8 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದ ಬಾಡಿಗೆದಾರ; ಪೊಲೀಸ್ ಚಕಮಕಿಯಲ್ಲಿ ಸಾವು !

ಬಾಕಿ ಇರುವ ಮನೆ ಬಾಡಿಗೆ ನೀಡುವಂತೆ ಒತ್ತಡ ಹೇರಿದ್ದಕ್ಕಾಗಿ ಮನೆ ಮಾಲೀಕನ ಮಗಳ ಹತ್ಯೆ!

ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ಮನೆ ಮಾಲೀಕನ 8 ವರ್ಷದ ಮಗಳನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಬಾಡಿಗೆದಾರ ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ ಹತನಾಗಿದ್ದಾನೆ. ತಲೆಮರೆಸಿಕೊಂಡಿದ್ದ ಆರೋಪಿ ಫಿರೋಜಾಬಾದ್ ಗೆ ಪಲಾಯನ ಮಾಡಲು ಸಿದ್ಧತೆ ನಡೆಸುತ್ತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಹತನಾದ ಬಾಡಿಗೆದಾರನನ್ನು ಸುನಿಲ್ (29 ವರ್ಷ) ಎಂದು ಗುರುತಿಸಲಾಗಿದ್ದು, ಈತ ಮಾರ್ಚ್ 24 ರಂದು ಶೂ ಉದ್ಯಮಿಯ ಮಗಳ ಗಂಟಲು ಸೀಳಿ ಹತ್ಯೆ ಮಾಡಿದ್ದನು. ಕೊಲೆಯ ನಂತರ ಈತ ನಾಪತ್ತೆಯಾಗಿದ್ದನು.

ಪೊಲೀಸ್ ತನಿಖೆಯಲ್ಲಿ ತಿಳಿದುಬಂದ ವಿಷಯವೇನೆಂದರೆ, ಬಾಕಿ ಇದ್ದ ಮನೆ ಬಾಡಿಗೆಯನ್ನು ಪಾವತಿಸದ ಕಾರಣಕ್ಕಾಗಿ ಬಾಲಕಿಯ ಚಿಕ್ಕಪ್ಪ ಸುನಿಲ್ ಗೆ ಕೆಲ ದಿನಗಳ ಹಿಂದೆ ಕಪಾಳಮೋಕ್ಷ ಮಾಡಿದ್ದರು. ಅಲ್ಲದೆ ಆತನ ಕೋಣೆಗೆ ಬೀಗ ಹಾಕಿದ್ದರು. ಸುನಿಲ್ ನಂತರ ಬಾಡಿಗೆಯನ್ನು ಪಾವತಿಸಿದ್ದರೂ ಸಹ, ‘ನೋಡಿಕೊಳ್ಳುತ್ತೇನೆ’ ಎಂದು ಬೆದರಿಕೆ ಹಾಕಿದ್ದನು. ಇದರ ಸೇಡು ತೀರಿಸಿಕೊಳ್ಳಲು ಆತ ಮಗುವಿನ ಹತ್ಯೆ ಮಾಡಿದನು.