Deep State : ಮಹಮ್ಮದ್ ಯೂನುಸ್ ಅವರಿಗೆ ‘ಡೀಪ್ ಸ್ಟೇಟ್’ ನ ಸಹಾಯ !

  • ಬಾಂಗ್ಲಾದೇಶ: ಮಹಮ್ಮದ್ ಯೂನುಸ್ ಅವರ ಆಪ್ತ ಆಸಿಫ್ ಮಹಮೂದ್ ಶೋಜಿಬ್ ಭುಇಯಾ ಅವರ ಹೇಳಿಕೆ

  • ಮಹಮ್ಮದ್ ಯೂನುಸ್ ಅವರನ್ನು ೨೦೨೯ ರವರೆಗೆ ಅಧಿಕಾರದಲ್ಲಿರಿಸಲು ‘ಡೀಪ್ ಸ್ಟೇಟ್’ ಸಂಚು ರೂಪಿಸಿತ್ತು!

(ಡೀಪ್ ಸ್ಟೇಟ್ ಎಂದರೆ ಸರಕಾರಿ ಅಧಿಕಾರಿಗಳು, ಸೈನ್ಯಾಧಿಕಾರಿಗಳು, ಖಾಸಗಿ ಸಂಸ್ಥೆಗಳು ಮತ್ತು ಕೋಟ್ಯಧಿಪತಿ ಉದ್ಯಮಿಗಳ ಅಂತಾರಾಷ್ಟ್ರೀಯ ಮಟ್ಟದ ಗುಪ್ತ ಜಾಲ. ಈ ವ್ಯವಸ್ಥೆಯ ಮೂಲಕ ಒಂದು ದೇಶದ ಸರಕಾರಿ ಧೋರಣೆಗಳನ್ನು ಖಾಸಗಿ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಮಾಡಲಾಗುತ್ತದೆ ಅಥವಾ ಅವರಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.)

ಢಾಕಾ (ಬಾಂಗ್ಲಾದೇಶ) – ಶೇಖ್ ಹಸೀನಾ ಅವರನ್ನು ಆಗಸ್ಟ್ ೫, ೨೦೨೪ ರಂದು ಅಧಿಕಾರದಿಂದ ಕೆಳಗಿಳಿಸಿದ ನಂತರ, ‘ಡೀಪ್ ಸ್ಟೇಟ್’ ಮಹಮ್ಮದ್ ಯೂನುಸ್ ಅವರನ್ನು ಕನಿಷ್ಠ ೨೦೨೯ ರವರೆಗೆ ಅಧಿಕಾರದಲ್ಲಿರಿಸಲು ಸಂಪೂರ್ಣ ಸಂಚು ರೂಪಿಸಿತ್ತು ಎಂದು ಯೂನುಸ್ ಸರಕಾರದ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಶೋಜಿಬ್ ಭುಇಯಾ ಗಂಭೀರ ಹೇಳಿಕೆ ನೀಡಿದ್ದಾರೆ. ಆಸಿಫ್ ಅವರು ಡಿಸೆಂಬರ್ ೨೬, ೨೦೨೪ ರಂದು ‘ನ್ಯಾಷನಲ್ ಸಿಟಿಜನ್ ಪಾರ್ಟಿ’ಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯ ಸಂದರ್ಭವನ್ನು ಉಲ್ಲೇಖಿಸಿದರು. ಈ ಪಕ್ಷವು ಮಹಮ್ಮದ್ ಯೂನುಸ್ ಮತ್ತು ಅವರ ಸಹಚರರ ಬೆಂಬಲದೊಂದಿಗೆ ಸ್ಥಾಪಿತವಾದ ರಾಜಕೀಯ ಪಕ್ಷವಾಗಿದೆ.

ಆಸಿಫ್ ಮಹಮೂದ್ ಮಾಡಿದ ಕೆಲವು ಪ್ರಮುಖ ಪ್ರತಿಪಾದನೆಗಳು !

೧. ನಾವು ಸರಕಾರದಲ್ಲಿದ್ದ ಆರಂಭದ ದಿನಗಳಲ್ಲಿ ನಮಗೆ ಪ್ರಭಾವಶಾಲಿ ಸಂಸ್ಥೆಗಳಿಂದ ಪ್ರಸ್ತಾವನೆಗಳು ಬಂದಿದ್ದವು. ಈ ಸಂಸ್ಥೆಗಳನ್ನು ಸಾಮಾನ್ಯವಾಗಿ ‘ಡೀಪ್ ಸ್ಟೇಟ್’ ಎಂದು ಕರೆಯಲಾಗುತ್ತದೆ. ಅವರು ಶೇಖ್ ಹಸೀನಾ ಅವರ ೨೦೨೯ ರವರೆಗಿನ ಉಳಿದ ಅವಧಿಯನ್ನು ನಾವೇ ಪೂರೈಸಬೇಕು ಮತ್ತು ಅದಕ್ಕಾಗಿ ಆ ಸಂಸ್ಥೆಗಳು ನಮಗೆ ಸಂಪೂರ್ಣ ಬೆಂಬಲ ನೀಡುತ್ತವೆ ಎಂದು ಅವು ಸೂಚಿಸಿದ್ದವು.

೨. ಆದರೆ ಈ ಸಂಸ್ಥೆಗಳ ಕೆಲವು ನಿರ್ದಿಷ್ಟ ಬೇಡಿಕೆಗಳಿದ್ದವು. ಕೆಲವು ಕ್ಷೇತ್ರಗಳಲ್ಲಿ ಅವರ ಹಿತಾಸಕ್ತಿಗಳನ್ನು ಮುಂದುವರಿಸುವ ವಿಷಯಗಳೂ ಸೇರಿದ್ದವು. ಇದಕ್ಕಾಗಿ ಅವರು ಸಂಪೂರ್ಣ ನೀಲನಕ್ಷೆಯನ್ನೂ ಸಿದ್ಧಪಡಿಸಿದ್ದರು.

೩. ವಿರೋಧ ಪಕ್ಷವಾದ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’ಯ ನಾಯಕರಿಗೆ ಈಗಾಗಲೇ ಶಿಕ್ಷೆಯಾಗಿದೆ, ಅದು ಮುಂದುವರಿದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು. ಇಂತಹ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದೀರ್ಘಕಾಲ ಬಾಕಿ ಉಳಿಯುವಂತೆ ಮಾಡಬಹುದು. ವಿಚಾರಣೆಯನ್ನು ಪದೇ ಪದೇ ಮುಂದೂಡುವ ಮೂಲಕ ಹೇಗೆ ಆ ಪ್ರಕ್ರಿಯೆ ಮಾಡಲಾಗುತ್ತದೆ ಎಂಬುದು ನಿಮಗೆ ತಿಳಿದೇ ಇದೆ. (ಇದರರ್ಥ ‘ಡೀಪ್ ಸ್ಟೇಟ್’ಗೆ ಬಾಂಗ್ಲಾದೇಶದಲ್ಲಿ ಯಾವುದೇ ಪ್ರಭಾವಶಾಲಿ ಪಕ್ಷಗಳ ಅಸ್ತಿತ್ವ ಇಷ್ಟವಿರಲಿಲ್ಲ.)

೪. ತಾರಿಕ್ ರೆಹಮಾನ್ ಅವರೂ ಕೂಡ ದೋಷಿ ಎಂದು ಸಾಬೀತಾಗಿದೆ ಮತ್ತು ಅವರ ಶಿಕ್ಷೆ ಮುಂದುವರಿದರೆ, ಚುನಾವಣೆಗಳು ನಡೆದರೂ ಅವರು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

೫. ನಮ್ಮ ಮಧ್ಯಂತರ ಸರಕಾರ ಅಧಿಕಾರದಲ್ಲಿ ಮುಂದುವರಿಯಲು ಸಂಪೂರ್ಣ ಕಾರ್ಯತಂತ್ರವನ್ನು ಸಿದ್ಧಪಡಿಸಲಾಗಿತ್ತು.

೬. ಆದರೆ ನಾವು ಆ ರೀತಿಯ ಒಪ್ಪಂದವನ್ನು ಸ್ವೀಕರಿಸಲಿಲ್ಲ. ನಾವು ಯಾವಾಗಲೂ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಿದ್ದೇವೆ ಮತ್ತು ನಮ್ಮ ಬದ್ಧತೆಯಿಂದಾಗಿಯೇ ಚುನಾವಣೆಗಳು ನಡೆದವು. ಚುನಾವಣೆಗಳ ಬಗ್ಗೆ ಯಾವುದೇ ಪ್ರಶ್ನೆಗಳು ಉದ್ಭವಿಸಬಾರದೆಂಬ ಕಾರಣಕ್ಕಾಗಿಯೇ ನಾವು ಸ್ವಯಂಪ್ರೇರಿತರಾಗಿ ಅಧಿಕಾರ ಬಿಟ್ಟೆವು.

ಯಾರು ಈ ಆಸಿಫ್ ಮಹಮೂದ್ ಶೋಜಿಬ್ ಭುಇಯಾ ?

ಯುವ ನಾಯಕರಾದ ಆಸಿಫ್ ಮಹಮೂದ್ ಶೋಜಿಬ ಭುಇಯಾ ಅವರು ಜುಲೈ-ಆಗಸ್ಟ್ ೨೦೨೪ ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಚಳವಳಿಯ ಪ್ರಮುಖ ಸಂಯೋಜಕರಲ್ಲಿ ಒಬ್ಬರಾಗಿದ್ದರು. ಅವರು ಮಧ್ಯಂತರ ಸರಕಾರದಲ್ಲಿ ಯುವಜನ ಮತ್ತು ಕ್ರೀಡಾ ಸಚಿವಾಲಯದ ಸಲಹೆಗಾರರಾಗಿದ್ದರು. ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನುಸ್ ಅವರ ಆಪ್ತರೆಂದು ಇವರನ್ನು ಪರಿಗಣಿಸಲಾಗುತ್ತದೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದ ರಾಜಕೀಯದ ಮೂಲಕ ಅಲ್ಲಿನ ಹಿಂದೂಗಳ ಮೇಲಿನ ದಾಳಿಗಳು, ಅಮೆರಿಕದ ‘ಡೀಪ್ ಸ್ಟೇಟ್’ನದ್ದೇ ಪಿತೂರಿಯಾಗಿದೆ ಎಂಬ ಆರೋಪ ಸತ್ಯ ಎಂಬುದು ಇದರಿಂದ ತಿಳಿದುಬರುತ್ತದೆ !
  • ಒಂದು ವೇಳೆ ಈ ಹೇಳಿಕೆಯಲ್ಲಿ ಸತ್ಯಾಂಶವಿದ್ದರೆ, ಭಾರತದಲ್ಲಿಯೂ ಭವಿಷ್ಯದಲ್ಲಿ ನಾಗರಿಕರ ಒಂದು ಸಮೂಹವನ್ನು ಪ್ರಚೋದಿಸಿ ಇಂತಹ ಪಿತೂರಿ ನಡೆಸಬಹುದು ಎಂಬುದನ್ನು ನೆನಪಿಡಬೇಕು. ಹೀಗಾಗದಂತೆ ತಡೆಯಲು ಭಾರತೀಯರು, ವಿಶೇಷವಾಗಿ ಹಿಂದೂಗಳು ಜಾಗೃತರಾಗುವುದು ಅತ್ಯಗತ್ಯ! ಇಲ್ಲವಾದರೆ ಬಾಂಗ್ಲಾದೇಶದಂತೆ ಹಿಂದೂಗಳೇ ಈ ಪಿತೂರಿಗೆ ಬಲಿಯಾಗುತ್ತಾರೆ ಎಂಬುದನ್ನು ಮರೆಯಬೇಡಿ !