ಹೆಂಡತಿ ಅಡುಗೆ ಅಥವಾ ಮನೆಗೆಲಸ ಮಾಡದಿರುವುದು ಕ್ರೌರ್ಯವಲ್ಲ! – ಸುಪ್ರೀಂ ಕೋರ್ಟ್

ನವದೆಹಲಿ – ಪತ್ನಿಯು ಅಡುಗೆ, ಬಟ್ಟೆ ಒಗೆಯುವುದು ಅಥವಾ ಪಾತ್ರೆ ತೊಳೆಯುವುದು ಮುಂತಾದ ಮನೆ ಗೆಲಸಗಳನ್ನು ಮಾಡದಿದ್ದರೆ ಅದನ್ನು ‘ವೈವಾಹಿಕ ಕ್ರೌರ್ಯ’ ಎಂದು ಪರಿಗಣಿಸಲಾಗುವುದಿಲ್ಲ. ಪತ್ನಿ ಮನೆಗೆಲಸ ಮಾಡದಿರುವುದು ಅಥವಾ ನಿರೀಕ್ಷೆಯಂತೆ ಕೆಲಸ ಮಾಡದಿರುವುದನ್ನು ಕ್ರೌರ್ಯ ಎಂದು ಕರೆಯಲು ಸಾಧ್ಯವಿಲ್ಲ. ವೈವಾಹಿಕ ಜೀವನದಲ್ಲಿ ಪರಸ್ಪರ ಸಹಕಾರ ಮತ್ತು ಜವಾಬ್ದಾರಿಗಳ ಹಂಚಿಕೆ ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್ ದಂಪತಿಗಳ ವಿಚ್ಛೇದನ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ. ಪತ್ನಿ ಮನೆಗೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಪತಿಯು ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೋರಿದ್ದನು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು, “ವಿವಾಹ ಎಂದರೆ ಸಂಗಾತಿಯೊಂದಿಗೆ ಸಂಬಂಧವನ್ನು ಬೆಸೆಯುವುದೇ ಹೊರತು ಕೆಲಸದವರೊಂದಿಗಲ್ಲ. ಈಗಿನ ಕಾಲದಲ್ಲಿ ಮನೆಗೆಲಸದ ಜವಾಬ್ದಾರಿಯನ್ನು ಇಬ್ಬರೂ ಸಮಾನವಾಗಿ ಹೊರಬೇಕು. ಅಡುಗೆ, ಮನೆಯ ಸ್ವಚ್ಛತೆ, ಬಟ್ಟೆ ಒಗೆಯುವಂತಹ ಕೆಲಸಗಳಲ್ಲಿ ಪತಿಯೂ ಪಾಲ್ಗೊಳ್ಳಬೇಕು” ಎಂದು ಕೋರ್ಟ್ ಹೇಳಿದೆ.

ಈ ಪ್ರಕರಣದಲ್ಲಿ ಮೊದಲು ಕುಟುಂಬ ನ್ಯಾಯಾಲಯವು ಪತಿಯ ಪರವಾಗಿ ತೀರ್ಪು ನೀಡಿ, ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನವನ್ನು ಮಂಜೂರು ಮಾಡಿತ್ತು. ಆದರೆ ಹೈಕೋರ್ಟ್ ಆ ತೀರ್ಪನ್ನು ರದ್ದುಗೊಳಿಸಿತು. ನಂತರ ಪತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಸರ್ವೋಚ್ಚ ನ್ಯಾಯಾಲಯವು ಮೇಲಿನಂತೆ ನಿರೀಕ್ಷಣೆ ವ್ಯಕ್ತಪಡಿಸಿದೆ.