ಹಾರ್ಮುಜ್ ಮೂಲಕ ಸಾಗಲು ನೌಕೆಯೊಂದರಿಂದ ೧೭ ಕೋಟಿ ರೂಪಾಯಿ ಪಡೆದ ಇರಾನ್! US – Israel – Iran War

  • ಇರಾನ್‌ನಿಂದ ಸುಲಿಗೆ ವಸೂಲಿ ಆರಂಭ!

  • ನೌಕೆ ಯಾವ ದೇಶದ್ದು ಎಂಬುದು ಅಜ್ಞಾತ!

  • ಅನೇಕ ದೇಶಗಳ ಸಹಿತ ಭಾರತದ ೨೨ ನೌಕೆಗಳು ಹಾರ್ಮುಜ್‌ ನಲ್ಲಿ ಸಿಲುಕಿವೆ.

ಮುಖ್ಯಾಂಶಗಳು

  • ವೈಮಾನಿಕ ದಾಳಿಯಲ್ಲಿ ಐ.ಆರ್.ಜಿ.ಸಿ. ವಕ್ತಾರ ಜನರಲ್ ಅಲಿ ಮಹಮ್ಮದ್ ನೈನಿ ಸಾವು.
  • ಲೆಬನಾನ್ ಮೇಲಿನ ಇಸ್ರೇಲ್ ದಾಳಿಯಲ್ಲಿ ಇದುವರೆಗೆ ೧ ಸಹಸ್ರ ಜನರ ಸಾವು, ೨ ಸಹಸ್ರ ೫೮೪ ಜನರಿಗೆ ಗಾಯ.
  • ಅಮೆರಿಕದ ಎಫ್-೩೫ ಯುದ್ಧ ವಿಮಾನದ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಪ್ರತಿಪಾದನೆ.
  • ಕುವೈತ್‌ ನ ಮೀನಾ ಅಲ್-ಅಹ್ಮದಿ ರಿಫೈನರಿ ಮೇಲೆ ಮತ್ತೆ ದಾಳಿ; ಅನೇಕ ಯಂತ್ರಗಳು ಸ್ಥಗಿತ.

ನವ ದೆಹಲಿ – ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಾಗಲು ಅನುಮತಿಗಾಗಿ, ಖಾಸಗಿ ತೈಲ ಟ್ಯಾಂಕರ್ ಕಂಪನಿಯೊಂದರಿಂದ ಇರಾನ್ ೨೦ ಲಕ್ಷ ಡಾಲರ್ (೧೭ ಕೋಟಿ ರೂಪಾಯಿ) ಪಡೆದಿದೆ ಎಂದು ‘ಲಾಯ್ಡ್ಸ್ ಲಿಸ್ಟ್’ ವಾರ್ತಾ ಜಾಲತಾಣ ವರದಿ ಮಾಡಿದೆ. ಆದರೆ ಈ ನೌಕೆಯು ಯಾವ ದೇಶಕ್ಕೆ ಸೇರಿದೆ ಎಂಬ ಮಾಹಿತಿ ಹೊರಬಂದಿಲ್ಲ. ಇದುವರೆಗೆ ವಿವಿಧ ದೇಶಗಳ ಒಟ್ಟು ೯ ನೌಕೆಗಳು ಇರಾನ್‌ ನಿಂದ ಅನುಮತಿ ಪಡೆದು ಹಾರ್ಮುಜ್‌ನಿಂದ ಮುಂದೆ ಸಾಗಿವೆ.

ಈ ವರದಿಯ ಪ್ರಕಾರ, ಇರಾನ್ ತನ್ನ ಸಮುದ್ರ ವ್ಯಾಪ್ತಿಯಲ್ಲಿ ಒಂದು ‘ಸುರಕ್ಷಿತ ಮಾರ್ಗ’ವನ್ನು ನಿರ್ಮಿಸಿದೆ. ಅಲ್ಲಿಂದ ಕೇವಲ ಅನುಮತಿ ಪಡೆದ ನೌಕೆಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತಿದೆ ಮತ್ತು ಇದಕ್ಕೆ ಪ್ರತಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ.

ಸುರಕ್ಷಿತ ಮಾರ್ಗಕ್ಕಾಗಿ ಭಾರತ ಸೇರಿದಂತೆ ಅನೇಕ ದೇಶಗಳಿಂದ ಇರಾನ್ ಜೊತೆ ಚರ್ಚೆ

ಭಾರತ, ಪಾಕಿಸ್ತಾನ, ಇರಾಕ್, ಮಲೇಷ್ಯಾ ಮತ್ತು ಚೀನಾ ದೇಶಗಳು ತಮ್ಮ ನೌಕೆಗಳ ಸುರಕ್ಷಿತ ಪ್ರಯಾಣಕ್ಕಾಗಿ ನೇರವಾಗಿ ಇರಾನ್ ಜೊತೆ ಮಾತುಕತೆ ನಡೆಸುತ್ತಿವೆ. ಇರಾನ್‌ ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (ಐ.ಆರ್.ಜಿ.ಸಿ.) ಇಂತಹ ನೌಕೆಗಳಿಗಾಗಿ ವಿಶೇಷ ನೋಂದಣಿ ವ್ಯವಸ್ಥೆಯನ್ನು ಆರಂಭಿಸಿದೆ. ಭಾರತದ ೨೨ ನೌಕೆಗಳು ಹಾರ್ಮುಜ್ ಮತ್ತು ಸುತ್ತಮುತ್ತಲ ಸಮುದ್ರ ಪ್ರದೇಶದಲ್ಲಿ ಸಿಲುಕಿಕೊಂಡಿವೆ. ಭಾರತದ ಒಂದು ಗ್ಯಾಸ್ ಟ್ಯಾಂಕರ್ ಗುರುತು ತಪಾಸಣೆಗಾಗಿ ಇರಾನ್‌ ನ ಲಾರ್ಕ್ ದ್ವೀಪದ ಸಮೀಪವಿರುವ ಇರಾನ್ ಜಲಪ್ರದೇಶದ ಮೂಲಕ ಹಾದುಹೋಗಿದೆ.

ಯುದ್ಧದಿಂದಾಗಿ ಹಣದುಬ್ಬರ ಹೆಚ್ಚಳ! – ಬ್ರಿಟನ್ ಪ್ರಧಾನಿ

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮಾತನಾಡಿ, ಯುದ್ಧದಿಂದಾಗಿ ಹಣದುಬ್ಬರ ಹೆಚ್ಚುತ್ತಿದ್ದು, ಕುಟುಂಬಗಳ ಮೇಲೆ ಆರ್ಥಿಕ ಒತ್ತಡ ಉಂಟಾಗುತ್ತಿದೆ. ನಮ್ಮ ಸರಕಾರವು ಕುಟುಂಬಗಳ ಆಯವ್ಯಯವನ್ನು ಸುರಕ್ಷಿತವಾಗಿರಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ. ಈ ಸಂಘರ್ಷ ದೀರ್ಘಕಾಲ ಮುಂದುವರಿದರೆ ದಿನಬಳಕೆಯ ವಸ್ತುಗಳ ಬೆಲೆ ಇನ್ನುಷ್ಟು ಏರಿಕೆಯಾಗಬಹುದು. ಇದು ಸಾಮಾನ್ಯ ಜನರ ಸಂಕಷ್ಟವನ್ನು ಹೆಚ್ಚಿಸಲಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಇರಾನ್ ಜೊತೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುವುದೇ ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ.

ನಮಗೂ ‘ಪರ್ಲ್ ಹಾರ್ಬರ್’ ದಾಳಿಯ ಮಾಹಿತಿ ಇರಲಿಲ್ಲ! – ಇರಾನ್ ಮೇಲಿನ ದಾಳಿ ಕುರಿತು ಟ್ರಂಪ್ ಹೇಳಿಕೆ

ಜಪಾನ್ ಪ್ರಧಾನಿ ಸಾನಾ ತಾಕೈಚಿ ಅವರು ಅಮೆರಿಕಕ್ಕೆ ಭೇಟಿ ನೀಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಪತ್ರಕರ್ತರು, ಫೆಬ್ರವರಿ ೨೮ ರಂದು ಇರಾನ್ ಮೇಲೆ ದಾಳಿ ಮಾಡುವ ಮೊದಲು ಅಮೆರಿಕ ಮತ್ತು ಇಸ್ರೇಲ್ ತಮ್ಮ ಮಿತ್ರ ರಾಷ್ಟ್ರಗಳಿಗೆ ಏಕೆ ತಿಳಿಸಲಿಲ್ಲ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಟ್ರಂಪ್, ನಾವು ಯಾರಿಗೂ ಹೇಳಲಿಲ್ಲ; ಏಕೆಂದರೆ ನಮಗೆ ಎಲ್ಲರಿಗೂ ಅಚ್ಚರಿಯ ಆಘಾತ ನೀಡಬೇಕಿತ್ತು. ಇಂತಹ ಆಘಾತಗಳ ಬಗ್ಗೆ ಜಪಾನ್‌ ಗಿಂತ ಚೆನ್ನಾಗಿ ಯಾರಿಗೆ ಗೊತ್ತು? ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದರು. ಅಲ್ಲದೆ ಜಪಾನಿ ಪತ್ರಕರ್ತರೊಬ್ಬರನ್ನು ಉದ್ದೇಶಿಸಿ, ನೀವು ಪರ್ಲ್ ಹಾರ್ಬರ್ ಬಗ್ಗೆ ನನಗೆ ಏಕೆ ಹೇಳಿರಲಿಲ್ಲ? ಎಂದು ತಮಾಷೆಯಾಗಿ ಕೇಳಿದರು.

ಟ್ರಂಪ್ ಈ ಮಾತನ್ನು ಲಘುವಾಗಿ ಹೇಳಿದ್ದರೂ, ಈ ಹೇಳಿಕೆಯು ಜಪಾನ್‌ ಗೆ ಮುಜುಗರ ಉಂಟುಮಾಡಿದೆ ಎಂದು ಪರಿಗಣಿಸಲಾಗಿದೆ. ಡಿಸೆಂಬರ್ ೭, ೧೯೪೧ ರಂದು ಜಪಾನ್ ಅಮೆರಿಕದ ಹವಾಯಿಯಲ್ಲಿರುವ ಪರ್ಲ್ ಹಾರ್ಬರ್ ಸೈನಿಕ ನೆಲೆಯ ಮೇಲೆ ಅನಿರೀಕ್ಷಿತ ದಾಳಿ ನಡೆಸಿತ್ತು. ಇದರಲ್ಲಿ ೨ ಸಹಸ್ರ ೪೦೦ ಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಮೃತಪಟ್ಟಿದ್ದರು. ಇದರ ನಂತರ ಅಮೆರಿಕ ಎರಡನೇ ಮಹಾಯುದ್ಧಕ್ಕೆ ಪ್ರವೇಶಿಸಿ ಜಪಾನ್‌ ನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ಹಾಕಿತ್ತು.

ಇರಾನ್‌ ನ ಕ್ಷಿಪಣಿ ತಯಾರಿಕಾ ಸಾಮರ್ಥ್ಯ ಅಂತ್ಯ! – ಇಸ್ರೇಲ್ ಪ್ರತಿಪಾದನೆ

ಅಮೆರಿಕ ಮತ್ತು ಇಸ್ರೇಲ್‌ ನ ಜಂಟಿ ವೈಮಾನಿಕ ದಾಳಿಯ ನಂತರ ಇರಾನ್ ಬಳಿ ಯುರೇನಿಯಂ ಸಮೃದ್ಧಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯ ಉಳಿದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರತಿಪಾದಿಸಿದ್ದಾರೆ. ಇಸ್ರೇಲ್ ಈ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದು, ಇರಾನ್‌ ನ ಮಿಲಿಟರಿ ಶಕ್ತಿ ಬಹುತೇಕ ಧ್ವಂಸಗೊಂಡಿದೆ ಎಂದು ಅವರು ಹೇಳಿದರು; ಆದರೆ ಅವರು ಇದಕ್ಕೆ ಯಾವುದೇ ಪುರಾವೆ ನೀಡಲಿಲ್ಲ.

ಹೆಚ್ಚಿನ ಸಂಖ್ಯೆಯಲ್ಲಿ ಕ್ಷಿಪಣಿ ಉತ್ಪಾದಿಸಲಾಗುತ್ತಿದೆ! – ಇರಾನ್ ಪ್ರತ್ಯುತ್ತರ

ಯುದ್ಧದ ಸಮಯದಲ್ಲಿಯೂ ಕ್ಷಿಪಣಿಗಳ ಉತ್ಪಾದನೆ ಅವಿರತವಾಗಿ ಸಾಗುತ್ತಿದೆ ಎಂದು ಇರಾನ್‌ ನ ಐ.ಆರ್.ಜಿ.ಸಿ. ಪ್ರತಿಪಾದಿಸಿದೆ. ನಮ್ಮಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ ಮತ್ತು ಉತ್ಪಾದನೆಯು ವೇಗವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಾವು ಅಮೆರಿಕವನ್ನು ಯುದ್ಧಕ್ಕೆ ಎಳೆದು ತಂದಿಲ್ಲ! – ನೆತನ್ಯಾಹು ಸ್ಪಷ್ಟನೆ

ಇಸ್ರೇಲ್ ಅಮೆರಿಕವನ್ನು ಬಲವಂತವಾಗಿ ಯುದ್ಧಕ್ಕೆ ಎಳೆದು ತಂದಿದೆ ಎಂಬ ಆರೋಪವನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಇರಾನ್‌ ನಲ್ಲಿ ನಡೆಸಲಾದ ಕಾರ್ಯಾಚರಣೆಯು ಇಸ್ರೇಲ್‌ ನ ಸ್ವತಂತ್ರ ನಿರ್ಧಾರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಟ್ರಂಪ್ ಅವರು ಏನು ಮಾಡಬೇಕು ಎಂದು ಯಾರಾದರೂ ಹೇಳಿಕೊಡಲು ಸಾಧ್ಯವೇ? ಟ್ರಂಪ್ ಯಾವಾಗಲೂ ಅಮೆರಿಕದ ಜನರ ಹಿತದೃಷ್ಟಿಯಿಂದಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ನುಡಿದರು.

ಅಮೆರಿಕದ ಯುದ್ಧ ವಿಮಾನಗಳ ಇಳಿಕೆಗೆ ಶ್ರೀಲಂಕಾದಿಂದ ಅನುಮತಿ ನಿರಾಕರಣೆ

ಮಾರ್ಚ್ ಆರಂಭದಲ್ಲಿ, ಎರಡು ಅಮೇರಿಕನ್ ಯುದ್ಧ ವಿಮಾನಗಳಿಗೆ ಮಟ್ಟಾಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಗಿದೆ ಎಂದು ಶ್ರೀಲಂಕಾದ ಅಧ್ಯಕ್ಷ ದಿಸಾನಾಯಕೆ ಸಂಸತ್ತಿಗೆ ತಿಳಿಸಿದರು. ಜಿಬೌಟಿ ನೆಲೆಯಿಂದ ಹೊರಟಿದ್ದ ಈ ವಿಮಾನಗಳು ಮಾರ್ಚ್ ೪ ಮತ್ತು ೮ ರಂದು ಶ್ರೀಲಂಕಾದಲ್ಲಿ ಇಳಿಯಲು ಅನುಮತಿ ಕೋರಿದ್ದವು. ಈ ವಿಮಾನಗಳಲ್ಲಿ ೮ ಹಡಗು ವಿರೋಧಿ ಕ್ಷಿಪಣಿಗಳಿದ್ದವು. ವಿವಿಧ ಒತ್ತಡಗಳಿದ್ದರೂ ಶ್ರೀಲಂಕಾ ತನ್ನ ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ಬಯಸಿದ್ದು, ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.