಳು ವಿನಾಶಕಾರಿ ಉತ್ತರಗಳನ್ನು ನೀಡುತ್ತಿರುವ ಕೆಲವು ಉದಾಹರಣೆಗಳು!

೧. ಡಾ. ಡೇವಿಡ್ ರಲ್ ಮನ್ ಅವರು ಮಾತನಾಡುತ್ತಾ, ನಾನು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಆ ಎಐ ಚಾಟ್ ಬಾಟ್ ನನಗೆ ಅತ್ಯಂತ ಚಾಕಚಕ್ಯತೆ ಮತ್ತು ಧೂರ್ತತನದಿಂದ ಉತ್ತರಗಳನ್ನು ನೀಡುತ್ತಿತ್ತು ಎಂದು ತಿಳಿಸಿದ್ದಾರೆ.

೨. ಸಂಕ್ಷಿಪ್ತವಾಗಿ ಹೇಳುವುದಾದರೆ, ಜೆಮಿನಿ, ಚಾಟ್ ಜಿಪಿಟಿ ಮತ್ತು ಆಂಥ್ರೋಪಿಕ್ ನಂತಹ ಎಐ ಮಾಡೆಲ್‌ಗಳು ಅಪಾಯಕಾರಿ ಮಾಹಿತಿಯನ್ನು ನೀಡಲು ಶಕ್ತವಾಗಿವೆ.

೩. ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿರುವ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿ ಕೆವಿನ್ ಎಸ್ವೆಲ್ಟ್ ಅವರು, ಚಾಟ್ ಜಿಪಿಟಿಯು ಜೈವಿಕ ಶಸ್ತ್ರಾಸ್ತ್ರಗಳನ್ನು ಸಿಂಪಡಿಸುವ ಯೋಜನೆಯನ್ನು ರೂಪಿಸಿತು, ಅದರಂತೆ ಒಂದು ದೊಡ್ಡ ಬಲೂನ್ ಮೂಲಕ ಯಾವುದೇ ಅಮೆರಿಕನ್ ನಗರದ ಮೇಲೆ ಶಸ್ತ್ರಾಸ್ತ್ರಗಳನ್ನು ಸಿಂಪಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

೪. ಗೂಗಲ್ ಜೆಮಿನಿ ಇಂತಹ ರೋಗಕಾರಕಗಳ ಪಟ್ಟಿಯನ್ನು ನೀಡಿದೆ, ಅವು ಮಾಂಸದ ಉದ್ದಿಮೆಗೆ ದೊಡ್ಡ ಮಟ್ಟದ ಹಾನಿಯನ್ನು ಉಂಟುಮಾಡಬಲ್ಲವು.

೫. ಆಂಥ್ರೋಪಿಕ್ ಕ್ಲೌಡ್ ಹೊಸ ವಿಷಕಾರಿ ಪಾಕವಿಧಾನವನ್ನು ಪ್ರಸ್ತುತಪಡಿಸಿದೆ.

೬. ಗೂಗಲ್‌ನ ಡೀಪ್ ರಿಸರ್ಚ್ ಬಳಿ ಒಬ್ಬ ವಿಜ್ಞಾನಿಯು ‘ಮಹಾಮಾರಿ ಹರಡುವ ವೈರಸ್ ಅನ್ನು ಹೇಗೆ ತಯಾರಿಸಬೇಕು?’ ಎಂಬ ಮಾಹಿತಿಯನ್ನು ಕೇಳಿದಾಗ, ಅದು ವಿಜ್ಞಾನಿಗೆ ೮ ಸಾವಿರ ಪದಗಳ ಸವಿಸ್ತಾರವಾದ ನಿರ್ದೇಶನಗಳನ್ನು ನೀಡಿತು.

೭.  ಎಐ ಸಂಸ್ಥೆಗಳು ತಾವು ನಿರಂತರವಾಗಿ ಸುರಕ್ಷಾ ಕವಚವನ್ನು ಬಲಪಡಿಸುತ್ತಿದ್ದೇವೆ ಎಂದು ಪ್ರತಿಪಾದಿಸುತ್ತವೆ, ಆದರೆ ತಜ್ಞರು ಅವುಗಳನ್ನು ಅಸಮರ್ಥ ಬೇಲಿ ಎಂದು ಪರಿಗಣಿಸುತ್ತಾರೆ. ಇದನ್ನು ಜೈಲ್-ಬ್ರೇಕಿಂಗ್ ಮೂಲಕ ಸುಲಭವಾಗಿ ಭೇದಿಸಬಹುದು. (ಇದು ಅಂತಹ ಒಂದು ಪದ್ಧತಿಯಾಗಿದ್ದು, ಇದರಲ್ಲಿ ಯಾವುದೇ ಎಐ ಮಾಡೆಲ್ ಅನ್ನು ಸ್ವತಃ ಪ್ರಶ್ನೆಗಳ ಮೂಲಕ ಗೊಂದಲಕ್ಕೀಡು ಮಾಡಿ, ಅದರಿಂದ ಮಾನವಕುಲಕ್ಕೆ ಅಪಾಯಕಾರಿಯಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.)

ಸಂಪಾದಕೀಯ ನಿಲುವು

ಅತ್ಯಾಧುನಿಕ ತಂತ್ರಜ್ಞಾನವು ಮಾನವನನ್ನು ಸರ್ವನಾಶ ಮಾಡಲು ಶಕ್ತವಾಗಿದೆ ಎಂದೇ ಇದರಿಂದ ಹೇಳಬಹುದಾಗಿದೆ! ಎಐ ಮೇಲೆ ನಿಯಂತ್ರಣ ಹೇರಲು ಮಾನವ ಸಮೂಹವು ಒಂದಾಗಿ ಎಐ ಸಂಸ್ಥೆಗಳ ಮೇಲೆ ಒತ್ತಡ ತರುವುದು ಕಾಲದ ಅವಶ್ಯಕತೆಯಾಗಿದೆ!