ಭಾರತವು ರಕ್ಷಣಾ ಕ್ಷೇತ್ರದಲ್ಲಿ ಅತಿ ಹೆಚ್ಚು ವೆಚ್ಚ ಮಾಡುವ ದೇಶಗಳ ಪಟ್ಟಿಯಲ್ಲಿ ೫ನೇ ಸ್ಥಾನಕ್ಕೆ ಏರಿಕೆ!

ಬಜೆಟ್‌ ನಲ್ಲಿ ಶೇ. ೮.೯ ರಷ್ಟು ಹೆಚ್ಚಳ!

ನವ ದೆಹಲಿ – ರಕ್ಷಣಾ ಬಜೆಟ್‌ ನಲ್ಲಿ ಶೇ. ೮.೯ ರಷ್ಟು ಏರಿಕೆಯಾದ ಕಾರಣ, ರಕ್ಷಣಾ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ವೆಚ್ಚ ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಈಗ ೫ನೇ ಸ್ಥಾನವನ್ನು ಅಲಂಕರಿಸಿದೆ. ‘ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್’ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕಳೆದ ವರ್ಷ ಜಾಗತಿಕ ರಕ್ಷಣಾ ವೆಚ್ಚವು ದಾಖಲೆಯ ೨.೮೯ ಟ್ರಿಲಿಯನ್ ಡಾಲರ್‌ಗಳಿಗೆ (ಅಂದಾಜು ೨೭೪ ಲಕ್ಷ ಕೋಟಿ ರೂಪಾಯಿ) ತಲುಪಿದೆ. ಈ ಪಟ್ಟಿಯಲ್ಲಿ ಭಾರತವು ೯೨.೧ ಬಿಲಿಯನ್ ಡಾಲರ್ (ಅಂದಾಜು ೮ ಲಕ್ಷ ೭೩ ಸಾವಿರದ ೧೭೯ ಕೋಟಿ ರೂಪಾಯಿ) ವೆಚ್ಚದೊಂದಿಗೆ ೨೦೨೫ ರಲ್ಲಿ ೫ನೇ ಸ್ಥಾನಕ್ಕೆ ತಲುಪಿದೆ.

ಜಾಗತಿಕ ರಕ್ಷಣಾ ವೆಚ್ಚದಲ್ಲಿ ಮುಂಚೂಣಿಯಲ್ಲಿರುವ ಮೊದಲ ೫ ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚೀನಾ ಎರಡನೇ, ರಷ್ಯಾ ಮೂರನೇ, ಜರ್ಮನಿ ನಾಲ್ಕನೇ ಮತ್ತು ಭಾರತ ೫ನೇ ಸ್ಥಾನದಲ್ಲಿದೆ. ಈ ೫ ದೇಶಗಳು ಒಟ್ಟಾಗಿ ಜಾಗತಿಕ ರಕ್ಷಣಾ ವೆಚ್ಚದ ಶೇ. ೫೮ ರಷ್ಟು ಪಾಲನ್ನು ಹೊಂದಿವೆ. ಈ ಮೊತ್ತವು ಸುಮಾರು ೧.೬ ಟ್ರಿಲಿಯನ್ ಡಾಲರ್ (ಅಂದಾಜು ೧೫೧ ಲಕ್ಷದ ೬೯ ಸಾವಿರ ಕೋಟಿ ರೂಪಾಯಿ) ಆಗಿದೆ.

ಪಾಕಿಸ್ತಾನದ ರಕ್ಷಣಾ ವೆಚ್ಚದಲ್ಲೂ ಹೆಚ್ಚಳ!

೨೦೨೫ ರಲ್ಲಿ ಪಾಕಿಸ್ತಾನದ ರಕ್ಷಣಾ ವೆಚ್ಚವು ಶೇ. ೧೧ ರಷ್ಟು ಏರಿಕೆಯಾಗಿದ್ದು, ೧೧.೯ ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ (ಅಂದಾಜು ೧ ಲಕ್ಷದ ೧೨ ಸಾವಿರದ ೮೨೬ ಕೋಟಿ ರೂಪಾಯಿ) ತಲುಪಿದೆ. ಭಾರತದೊಂದಿಗಿನ ಸಶಸ್ತ್ರ ಸಂಘರ್ಷದ ನಂತರ ಪಾಕಿಸ್ತಾನವು ಚೀನಾದಿಂದ ವಿಮಾನಗಳು ಮತ್ತು ಕ್ಷಿಪಣಿಗಳ ಖರೀದಿಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಂದವೇ ಈ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ.