ನಮ್ಮ ತಾಳ್ಮೆ ಮುಗಿಯುತ್ತಾ ಬಂದಿದೆ ! – ಸೌದಿ ಅರೇಬಿಯಾ

ರಿಯಾದ್ (ಸೌದಿ ಅರೇಬಿಯಾ) – ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧದ ೨೦ ದಿನಗಳ ನಂತರವೂ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ ನಲ್ಲಿ ತುರ್ತು ಸಭೆ ಕರೆದ ನಂತರ ಸೌದಿಯ ವಿದೇಶಾಂಗ ಸಚಿವರು ಇರಾನ್‌ ಗೆ ಎಚ್ಚರಿಕೆ ನೀಡುತ್ತಾ, ನಮ್ಮ ಸಂಯಮ ಮುಗಿಯುತ್ತಾ ಬಂದಿದೆ ಮತ್ತು ನೀವು ನಮ್ಮ ಮಾತನ್ನು ಕೇಳಲೇಬೇಕು. ನಾವು ಮೊದಲು ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ; ಆದರೆ ಅಗತ್ಯಬಿದ್ದರೆ ಮಿಲಿಟರಿ ಕ್ರಮ ಕೈಗೊಳ್ಳಲು ನಾವು ಹಿಂದೆಮುಂದೆ ನೋಡುವುದಿಲ್ಲ ಎಂದು ಹೇಳಿದ್ದಾರೆ. ಇರಾನ್ ಸೌದಿ ಅರೇಬಿಯಾದ ‘ಸಮರೆಫ್’ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಅದರ ಮೇಲೆ ದಾಳಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಇರಾನ್‌ ಗೆ ಎಚ್ಚರಿಕೆ ನೀಡಿದೆ.

ಇರಾನ್‌ ನ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರದ ಮೇಲೆ ದಾಳಿ

ಈಗ ಕೊಲ್ಲಿಯ ತೈಲ-ಅನಿಲ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಿದ್ದೇವೆ ! – ಇರಾನ್ ಎಚ್ಚರಿಕೆ

ಮಾರ್ಚ್ ೧೮ ರಂದು ದಕ್ಷಿಣ ಇರಾನ್‌ ನ ‘ಸೌತ್ ಪಾರ್ಸ್’ ಅನಿಲ ಕ್ಷೇತ್ರ ಮತ್ತು ಅಸಾಲುಯೆಹ್ ನಗರದ ತೈಲ-ಅನಿಲ ಸೌಲಭ್ಯಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಸೌತ್ ಪಾರ್ಸ್ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಈ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಕೊಲ್ಲಿ ರಾಷ್ಟ್ರಗಳಲ್ಲಿ ದೊಡ್ಡ ಮಟ್ಟದ ದಾಳಿಗಳ ಎಚ್ಚರಿಕೆ ನೀಡಿದೆ.
ಇರಾನ್‌ ನ ರೆವಲ್ಯೂಷನರಿ ಗಾರ್ಡ್ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಕತಾರ್‌ ನ ಪ್ರಮುಖ ತೈಲ ಮತ್ತು ಅನಿಲ ಕೇಂದ್ರಗಳಿಂದ ದೂರವಿರುವಂತೆ ಜನರಿಗೆ ತಿಳಿಸಿದೆ. ಈ ಎಚ್ಚರಿಕೆಯ ನಂತರ, ಮಾರ್ಚ್ ೧೯ ರಂದು ಇರಾನ್ ಸೌದಿ ಅರೇಬಿಯಾದ ‘ಸಮರೆಫ್ ರಿಫೈನರಿ’ಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ.

ಕತಾರ್ ಮೇಲಿನ ಆಕ್ರಮಣ ಸಹಿಸುವುದಿಲ್ಲ! – ಟ್ರಂಪ್

ಮಾರ್ಚ್ ೧೮ ರ ರಾತ್ರಿ ಇರಾನ್ ಕತಾರ್‌ ನ ಅತಿದೊಡ್ಡ ‘ರಾಸ್ ಲಫಾನ್’ ಅನಿಲ ಯೋಜನೆಯ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿತು. ಇದರ ನಂತರ ಅಲ್ಲಿ ಬೆಂಕಿ ಕಾಣಿಸಿಕೊಂಡು ಭಾರಿ ಹಾನಿ ಸಂಭವಿಸಿದೆ. ಬೆಂಕಿಯನ್ನು ಹತೋಟಿಗೆ ತರಲು ತಕ್ಷಣವೇ ತುರ್ತು ತಂಡಗಳನ್ನು ಕಳುಹಿಸಲಾಯಿತು. ಕತಾರ್ ವಿದೇಶಾಂಗ ಸಚಿವಾಲಯವು, ಇರಾನ್ ಮಿತಿ ಮೀರಿದೆ; ಏಕೆಂದರೆ ಅದು ಸಾಮಾನ್ಯ ನಾಗರಿಕರು ಮತ್ತು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಇಂತಹ ಆಕ್ರಮಣಗಳಿಂದ ಇಡೀ ಪ್ರದೇಶದ ಪರಿಸ್ಥಿತಿ ಹದಗೆಡಬಹುದು. ಆದ್ದರಿಂದ ಎಲ್ಲಾ ದೇಶಗಳು ಒಗ್ಗೂಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿ ಕಾಪಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿದೆ.

ಯುನೈಟೆಡ್ ಅರಬ್ ಎಮಿರೇಟ್ಸಗೆ ಪ್ರತಿದಿನ ೧೦ ಸಾವಿರ ಕೋಟಿ ರೂಪಾಯಿ ನಷ್ಟ!

ಯುದ್ಧದ ಕಾರಣದಿಂದ ಯುನೈಟೆಡ್ ಅರಬ್ ಎಮಿರೇಟ್ಸಗೆ ಪ್ರತಿದಿನ ೧೦ ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ‘ಅಲ್ ಹಬತೂರ್ ಗ್ರೂಪ್’ ಸಂಸ್ಥಾಪಕ ಖಲಫ್ ಅಹ್ಮದ್ ಅಲ್ ಹಬತೂರ್ ಅವರು, ‘ಅಮೆರಿಕ ಅಧ್ಯಕ್ಷ ಟ್ರಂಪ್ ನಮ್ಮನ್ನು ಯುದ್ಧಕ್ಕೆ ತಳ್ಳಿದ್ದಾರೆ’ ಎಂದು ಟೀಕಿಸಿದ್ದಾರೆ.

ಇರಾನ್ ಗುಪ್ತಚರ ಸಚಿವ ಸಾವು

ಇರಾನ್ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್

ಇರಾನ್ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಅವರು ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಇದನ್ನು ಅಧಿಕೃತವಾಗಿ ದೃಢಪಡಿಸಿದ್ದು, ‘ಇದೊಂದು ಹೇಡಿಗಳ ಕೃತ್ಯ’ ಎಂದು ಟೀಕಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸನಲ್ಲಿ ಡೀಸೆಲ್ ಭಾರತಕ್ಕಿಂತ ದುಬಾರಿ

ಯುನೈಟೆಡ್ ಅರಬ್ ಎಮಿರೇಟ್ಸ್ ಜಗತ್ತಿಗೆ ತೈಲ ಮಾರಾಟ ಮಾಡುತ್ತದೆ; ಆದರೆ ಈಗ ಅದರದೇ ದೇಶದಲ್ಲಿ ಭಾರತದ ದರಕ್ಕಿಂತ ಡೀಸೆಲ್ ದುಬಾರಿಯಾಗಿದೆ. ಇಲ್ಲಿ ಒಂದು ಲೀಟರ್ ಡೀಸೆಲ್ ದರ ೧೦೪ ರೂಪಾಯಿ ಆಗಿದೆ, ಆದರೆ ಭಾರತದ ದೆಹಲಿಯಲ್ಲಿ ಈ ದರ ೮೭ ರೂಪಾಯಿ ಇದೆ. ತೈಲ ಉತ್ಪಾದನೆಯಲ್ಲಿ ಎಮಿರೇಟ್ಸ್ ವಿಶ್ವದಲ್ಲೇ ಏಳನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿದಿನ ೪೫ ಲಕ್ಷ ಬ್ಯಾರೆಲ್ ತೈಲ ಉತ್ಪಾದಿಸುವ ಸಾಮರ್ಥ್ಯವಿದೆ.

ಚೀನಾದತ್ತ ಹೋಗುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ನೌಕೆ ಭಾರತದತ್ತ ವಲಸೆ

ರಷ್ಯಾದ ತೈಲ ಟ್ಯಾಂಕರ್ ನೌಕೆಯೊಂದು ಮೊದಲು ಚೀನಾಕ್ಕೆ ಹೋಗುತ್ತಿತ್ತು, ಅದು ಈಗ ದಾರಿ ಬದಲಿಸಿ ಭಾರತಕ್ಕೆ ಬರುತ್ತಿದೆ. ‘ಅಕ್ವಾ ಟೈಟನ್’ ಹೆಸರಿನ ಈ ನೌಕೆಯು ರಷ್ಯಾದ ಬಾಲ್ಟಿಕ್ ಸಮುದ್ರದಿಂದ ತೈಲವನ್ನು ಹೊತ್ತು ಹೊರಟಿತ್ತು ಮತ್ತು ಅದು ಚೀನಾದ ರಿಜಾವೊ ಬಂದರಿಗೆ ಹೋಗಬೇಕಿತ್ತು; ಆದರೆ ಮಾರ್ಚ್ ಮಧ್ಯದಲ್ಲಿ ದಕ್ಷಿಣ ಚೀನಾ ಸಮುದ್ರವನ್ನು ತಲುಪುತ್ತಿದ್ದಂತೆ ಅದು ತನ್ನ ದಾರಿಯನ್ನು ಬದಲಿಸಿತು ಮತ್ತು ಈಗ ಮಾರ್ಚ್ ೨೧ ರಂದು ಮಂಗಳೂರಿಗೆ ತಲುಪಲಿದೆ. ಭಾರತವು ಹಠಾತ್ತಾಗಿ ರಷ್ಯಾದಿಂದ ತೈಲ ಖರೀದಿಯನ್ನು ಹೆಚ್ಚಿಸಿರುವುದರಿಂದ ಈ ನೌಕೆಯು ಭಾರತದತ್ತ ತಿರುಗಿದೆ. ಭಾರತವು ಒಂದು ವಾರದಲ್ಲಿ ರಷ್ಯಾದಿಂದ ಅಂದಾಜು ೩ ಕೋಟಿ ಬ್ಯಾರೆಲ್ ತೈಲ ಖರೀದಿಸಿದೆ. ಇಲ್ಲಿಯವರೆಗೆ ರಷ್ಯಾದ ೭ ತೈಲ ಟ್ಯಾಂಕರ್ ನೌಕೆಗಳು ಭಾರತದತ್ತ ದಾರಿ ಬದಲಿಸಿವೆ ಎಂದು ಹೇಳಲಾಗಿದೆ. ಇರಾನ್ ಯುದ್ಧದಿಂದ ಸೃಷ್ಟಿಯಾದ ಪರಿಸ್ಥಿತಿಯಲ್ಲಿ ರಷ್ಯಾ ಈಗ ಭಾರತಕ್ಕೆ ದೊಡ್ಡ ತೈಲ ಪೂರೈಕೆದಾರನಾಗುತ್ತಿದೆ ಮತ್ತು ಪ್ರಸ್ತುತ ಚೀನಾಕ್ಕಿಂತ ಭಾರತಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದೆ.

ಇರಾನ್‌ ಗೆ ವೈದ್ಯಕೀಯ ನೆರವು ನೀಡಿದ ಭಾರತ !

ಭಾರತವು ಇರಾನ್‌ ನ ರೆಡ್ ಕ್ರೆಸೆಂಟ್ ಸೊಸೈಟಿಗೆ ಮಾನವೀಯ ಸಹಾಯದ ಮೊದಲ ಹಂತವಾಗಿ ಜೀವದಾಯಕ ಔಷಧಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ವೈದ್ಯಕೀಯ ಕಿಟ್‌ ಗಳಂತಹ ಸಾಮಗ್ರಿಗಳನ್ನು ಕಳುಹಿಸಿದೆ.