ಹಿಂದೂ ಸಮಾಜವು ಸಂಪ್ರದಾಯಗಳಾಗಿ ವಿಭಜನೆಯಾಗದೆ ಸ್ವಯಂಪ್ರೇರಿತವಾಗಿ ಒಗ್ಗೂಡಬೇಕಿದೆ! – ಸರ್ವೋಚ್ಚ ನ್ಯಾಯಾಲಯ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಪ್ರಕರಣ

ನವ ದೆಹಲಿ – ಹಿಂದೂ ಸಮಾಜವು ತನ್ನನ್ನು ತಾನು ಒಗ್ಗೂಡಿಸಿಕೊಳ್ಳಬೇಕಿದೆ. ‘ನಾವು ಒಂದು ಸಂಪ್ರದಾಯದವರು ಮತ್ತು ಅವರು ಇನ್ನೊಂದು ಸಂಪ್ರದಾಯದವರು’ ಎಂದು ನೀವು ಹೇಳಲು ಸಾಧ್ಯವಿಲ್ಲ. ಹಿಂದೂ ಸಂಪ್ರದಾಯಗಳು ಇತರರಿಗಾಗಿ ಬಾಗಿಲು ತೆರೆಯದಿದ್ದರೆ, ಅವರಿಗೇ ಹಾನಿಯಾಗುತ್ತದೆ. ೧೯೫೦ ರ ದಶಕದಲ್ಲಿ ಸಂವಿಧಾನದ ೨೫ (೨)(ಬಿ) ವಿಧಿಯನ್ನು ಇದಕ್ಕಾಗಿಯೇ ಸೇರಿಸಲಾಯಿತು; ಏಕೆಂದರೆ ಆಗ ಬಹಿಷ್ಕಾರದಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳು ಪ್ರಚಲಿತದಲ್ಲಿದ್ದವು. ಸಂವಿಧಾನದ ಈ ವಿಧಿಯು ಸರಕಾರಕ್ಕೆ ಸಮಾಜ ಕಲ್ಯಾಣ ಮತ್ತು ಸುಧಾರಣೆಗಾಗಿ ಕಾನೂನುಗಳನ್ನು ರೂಪಿಸುವ ಅಧಿಕಾರ ನೀಡುತ್ತದೆ ಎಂದು ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಅವಲೋಕಿಸಿದೆ.

ನ್ಯಾಯಾಲಯವು ಮುಂದುವರಿದು, ಹಿಂದೂ ಧರ್ಮದಲ್ಲಿ ವಿವಿಧ ಸಂಪ್ರದಾಯಗಳ ಆಧಾರದ ಮೇಲೆ ದೇವಸ್ಥಾನಗಳಲ್ಲಿ ಪೂಜೆ-ಅರ್ಚನೆಗಳ ವಿಷಯದಲ್ಲಿ ತಾರತಮ್ಯವಿರಬಾರದು. ನಾವು ಒಂದು ಸಂಪ್ರದಾಯದವರು ಮತ್ತು ಅವರು ಇನ್ನೊಂದು ಸಂಪ್ರದಾಯದವರು; ಆದ್ದರಿಂದ ಅವರು ನಮ್ಮ ದೇವಸ್ಥಾನಕ್ಕೆ ಬರುವಂತಿಲ್ಲ ಅಥವಾ ನಾವು ಅವರ ದೇವಸ್ಥಾನಕ್ಕೆ ಹೋಗುವಂತಿಲ್ಲ ಎಂಬ ನಿಲುವು ಹಿಂದೂ ಸಮಾಜದ ಮೂಲಭೂತ ಪರಿಕಲ್ಪನೆಗೆ ಅನುಗುಣವಾಗಿಲ್ಲ. ಒಂದು ವೇಳೆ ಯಾವುದೇ ಹಿಂದೂ ಸಂಪ್ರದಾಯವು ಇತರರಿಗಾಗಿ ತನ್ನ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಿದ್ದರೆ, ಅಂತಿಮವಾಗಿ ಆ ಸಂಪ್ರದಾಯಕ್ಕೇ ಹಾನಿಯಾಗಬಹುದು. ಆದ್ದರಿಂದ ವಿಶಾಲವಾದ ಏಕತೆ ಮತ್ತು ಪರಸ್ಪರ ಸ್ವೀಕಾರವು ಬಹಳ ಮುಖ್ಯವಾಗಿದೆ.

ಧಾರ್ಮಿಕ ಸಂಪ್ರದಾಯಗಳ ಪರಂಪರೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ನ್ಯಾಯಾಲಯಕ್ಕೆ ಕಷ್ಟ!

ಧಾರ್ಮಿಕ ಸಂಪ್ರದಾಯದ ಯಾವುದೇ ಪರಂಪರೆಯನ್ನು ‘ಅಗತ್ಯ’ ಅಥವಾ ‘ಅನಗತ್ಯ’ ಎಂದು ಘೋಷಿಸುವ ಮಾನದಂಡಗಳನ್ನು ನಿರ್ಧರಿಸುವುದು ನ್ಯಾಯಾಂಗ ಮಂಡಳಿಗಳಿಗೆ ಬಹಳ ಕಷ್ಟಕರವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯ ವೇಳೆ ಹೇಳಿದೆ. ಈ ಕೆಲಸವು ಅಸಾಧ್ಯವಾದುದಾಗಿದೆ. ಯಾವುದೋ ಒಂದು ಹಿಂದೂ ಸಂಪ್ರದಾಯದಲ್ಲಿ ಕೆಲವು ಪರಂಪರೆಗಳನ್ನು ಪಾಲಿಸಲಾಗುತ್ತಿದೆ ಎಂದಮಾತ್ರಕ್ಕೆ ಅವೆಲ್ಲವೂ ಅಗತ್ಯ ಎಂದು ಹೇಳಲು ಸಾಧ್ಯವಿಲ್ಲ. ವಿಶೇಷವಾಗಿ ಅವು ನೈತಿಕತೆ, ಸಾರ್ವಜನಿಕ ವ್ಯವಸ್ಥೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವಾಗ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ. ಸಮಾಜ ಸುಧಾರಣೆಯ ಹೆಸರಿನಲ್ಲಿ ಸರಕಾರವು ಧಾರ್ಮಿಕ ಪರಂಪರೆಗಳಲ್ಲಿ ಯಾವಾಗ ಹಸ್ತಕ್ಷೇಪ ಮಾಡಬಹುದು ಎಂಬುದರ ಕುರಿತು ಯಾವುದೇ ಸಾರ್ವತ್ರಿಕ ಮಾರ್ಗಸೂಚಿಗಳನ್ನು ನೀಡುವುದು ಕಷ್ಟ. ಇದು ಪ್ರತಿ ಪ್ರಕರಣದ ಸತ್ಯಾಸತ್ಯತೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಶಬರಿಮಲೆ ಮಂದಿರದ ಪರವಾಗಿ ಹಿರಿಯ ನ್ಯಾಯವಾದಿ ರಾಕೇಶ್ ದ್ವಿವೇದಿ ಅವರು ಮಾತನಾಡಿ, “ಧಾರ್ಮಿಕ ಸ್ವಾತಂತ್ರ್ಯದಲ್ಲಿ ಶ್ರದ್ಧಾವಂತರು ತಮಗಾಗಿ ಏನನ್ನು ನಿರ್ಧರಿಸುತ್ತಾರೆ ಎಂಬುದು ಸಹ ಸೇರಿದೆ. ಪೂಜೆಯನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು? ಎಂಬುದು ಶ್ರದ್ಧಾವಂತರ ನಿರ್ಧಾರವಾಗಿದೆ” ಎಂದು ಹೇಳಿದರು.