ಯುದ್ಧದಿಂದ ಭಾರತಕ್ಕೂ ಸವಾಲು! – PM Narendra Modi

  • ಯುದ್ಧದಿಂದ ಉಂಟಾದ ಬಿಕ್ಕಟ್ಟಿನ ಕುರಿತು ಪ್ರಧಾನ ಮಂತ್ರಿ ಮೋದಿ ಅವರು ಲೋಕಸಭೆಯಲ್ಲಿ ಸರಕಾರದ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದರು

  • ಕೊಲ್ಲಿ ದೇಶಗಳಲ್ಲಿನ ಭಾರತೀಯರ ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದಾಗಿ ಮಾಹಿತಿ!

ನವದೆಹಲಿ – ಪಶ್ಚಿಮ ದೇಶಗಳ ಪರಿಸ್ಥಿತಿ ಕಳವಳಕಾರಿಯಾಗಿದೆ. ಈ ಯುದ್ಧ ಆರಂಭವಾಗಿ 3 ವಾರಗಳಿಗಿಂತ ಹೆಚ್ಚು ಕಾಲ ಕಳೆದಿದೆ. ಇದರಿಂದ ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಇಡೀ ಜಗತ್ತು ಯುದ್ಧ ನಿಲ್ಲಿಸುವಂತೆ ಒತ್ತಾಯಿಸುತ್ತಿದೆ. ಭಾರತದ ಮುಂದೆಯೂ ಈ ಯುದ್ಧದಿಂದ ಸವಾಲುಗಳು ಎದುರಾಗಿವೆ. ಆದ್ದರಿಂದ ಈ ಸಂಕಷ್ಟದ ವಿರುದ್ಧ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಯುದ್ಧದ ಕುರಿತು ಮಾತನಾಡುತ್ತಾ ಕರೆ ನೀಡಿದರು.

ಪ್ರಧಾನ ಮಂತ್ರಿ ಮೋದಿ ಅವರು ಮಂಡಿಸಿದ ಪ್ರಮುಖ ಅಂಶಗಳು

1. ಯುದ್ಧ ಆರಂಭವಾದಾಗಿನಿಂದ, ಸಂತ್ರಸ್ತ ದೇಶಗಳಲ್ಲಿರುವ ಪ್ರತಿಯೊಬ್ಬ ಭಾರತೀಯನಿಗೂ ಅಗತ್ಯ ನೆರವು ನೀಡಲಾಗುತ್ತಿದೆ. ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಅಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ. ಎಲ್ಲರೂ ಭಾರತೀಯರ ಸುರಕ್ಷತೆಯ ಭರವಸೆ ನೀಡಿದ್ದಾರೆ. ಈ ಅವಧಿಯಲ್ಲಿ ಕೆಲವು ಜನರು ಮೃತಪಟ್ಟಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅವರ ಕುಟುಂಬಗಳಿಗೆ ಅಗತ್ಯ ಸಹಾಯವನ್ನು ಮಾಡಲಾಗುತ್ತಿದೆ.

2. ಯುದ್ಧ ಆರಂಭವಾದಾಗಿನಿಂದ ಇದುವರೆಗೆ 3 ಲಕ್ಷದ 75 ಸಾವಿರಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇರಾನ್‌ನಿಂದ ಇದುವರೆಗೆ 1 ಸಾವಿರ ಭಾರತೀಯರು ಸುರಕ್ಷಿತವಾಗಿ ಮರಳಿದ್ದಾರೆ. ಇವರಲ್ಲಿ 700 ಕ್ಕೂ ಹೆಚ್ಚು ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿದ್ದಾರೆ. ಇದರರ್ಥ ಸರಕಾರವು ಸಂವೇದನಾಶೀಲವಾಗಿದೆ, ಜಾಗರೂಕವಾಗಿದೆ ಮತ್ತು ಪ್ರತಿಯೊಂದು ಸಹಾಯಕ್ಕೂ ಸಿದ್ಧವಾಗಿದೆ.

3. ಯುದ್ಧದಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಪೂರೈಕೆಗೆ ಅಡ್ಡಿಯಾಗಬಾರದು ಹಾಗೂ ದೇಶದ ಸಾಮಾನ್ಯ ನಾಗರಿಕರಿಗೆ ತೊಂದರೆಯಾಗಬಾರದು ಎಂದು ಸರಕಾರ ಸಹಾಯ ಮಾಡುತ್ತಿದೆ. ದೇಶವು ತನ್ನ ಅಗತ್ಯದ 60% ಎಲ್‌ಪಿಜಿಯನ್ನು (ದ್ರವೀಕೃತ ಪೆಟ್ರೋಲಿಯಂ ಅನಿಲ) ಆಮದು ಮಾಡಿಕೊಳ್ಳುತ್ತದೆ. ಅನಿಶ್ಚಿತತೆಯ ಕಾರಣದಿಂದಾಗಿ ಸರಕಾರವು ಎಲ್‌ಪಿಜಿಯ ಗೃಹಬಳಕೆಗೆ ಆದ್ಯತೆ ನೀಡಿದೆ. ದೇಶದಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸುಗಮಗೊಳಿಸಲು ಕೆಲಸ ನಡೆಯುತ್ತಿದೆ.

ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್‌ಗೆ ಪರ್ಯಾಯವಾಗಿ ಎಥೆನಾಲ್ ಬಳಕೆ!

ಕಳೆದ 10 ರಿಂದ 12 ವರ್ಷಗಳಲ್ಲಿ ದೇಶದಲ್ಲಿ ಎಥೆನಾಲ್ ಉತ್ಪಾದನೆಗೆ ಅಭೂತಪೂರ್ವ ಕೆಲಸ ನಡೆದಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು. ಇದರಿಂದಾಗಿ ಪ್ರತಿ ವರ್ಷ ನಾಲ್ಕುವರೆ ಕೋಟಿ ಬ್ಯಾರೆಲ್ ತೈಲದ ಆಮದನ್ನು ಕಡಿಮೆ ಮಾಡಲಾಗುತ್ತಿದೆ. ಇದರ ಲಾಭ ರೈಲ್ವೆಯ ವಿದ್ಯುದ್ದೀಕರಣಕ್ಕೂ ಸಿಗುತ್ತಿದೆ, ಇಲ್ಲದಿದ್ದರೆ ಪ್ರತಿ ವರ್ಷ ಸುಮಾರು 180 ಕೋಟಿ ಲೀಟರ್ ಹೆಚ್ಚುವರಿ ಡೀಸೆಲ್ ಬೇಕಾಗುತ್ತಿತ್ತು. ನಾವು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಿದ್ದೇವೆ. ಇಂದು ಯಾವ ಪ್ರಮಾಣದಲ್ಲಿ ಪರ್ಯಾಯ ಇಂಧನದ ಮೇಲೆ ಕೆಲಸ ನಡೆಯುತ್ತಿದೆಯೋ, ಅದರ ಮೂಲಕ ಭಾರತದ ಭವಿಷ್ಯ ಇನ್ನಷ್ಟು ಸುರಕ್ಷಿತವಾಗಲಿದೆ.