ಸ್ವರಸಮ್ರಾಜ್ಞಿ ಆಶಾ ಭೋಸಲೆ ವಿಧಿವಶ! – Asha Bhosle

ಮುಂಬಯಿ – ತಮ್ಮ ಕಂಠಸಿರಿಯಿಂದ ಚಿತ್ರರಂಗದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಮತ್ತು ಸದಾಬಹಾರ್ ಗೀತೆಗಳ ಮೂಲಕ ಮಂತ್ರಮುಗ್ಧಗೊಳಿಸುತ್ತಿದ್ದ ಹಿರಿಯ ಗಾಯಕಿ ಆಶಾ ಭೋಸಲೆ ಅವರು ಏಪ್ರಿಲ್ 12 ರಂದು ತಮ್ಮ 92ನೇ ವಯಸ್ಸಿನಲ್ಲಿ ವೃದ್ಧಾಪ್ಯದಿಂದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ನಾಟ್ಯ ಸಂಗೀತ, ಭಕ್ತಿಗೀತೆ, ಭಾವ, ಗಜಲ್, ಲಾವಣಿ, ಡಿಸ್ಕೋ, ಪಾಪ್ ಹಾಗೂ ಉಪ-ಶಾಸ್ತ್ರೀಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅವರು 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅತಿ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅವರ ಹೆಸರಿನಲ್ಲಿದೆ.

ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು. ಪುತ್ರ ಆನಂದ್ ಅವರು ಆಶಾ ಭೋಸಲೆ ಅವರ ನಿಧನದ ಸುದ್ದಿಯನ್ನು ಮಾಧ್ಯಮಗಳಿಗೆ ತಿಳಿಸಿದರು. ಏಪ್ರಿಲ್ 13 ರಂದು ಮಧ್ಯಾಹ್ನ 4 ಗಂಟೆಗೆ ಶಿವಾಜಿ ಪಾರ್ಕ್‌ನಲ್ಲಿರುವ ಸ್ಮಶಾನದಲ್ಲಿ ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಯಲಿದೆ.

ವಿವಿಧ ಭಾಷೆಗಳಲ್ಲಿ ಗಾಯನ

1933 ರಲ್ಲಿ ಜನಿಸಿದ ಅವರು 1949 ರಿಂದ ಗಾಯನ ವೃತ್ತಿಯನ್ನು ಆರಂಭಿಸಿದರು. ಆಶಾ ಭೋಸಲೆ ಅವರು ಮರಾಠಿ, ಹಿಂದಿ, ಬಂಗಾಳಿ, ಗುಜರಾತಿ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ‘ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ’ಯಾಗಿ ಅವರಿಗೆ 1981 ಮತ್ತು 1986 ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಅವರು 7 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಹಾಗೆಯೇ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೂ ಭಾಜನರಾಗಿದ್ದಾರೆ. ಮಹಾರಾಷ್ಟ್ರ ಸರಕಾರವು ಮಾರ್ಚ್ 2023 ರಲ್ಲಿ ಅವರಿಗೆ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತ್ತು.
ಆಶಾ ಭೋಸಲೆ ಅವರ ನಿಧನಕ್ಕೆ ಎಲ್ಲಾ ಕ್ಷೇತ್ರಗಳ ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ.

ಆಶಾ ಭೋಸಲೆ ಅವರು ಸಂಗೀತದ ಮೂಲಕ ವಿಶ್ವದಾದ್ಯಂತ ಜನರ ಮನಸ್ಸನ್ನು ಸ್ಪರ್ಶಿಸಿದ್ದಾರೆ! – ನರೇಂದ್ರ ಮೋದಿ, ಪ್ರಧಾನಮಂತ್ರಿ

ಆಶಾ ಭೋಸಲೆ ಅವರ ಹಲವಾರು ದಶಕಗಳ ಅದ್ವಿತೀಯ ಸಂಗೀತ ಪಯಣವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧಗೊಳಿಸಿದೆ. ಸಂಗೀತದ ಮೂಲಕ ಅವರು ವಿಶ್ವದಾದ್ಯಂತ ಅಸಂಖ್ಯಾತ ಜನರ ಮನಸ್ಸನ್ನು ಗೆದ್ದಿದ್ದಾರೆ. ಭಾವಪೂರ್ಣ ಗೀತೆಗಳಿಂದ ಹಿಡಿದು ಉತ್ಸಾಹಭರಿತ ಸಂಗೀತದವರೆಗೆ, ಅವರ ಧ್ವನಿಯಲ್ಲಿ ಕಾಲಾತೀತ ತೇಜಸ್ಸಿತ್ತು. ಆಶಾ ಭೋಸಲೆ ಅವರ ಹಾಡುಗಳು ಸದಾ ಜನರ ಜೀವನದಲ್ಲಿ ಅನುರಣಿಸುತ್ತಿರುತ್ತವೆ.

ಇಂತಹ ಬಹುಮುಖ ಪ್ರತಿಭೆಯ ಗಾಯಕಿ ಮತ್ತೆ ಸಿಗಲಾರರು! – ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ

ಆಶಾ ಭೋಸಲೆ ಅವರ ನಿಧನದಿಂದ ಮಂಗೇಶ್ಕರ್ ಕುಟುಂಬದ ಮತ್ತೊಂದು ನಕ್ಷತ್ರ ಕಳಚಿದಂತಾಗಿದೆ. ಸ್ವರಗಳ ಸುಂದರ ತೋಟ ಬರಿದಾಗಿದೆ. ಆಶಾತಾಯಿಯವರ ಧ್ವನಿಯೇ ಸಂಗೀತದ ಆತ್ಮವಾಗಿತ್ತು. ಗಾಯನದಲ್ಲಿನ ಸದಾ ಹಸಿರು ಋತು ಮತ್ತು ಭಾವನೆಗಳ ಸುಶ್ರಾವ್ಯ ಮಹಾಸಾಗರ ಎಂದರೆ ಅದು ಆಶಾತಾಯಿ. ಈಶ್ವರೀಯ ಧ್ವನಿ ಹೊಂದಿದ್ದ ಗಾಯಕಿ ಇಂದು ನಮ್ಮನ್ನಗಲಿದ್ದಾರೆ. ಅವರು ಅನೇಕ ಸಂಗೀತ ಪ್ರಕಾರಗಳಲ್ಲಿ ಹಾಡಿದ್ದಾರೆ. ಬದಲಾವಣೆಗಳನ್ನು ಅಷ್ಟೇ ಸಹಜವಾಗಿ ಅಳವಡಿಸಿಕೊಳ್ಳುತ್ತಿದ್ದ ಇಂತಹ ಬಹುಮುಖ ಪ್ರತಿಭೆಯ ಗಾಯಕಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ.