ಪಾಕಿಸ್ತಾನದಲ್ಲಿ ರಾತ್ರಿ ೮ ಗಂಟೆಯ ನಂತರ ಲಾಕ್ ಡೌನ್ ! – ಸರಕಾರದ ನಿರ್ಧಾರ

ಕೊಲ್ಲಿ ಯುದ್ಧದ ಪರಿಣಾಮ

ಇಸ್ಲಾಮಾಬಾದ್ (ಪಾಕಿಸ್ತಾನ) – ಕೊಲ್ಲಿ ಯುದ್ಧದಿಂದಾಗಿ ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ನಿರ್ಮಾಣವಾಗಿದೆ. ಈ ಕಾರಣದಿಂದಾಗಿ ದೇಶಾದ್ಯಂತ ಮಾರುಕಟ್ಟೆಗಳು, ಶಾಪಿಂಗ್ ಮಾಲ್ ಗಳು ಮತ್ತು ಅಂಗಡಿಗಳನ್ನು ರಾತ್ರಿ ೮ ಗಂಟೆಗೆ ಮುಚ್ಚಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಔಷಧದ ಅಂಗಡಿಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಪಂಜಾಬ್, ಬಲೂಚಿಸ್ತಾನ, ಇಸ್ಲಾಮಾಬಾದ್ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ಹಲವು ಸ್ಥಳಗಳಲ್ಲಿ ಈ ನಿಯಮಗಳನ್ನು ಜಾರಿಗೊಳಿಸಲಾಗುವುದು. ಖೈಬರ್ ಪಖ್ತೂನ್ಖ್ವಾದ ಕೆಲವು ಪ್ರಮುಖ ನಗರಗಳಿಗೆ ಮಾತ್ರ ರಾತ್ರಿ ೯ ಗಂಟೆಯವರೆಗೆ ಸಡಿಲಿಕೆ ನೀಡಲಾಗಿದೆ. ವಾಣಿಜ್ಯ ಸ್ಥಳಗಳ ಹೊರತಾಗಿ ವಿವಾಹ ಸಮಾರಂಭಗಳು, ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಿಗೂ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಸಮಯ ನೀಡಲಾಗಿದೆ.

ಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ೪೫೮ ರೂ., ಡೀಸೆಲ್ ೫೨೦ ರೂ. !

ಪಾಕಿಸ್ತಾನದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ೪೫೮ ರೂಪಾಯಿಗಳಿಗೆ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ ೫೨೦ ರೂಪಾಯಿಗಳಿಗೆ ತಲುಪಿದೆ. ಸರಕಾರವು ಈಗ ಈ ದರಗಳಲ್ಲಿ ಸ್ವಲ್ಪ ಕಡಿತಗೊಳಿಸಿ ಪೆಟ್ರೋಲ್ ಅನ್ನು ೩೪೮ ರೂಪಾಯಿಗಳಿಗೆ ಇಳಿಸಿದೆಯಾದರೂ, ಈ ದರಗಳು ಸಾಮಾನ್ಯ ಜನರ ಜೇಬಿಗೆ ಕೈಗೆಟಕುವಂತಿಲ್ಲ. ನಾಗರಿಕರಿಗೆ ಸಮಾಧಾನ ನೀಡಲು ಕೆಲವು ಭಾಗಗಳಲ್ಲಿ ಒಂದು ತಿಂಗಳ ಕಾಲ ಉಚಿತ ಸಾರ್ವಜನಿಕ ಸಾರಿಗೆ ಸೇವೆಯನ್ನು ನೀಡುವುದಾಗಿ ಸರಕಾರವು ಘೋಷಿಸಿದೆ.