ಮಂತ್ರೋಚ್ಚಾರಣೆ ಮಾಡುವಾಗ ಪಾದರಕ್ಷೆ ತೆಗೆಯಲು ಹೇಳಿದ್ದಕ್ಕೆ ‘ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕ್ರೋಶ! – Mata Vaishno Devi Shrine Board

ಜಮ್ಮು – ‘ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ‘ಐ.ಎ.ಎಸ್.’ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಸಚಿನ ಕುಮಾರ್ ವೈಶ್ಯ ಅವರ ವಿಡಿಯೋವೊಂದು ಪ್ರಸಾರವಾಗಿದೆ. ಶ್ರೀ ವೈಷ್ಣೋದೇವಿಗೆ ಸಂಬಂಧಿಸಿದ ಕಟ್ರಾದ ಸಂಸ್ಥೆಯೊಂದರ ಉದ್ಘಾಟನೆಗೆ ಅವರು ತೆರಳಿದ್ದರು. ಆ ಸಮಯದಲ್ಲಿ ಅರ್ಚಕರು ಮಂತ್ರೋಚ್ಚಾರಣೆ ಮಾಡುತ್ತಿದ್ದರು. ಪಾದರಕ್ಷೆಗಳನ್ನು ತೆಗೆದು ಉದ್ಘಾಟನೆ ಮಾಡುವಂತೆ ಅರ್ಚಕರು ಹೇಳಿದಾಗ ಅವರು ಅಸಮಾಧಾನಗೊಂಡು ಕೋಪಗೊಂಡರು. “ಅದಕ್ಕಾಗಿಯೇ ನಾನು ಇಂತಹ ಸ್ಥಳಗಳಿಗೆ ಬರುವುದಿಲ್ಲ” ಎಂದು ಅವರು ಹೇಳಿದ್ದು ಕಂಡುಬಂದಿದೆ. ಇದರಿಂದ ನೆರೆದಿದ್ದ ಜನರಿಗೆ ಅಸಮಾಧಾನವಾಯಿತು; ಆದರೆ ಯಾರೂ ಅವರನ್ನು ವಿರೋಧಿಸಲಿಲ್ಲ.

೧. ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ತಕ್ಷಣವೇ ತೆಗೆದುಹಾಕುವಂತೆ ಅನೇಕರು ಒತ್ತಾಯಿಸಿದ್ದಾರೆ. ಕೆಲವರು ಅವರ ವರ್ತನೆಯನ್ನು ‘ಅಹಂಕಾರ’ ಎಂದು ಕರೆದಿದ್ದಾರೆ.

೨. “ಶ್ರೀ ವೈಷ್ಣೋದೇವಿ ಆಡಳಿತದ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಗೆ ಅಲ್ಲಿನ ಮೂಲಭೂತ ಧಾರ್ಮಿಕ ಸಂಪ್ರದಾಯಗಳೇ ಸ್ವೀಕಾರಾರ್ಹವಲ್ಲ ಎಂಬುದು ವಿಪರ್ಯಾಸ. ಶ್ರದ್ಧೆಗಿಂತ ಹುದ್ದೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ” ಎಂಬ ಟೀಕೆಯೂ ವ್ಯಕ್ತವಾಗಿದೆ.

೩. ಇಂತಹ ಮನಸ್ಥಿತಿ ಹೊಂದಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಭಾಜಪ ಯುವ ಮೋರ್ಚಾ ನಾಯಕ ತಾಂಡವ್ ಸಿಂಗ್ ಹೇಳಿದ್ದಾರೆ. ಆ ಸ್ಥಳದಲ್ಲಿ ಶ್ರದ್ಧೆ ಮತ್ತು ಸಂಪ್ರದಾಯಗಳನ್ನು ಗೌರವಿಸುವ ವ್ಯಕ್ತಿಯನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

  • ಮಂತ್ರೋಚ್ಚಾರಣೆ ಅಥವಾ ಪೂಜೆ ನಡೆಯುತ್ತಿರುವಾಗ ಪಾದರಕ್ಷೆಗಳನ್ನು ತೆಗೆಯುವುದು ಹಿಂದೂ ಧರ್ಮದ ಮೂಲಭೂತ ನಿಯಮವಾಗಿದೆ. ಇದನ್ನು ಪಾಲಿಸಲು ಸಿದ್ಧರಿಲ್ಲದ 'ಐ.ಎ.ಎಸ್.' ಅಧಿಕಾರಿಯೊಬ್ಬರು ಭಾರತದ ಪ್ರಮುಖ ದೇವಸ್ಥಾನವೊಂದರ ಆಡಳಿತಾಧಿಕಾರಿಯಾಗಿರುವುದು ಖೇದಕರ ವಿಚಾರ!
  • ಭಾರತದ ಆಡಳಿತದಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವ 'ಐ.ಎ.ಎಸ್.' ಅಧಿಕಾರಿಗಳಿಗೆ ಜಾತ್ಯತೀತತೆಯ ಹೆಸರಿನಲ್ಲಿ ಎಂತಹ ತರಬೇತಿ ನೀಡಲಾಗುತ್ತದೆ ಎಂಬುದೇ ಇದರಿಂದ ತಿಳಿಯುತ್ತದೆ!
  • ಮಸೀದಿಗೆ ಹೋದಾಗ ಅಲ್ಲಿನ ನಿಯಮಗಳನ್ನು ಉಲ್ಲಂಘಿಸುವ ಧೈರ್ಯವನ್ನು ಈ ಅಧಿಕಾರಿ ತೋರುತ್ತಿದ್ದರೇ?