ಲಾಕ್ ಡೌನ್ ಸುದ್ದಿಗಳು ಕೇವಲ ಊಹಾಪೋಹ (ವದಂತಿ) ! – ಕೇಂದ್ರ ಸರಕಾರ

(ಲಾಕ್ ಡೌನ್ ಎಂದರೆ ಸಂಚಾರ ನಿರ್ಬಂಧ)

ನವ ದೆಹಲಿ – ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್.ಪಿ.ಜಿ. ಗ್ಯಾಸ್ ಅಭಾವ ಮತ್ತು ಪೆಟ್ರೋಲ್-ಡೀಸೆಲ್ ದರ ಏರಿಕೆಯ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಭಾರತದಲ್ಲಿ ಲಾಕ್ ಡೌನ್ ಆಗಲಿದೆ ಎಂಬ ವದಂತಿಗಳು ಹಬ್ಬಿವೆ. ಇದರಿಂದ ನಾಗರಿಕರಲ್ಲಿ ಭೀತಿಯ ವಾತಾವರಣ ಮೂಡಿದ್ದು, ಕೆಲವು ನಗರಗಳಲ್ಲಿ ಪೆಟ್ರೋಲ್ ಬಂಕ್ ಗಳ ಮುಂದೆ ಜನರು ದೊಡ್ಡ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಈ ಕುರಿತು ಈಗ ಕೇಂದ್ರ ಸರಕಾರವು ಸ್ಪಷ್ಟನೆ ನೀಡಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಭಾರತದಲ್ಲಿ ಲಾಕ್ ಡೌನ್ ಆಗಲಿದೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳು. ಭಾರತ ಸರಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ. ಇಂತಹ ಊಹಾಪೋಹಗಳನ್ನು ಹಬ್ಬಿಸಿ ಭೀತಿ ಮೂಡಿಸುವುದು ಬೇಜವಾಬ್ದಾರಿತನದ ಮತ್ತು ಹಾನಿಕರ ಕೃತ್ಯವಾಗಿದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿ ಅನಿಶ್ಚಿತವಾಗಿದ್ದರೂ, ನಾವು ಇಂಧನ ಪೂರೈಕೆ ಮತ್ತು ಅಗತ್ಯ ವಸ್ತುಗಳ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದೇವೆ. ದೇಶದಲ್ಲಿ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಸುಗಮ ಪೂರೈಕೆಯಾಗುವಂತೆ ಸರಕಾರವು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಅಡೆತಡೆಯಿಲ್ಲದೆ ಇಂಧನ ಪೂರೈಕೆ ಮುಂದುವರಿದಿದೆ. ಯಾವುದೇ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ, ಎಂದು ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ !

ಕೇಂದ್ರ ಸರಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 13 ರೂಪಾಯಿಗಳಿಂದ 3 ರೂಪಾಯಿಗಳಿಗೆ ಮತ್ತು ಡೀಸೆಲ್ ಮೇಲಿನ ಸುಂಕವನ್ನು 10 ರೂಪಾಯಿಗಳಿಂದ ಶೂನ್ಯಕ್ಕೆ ಇಳಿಸಿದೆ. ಈ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಾತನಾಡಿ, ನಮ್ಮ ದೇಶದಲ್ಲಿ ತೈಲ ಮತ್ತು ಅನಿಲದ ಉತ್ಪಾದನೆ ಎಷ್ಟು ಕಡಿಮೆ ಇದೆ ಎಂಬುದು ಸಾಮಾನ್ಯ ಜನರಿಗೂ ತಿಳಿದಿದೆ. ನಾವು ಇತರ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರಿಗೂ ಗ್ಯಾಸ್ ಮತ್ತು ಪೆಟ್ರೋಲ್ ಅಗತ್ಯವಿದೆ. ಯಾವುದೇ ಪರಿಸ್ಥಿತಿಯಲ್ಲಿ ದರಗಳು ಏರಿಕೆಯಾಗಬಾರದು ಮತ್ತು ಬೆಲೆಗಳು ನಿಯಂತ್ರಣದಲ್ಲಿರಬೇಕು ಎಂಬ ಉದ್ದೇಶದಿಂದ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಂಕವನ್ನು ಕಲ್ಪಿಸಲಾಗದಷ್ಟು ಕಡಿಮೆ ಮಾಡಲಾಗಿದೆ, ಎಂದು ಹೇಳಿದರು.

ರಾಜ್ಯಗಳ ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಪೂರೈಕೆಯಲ್ಲಿ ಶೇ. 20 ರಷ್ಟು ಹೆಚ್ಚಳ !

ಕೇಂದ್ರ ಸರಕಾರವು ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಹಂಚಿಕೆಯಲ್ಲಿ ಬದಲಾವಣೆ ಮಾಡಿದೆ. ರಾಜ್ಯಗಳಿಗೆ ನೀಡಲಾಗುವ ಎಲ್.ಪಿ.ಜಿ. ಪೂರೈಕೆಯಲ್ಲಿ ಹೆಚ್ಚಳ ಮಾಡಲಾಗಿದ್ದು, ಶೇ. 20 ರಷ್ಟು ಹೆಚ್ಚಿನ ಗ್ಯಾಸ್ ನೀಡಲಾಗುವುದು. ಈ ಹೆಚ್ಚುವರಿ ಗ್ಯಾಸ್ ಅನ್ನು ಸಂಪೂರ್ಣವಾಗಿ ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುವುದು. ಪ್ರಮುಖವಾಗಿ ಸ್ಟೀಲ್, ಆಟೋಮೊಬೈಲ್, ಟೆಕ್ಸ್ ಟೈಲ್ ಮತ್ತು ಇತರ ಉದ್ಯಮಗಳಿಗೆ ಈ ಗ್ಯಾಸ್ ಪೂರೈಸಲಾಗುವುದು