ನಕಲಿ ಬಾಬಾ ಅಶೋಕ್ ಖರಾತ್ ವಿರುದ್ಧದ ಕಾರ್ಯಾಚರಣೆ ಯೋಜನಾಬದ್ಧ! – ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ಮುಂಬಯಿ, ಮಾರ್ಚ್ 23 (ವಾರ್ತೆ) – ನಕಲಿ ಬಾಬಾ ಅಶೋಕ್ ಖರಾತ್‌ನನ್ನು ಹಿಡಿಯಲು ಬಲೆ ಬೀಸಲಾಗಿತ್ತು. ಇತರ ಜಿಲ್ಲೆಗಳಿಂದ ಬಂದ ದೂರುಗಳ ಆಧಾರದ ಮೇಲೆ ಮಾರ್ಚ್ 10 ರಂದೇ ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿತ್ತು. ನಕಲಿ ಬಾಬಾ ಅಶೋಕ್ ಖರಾತ್ ವಿರುದ್ಧದ ಪೊಲೀಸರ ಕಾರ್ಯಾಚರಣೆಯು ಯೋಜನಾಬದ್ಧವಾಗಿತ್ತು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾರ್ಚ್ 23 ರಂದು ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.

ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಅವರು ನಿಲುವಳಿ ಪ್ರಸ್ತಾವದ ಆಧಾರದ ಮೇಲೆ, ‘ನಕಲಿ ಬಾಬಾ ಖರಾತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ಆತನೊಂದಿಗೆ ನಂಟು ಹೊಂದಿರುವ ಸಚಿವರ ರಾಜೀನಾಮೆ ಪಡೆಯಬೇಕು’ ಎಂದು ಸದನದಲ್ಲಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಕಲಿ ಬಾಬಾ ಅಶೋಕ್ ಖರಾತ್ ತನ್ನಲ್ಲಿ ತಥಾಕಥಿತ ಶಕ್ತಿಗಳಿವೆ ಎಂದು ಹೇಳಿಕೊಂಡು, ಆ ಮೂಲಕ ದಾರಿ ತಪ್ಪಿಸಿ ಅನೇಕ ಮಹಿಳೆಯರೊಂದಿಗೆ ದುಷ್ಕೃತ್ಯ ಎಸಗಿರುವ ವಿಚಾರ ಬೆಳಕಿಗೆ ಬರುತ್ತಿದೆ. ಈ ಬಗ್ಗೆ ದೂರು ನೀಡಲು ಅನೇಕ ಮಹಿಳೆಯರು ಮುಂದೆ ಬರುತ್ತಿರಲಿಲ್ಲ. ಅವರಿಗೆ ಧೈರ್ಯ ತುಂಬಿದ ನಂತರ ಕೆಲವು ಮಹಿಳೆಯರು ದೂರು ನೀಡಲು ಮುಂದೆ ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ದೂರು ದಾಖಲಿಸಲಿದ್ದಾರೆ. ಈ ಬಗ್ಗೆ ನಾನು ಮಾರ್ಚ್ 24 ರಂದು ಸದನದಲ್ಲಿ ಸವಿವರವಾದ ಹೇಳಿಕೆ ನೀಡಲಿದ್ದೇನೆ,” ಎಂದರು.

ಚರ್ಚೆಗೆ ಆಗ್ರಹಿಸಿ ಸದನದಲ್ಲಿ ಗದ್ದಲ!

ನಕಲಿ ಬಾಬಾ ಅಶೋಕ್ ಖರಾತ್ ಮಾಡಿರುವ ವಂಚನೆಯ ಕುರಿತು ಸದನದಲ್ಲಿ ಚರ್ಚೆಯಾಗಬೇಕು ಎಂಬ ಬೇಡಿಕೆಯನ್ನು ಮಹಾವಿಕಾಸ್ ಅಘಾಡಿಯ ಶಾಸಕರು ಸದನದಲ್ಲಿ ಮುಂದಿಟ್ಟರು. ಮುಖ್ಯಮಂತ್ರಿಗಳು ಸವಿವರವಾದ ಮಾಹಿತಿ ನೀಡುವುದಾಗಿ ಹೇಳಿದರೂ, ಆಡಳಿತ ಪಕ್ಷ ಹಾಗೂ ಮಹಾವಿಕಾಸ್ ಅಘಾಡಿಯ ಶಾಸಕರು ಸದನದಲ್ಲಿ ಗದ್ದಲ ಉಂಟುಮಾಡಿದರು.