ದೇಶದಲ್ಲಿ ಕೋಟ್ಯಂತರ ಮೊಬೈಲ್‌ಗಳಲ್ಲಿ ಮೊಳಗಿದ ‘ಅಲರ್ಟ್’ ಸೈರನ್ : ಸರಕಾರದಿಂದ ಪರೀಕ್ಷೆ !

  • ತುರ್ತು ಪರಿಸ್ಥಿತಿಯಲ್ಲಿ ಜನತೆಯನ್ನು ಜಾಗೃತಗೊಳಿಸಲು ಸ್ವದೇಶಿ ತಂತ್ರಜ್ಞಾನ ‘ಸಚೇತ್’ ಬಳಕೆ

  • ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜಾಗೃತಿಯ ಎಚ್ಚರಿಕೆ ನೀಡಿರುವುದು ಜಗತ್ತಿನಲ್ಲಿಯೇ ಮೊದಲ ಬಾರಿ

ನವ ದೆಹಲಿ – ದೇಶಾದ್ಯಂತ ಮೇ ೨ ರಂದು ಬೆಳಿಗ್ಗೆ ೧೧:೪೫ ಗಂಟೆಗೆ ಕೋಟ್ಯಂತರ ಮೊಬೈಲ್‌ಗಳಲ್ಲಿ ಏಕಕಾಲಕ್ಕೆ ‘ಸೈರನ್’ (ತುರ್ತು ಪರಿಸ್ಥಿತಿಯ ಗಂಟೆ) ಶಬ್ದ ಕೇಳಿಬಂದಿತು. ಹಿಂದಿ, ಇಂಗ್ಲಿಷ್ ಹಾಗೂ ೧೭ ಪ್ರಾದೇಶಿಕ ಭಾಷೆಗಳಲ್ಲಿ ಒಂದೇ ಸಂದೇಶವನ್ನು ನೀಡಲಾಯಿತು. ಸೈರನ್ ನಿಂತ ನಂತರ ಮೊಬೈಲ್‌ನಲ್ಲಿನ ಸಂದೇಶವನ್ನು ಓದಿಯೂ ತೋರಿಸಲಾಯಿತು. ಈ ಸಂದೇಶದಲ್ಲಿ ಜನರಿಗೆ, ಇದು ಕೇವಲ ಒಂದು ಪರೀಕ್ಷೆಯಾಗಿದ್ದು, ಇದರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಯಿತು. ಜನರು ಭಯಪಡುವ ಅವಶ್ಯಕತೆಯಿಲ್ಲ ಎಂದು ಸರಕಾರವು ಎರಡು ದಿನಗಳ ಮೊದಲೇ ಲಘುಸಂದೇಶದ ಮೂಲಕ ತಿಳಿಸಿತ್ತು. ಸಂದೇಶ ಕಳುಹಿಸುವ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದ್ದು, ಈ ವ್ಯವಸ್ಥೆಯನ್ನು ತನ್ನೆಲ್ಲಾ ನಾಗರಿಕರಿಗಾಗಿ ಜಾರಿಗೆ ತಂದಿರುವ ಬೆರಳೆಣಿಕೆಯ ದೇಶಗಳ ಸಾಲಿನಲ್ಲಿ ಭಾರತವೂ ಸೇರಿದೆ.

೧. ಸೈರನ್ ಕಳುಹಿಸಿದವರು ಯಾರು? : ಈ ಸಂದೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಳುಹಿಸಿತ್ತು. ಇದು ‘ತುರ್ತು ಮೊಬೈಲ್ ಅಲರ್ಟ್ ಪರೀಕ್ಷೆ’ಯ ಒಂದು ಭಾಗವಾಗಿದೆ.

೨. ‘ಸೆಲ್’ (ವಿಶೇಷ ಕ್ಷೇತ್ರ) ಮಟ್ಟದಲ್ಲಿ ಜಾಗೃತಗೊಳಿಸಬಹುದು : ಇದರಡಿಯಲ್ಲಿ ಕಿರುಸಂದೇಶ ತಂತ್ರಜ್ಞಾನವನ್ನು ‘ಸೆಲ್ ಬ್ರಾಡ್‌ ಕಾಸ್ಟ್ ತಂತ್ರಜ್ಞಾನ’ದೊಂದಿಗೆ ಜೋಡಿಸಲಾಗಿದೆ. ಇದರಿಂದ ಆಯ್ಕೆ ಮಾಡಿದ ಪ್ರದೇಶದಲ್ಲಿ (ಸೆಲ್‌ನಲ್ಲಿ) ಸಕ್ರಿಯವಾಗಿರುವ ಎಲ್ಲಾ ಮೊಬೈಲ್‌ಗಳಿಗೆ ಏಕಕಾಲದಲ್ಲಿ ‘ಅಲರ್ಟ್’ (ಜಾಗೃತಿಯ ಎಚ್ಚರಿಕೆ) ನೀಡಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಸಂಭವನೀಯ ತುರ್ತು ಪರಿಸ್ಥಿತಿಯಲ್ಲಿ ‘ರಿಯಲ್ ಟೈಮ್’ ಅಂದರೆ ಅದೇ ಸಮಯದಲ್ಲಿ ಸರಕಾರವು ಅಪಾಯವಿರುವ ಸಂಬಂಧಿತ ಕ್ಷೇತ್ರದ ಜನರಿಗೆ ಮಾಹಿತಿಯನ್ನು ತಲುಪಿಸಬಹುದಾಗಿದೆ.

ಸರಕಾರವು ಮೊದಲೇ ಹೇಳಿತ್ತು, ‘ಸಂದೇಶದಿಂದ ಭಯಪಡಬೇಡಿ !’

ಸರಕಾರವು ಎರಡು ದಿನಗಳ ಹಿಂದೆಯೇ ಲಘುಸಂದೇಶದ ಮೂಲಕ ಜನರಲ್ಲಿ ಮನವಿ ಮಾಡುತ್ತಾ, ಪರಿಶೀಲನೆಯ ಸಂದೇಶವು ದೊರೆತರೆ ಭಯಪಡಬೇಡಿ ಎಂದು ತಿಳಿಸಿತ್ತು.

‘ಸಚೇತ್’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ !

ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ‘ರಿಯಲ್ ಟೈಮ್ ಅಲರ್ಟ್’ ನೀಡಲು ಸರಕಾರಿ ಸಂಸ್ಥೆಯಾದ ‘ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್’, ‘ಸಚೇತ್’ ಎಂಬ ಸಮಗ್ರ ಅಲರ್ಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಸಚೇತ್ ಹೆಸರಿನ ಈ ವ್ಯವಸ್ಥೆಯು ‘ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್’ ಆಧಾರಿತವಾಗಿದೆ. ‘ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್’ ತಂತ್ರಜ್ಞಾನವನ್ನು ಜಗತ್ತಿನ ೧೫೦ ದೇಶಗಳು ಬಳಸುತ್ತಿವೆ. ೨೦೦೪ ರಲ್ಲಿ ಅಭಿವೃದ್ಧಿಗೊಂಡ ಈ ತಂತ್ರಜ್ಞಾನದ ಬಳಕೆಯನ್ನು ಮೊದಲು ಅಮೆರಿಕ, ಶ್ರೀಲಂಕಾ, ಜರ್ಮನಿ, ಕೆನಡಾ, ಇಟಲಿ, ಗಯಾನಾ, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ತೈವಾನ್ ಮತ್ತು ಫಿಲಿಪೈನ್ಸ್ ದೇಶಗಳು ಪ್ರಾರಂಭಿಸಿದವು. ಸುನಾಮಿ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಈ ದೇಶಗಳು ಇದನ್ನು ಬಳಸಿಕೊಂಡಿವೆ.