ಇಂಟರ್ನೆಟ್ ಮತ್ತು ವಿದ್ಯುತ್ ರಹಿತ ವೈದಿಕ ಗ್ರಾಮ: ಆಂಧ್ರಪ್ರದೇಶದ ಕೂರ್ಮಗ್ರಾಮ!

ಕೃಷ್ಣ ಭಕ್ತಿಯಲ್ಲಿ ಲೀನವಾಗಲು 18ನೇ ಶತಮಾನದ ಜೀವನಶೈಲಿಯನ್ನು ಅಳವಡಿಸಿಕೊಂಡ ಗ್ರಾಮಸ್ಥರು

ವಿಶಾಖಪಟ್ಟಣಂ (ಆಂಧ್ರಪ್ರದೇಶ) – ಇಲ್ಲಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಶ್ರೀಕಾಕುಳಂ ಜಿಲ್ಲೆಯ ‘ಕೂರ್ಮಗ್ರಾಮ’ ಕೇವಲ 56 ಜನರ ಪುಟ್ಟ ಗ್ರಾಮ. ಇಲ್ಲಿನ ಜನರು ಇಂದಿಗೂ 300 ವರ್ಷಗಳ ಹಿಂದಿನ, ಅಂದರೆ 18ನೇ ಶತಮಾನದ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಅದಕ್ಕಾಗಿ ಇಲ್ಲಿ ಇಂದಿಗೂ ವಿದ್ಯುತ್ ಅಥವಾ ಇಂಟರ್ನೆಟ್‌ನಂತಹ ಆಧುನಿಕ ಸೌಲಭ್ಯಗಳಿಲ್ಲ. ಇಲ್ಲಿನ ಜನರ ದಿನಚರಿಯು ಬ್ರಾಹ್ಮಿ ಮುಹೂರ್ತದಲ್ಲಿ, ಅಂದರೆ ಮುಂಜಾನೆ 3:30ಕ್ಕೆ ಆರಂಭವಾಗಿ, ಸಂಜೆ 7:30ಕ್ಕೆಲ್ಲ ಮುಕ್ತಾಯಗೊಳ್ಳುತ್ತದೆ. ವಿಶೇಷವೆಂದರೆ, ಇಲ್ಲಿನ ಜನರಿಗೆ ಆಧುನಿಕ ಸೌಕರ್ಯಗಳನ್ನು ಬಳಸುವ ಆರ್ಥಿಕ ಸಾಮರ್ಥ್ಯವಿದ್ದರೂ, ಸ್ವಇಚ್ಛೆಯಿಂದ ಭೌತಿಕ ಸುಖಗಳನ್ನು ತ್ಯಜಿಸಿದ್ದಾರೆ. ‘ಸರಳ ಜೀವನ, ಉನ್ನತ ಚಿಂತನೆ’ ಎಂಬ ತತ್ವದಡಿ ಇವರು ಬದುಕುತ್ತಿದ್ದಾರೆ. ಈ ಗ್ರಾಮದಲ್ಲಿ 14 ಕುಟುಂಬಗಳು ಮತ್ತು ಕೆಲವು ಕೃಷ್ಣ ಭಕ್ತರಿದ್ದು, ಅವರು ತಮ್ಮ ಇಡೀ ಜೀವನವನ್ನು ಕೃಷ್ಣ ಭಕ್ತಿಗೆ ಅರ್ಪಿಸಿಕೊಂಡಿದ್ದಾರೆ.

ಈ ಗ್ರಾಮದ ವಿಶೇಷತೆಗಳು!

೧. ಮನೆಗಳ ನಿರ್ಮಾಣ: ಈ ಗ್ರಾಮದ ಮನೆಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ನಿರ್ಮಿಸಲಾಗಿದೆ. ಜನರು ತಮ್ಮ ಕೈಯಾರೆ ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಸುಮಾರು 60 ಎಕರೆ ಪ್ರದೇಶದಲ್ಲಿ ಹರಡಿದೇ. ಕೂರ್ಮಗ್ರಾಮದ ಮನೆಗಳನ್ನು 9ನೇ ಶತಮಾನದ ‘ಶ್ರೀ ಮುಖಲಿಂಗಂ’ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ.

೨. ಆಹಾರ : ಕೂರ್ಮಗ್ರಾಮದ ಯಾವುದೇ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲ; ಇಲ್ಲಿ ಇಂದಿಗೂ ಒಲೆಯ ಮೇಲೆಯೇ ಅಡುಗೆ ಮಾಡಲಾಗುತ್ತದೆ. ತಮಗೆ ಬೇಕಾದ ತರಕಾರಿ ಮತ್ತು ಧಾನ್ಯಗಳನ್ನು ಅವರೇ ಸ್ವತಃ ಬೆಳೆಯುತ್ತಾರೆ. ಇಲ್ಲಿಗೆ ಬರುವ ಅತಿಥಿಗಳಿಗೆ ಅವರು ನೀಡುವ ಭೋಜನವನ್ನು ‘ಪ್ರಸಾದಂ’ ಎಂದು ಕರೆಯಲಾಗುತ್ತದೆ.

೩. ಕೇವಲ ಒಂದು ಮೊಬೈಲ್ ಫೋನ್ : ಇಡೀ ಗ್ರಾಮದಲ್ಲಿ ಯಾರ ಬಳಿಯೂ ಆಧುನಿಕ ಉಪಕರಣಗಳಿಲ್ಲ. ಇಡೀ ಊರಿಗೆ ಕೇವಲ ಒಂದು ಸಾಧಾರಣ ಮೊಬೈಲ್ ಫೋನ್ ಇದೆ. ಹೊರಗಿನವರನ್ನು ಸಂಪರ್ಕಿಸಬೇಕಾದಾಗ ಮಾತ್ರ ಅದರ ಬಳಕೆ ಮಾಡಲಾಗುತ್ತದೆ.

೪. ಗುರುಕುಲದ ವೈಶಿಷ್ಟ್ಯ: ಈ ಗ್ರಾಮದ ಗುರುಕುಲದ ಮುಖ್ಯಸ್ಥರಾದ ನಟೇಶ್ವರ ನರೋತ್ತಮ ದಾಸ್ ಅವರು ಹೇಳುವಂತೆ, “ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸಿದ ತತ್ವಗಳ ಆಧಾರದ ಮೇಲೆ ನಾವು ಜೀವನ ನಡೆಸುತ್ತಿದ್ದೇವೆ.” ಇಲ್ಲಿನ ಗುರುಕುಲದಲ್ಲಿ ಗಣಿತ, ವಿಜ್ಞಾನ, ಸಂಸ್ಕೃತ, ತೆಲುಗು, ಹಿಂದಿ, ಇಂಗ್ಲಿಷ್, ಕಲೆ ಮತ್ತು ಮಹಾಭಾರತದ ಶಿಕ್ಷಣ ನೀಡಲಾಗುತ್ತದೆ. ಮಕ್ಕಳು ಮಹಾಭಾರತ ಮತ್ತು ಇತಿಹಾಸದ ಆಧಾರಿತ ನಾಟಕಗಳನ್ನು ಪ್ರದರ್ಶಿಸುತ್ತಾರೆ.

೫. ಉನ್ನತ ಉದ್ಯೋಗ ತ್ಯಜಿಸಿದ ಗ್ರಾಮಸ್ಥರು : ಇಲ್ಲಿ ವಾಸಿಸುವ ರಾಧಾಕೃಷ್ಣ ಚರಣ ದಾಸ್ ಎಂಬುವವರು ಕೃಷ್ಣ ಭಕ್ತಿಗಾಗಿ ತಮ್ಮ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದ ಕೆಲಸವನ್ನು ತ್ಯಜಿಸಿದ್ದಾರೆ. “ನಮ್ಮ ಪೂರ್ವಜರು 300 ವರ್ಷಗಳ ಹಿಂದೆ ಹೇಗೆ ಬದುಕುತ್ತಿದ್ದರೋ, ನಾನು ಹಾಗೆಯೇ ಬದುಕುತ್ತಿದ್ದೇನೆ” ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.