ಸದನದಿಂದ ಸಭಾಪತಿ ಹೊರಕ್ಕೆ: ಸರಕಾರಕ್ಕೆ ಮುಖಭಂಗ?

ಶಾಸಕರ ಪ್ರಶ್ನೆಗಳಿಗೆ ಉತ್ತರಿಸದ ಸರಕಾರದ ಧೋರಣೆಯ ಬಗ್ಗೆ ಆಕ್ರೋಶ ವ್ಯಕ್ತ !

ಬೆಂಗಳೂರು – ಶಾಸಕರು ಕೇಳಿದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡದ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಕಾರ್ಯದರ್ಶಿಗಳು ಸ್ಪಷ್ಟನೆ ನೀಡುವವರೆಗೆ ಕಲಾಪ ನಡೆಸುವುದಿಲ್ಲ ಎಂದು ಹೇಳುತ್ತಾ ರಾಜ್ಯದ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಅವರು ವಿಧಾನಸಭೆಯ ಕಲಾಪವನ್ನು ಮುಂದೂಡಿ ಹೊರನಡೆದರು. ಖಾದರ್ ಅವರ ಈ ಕ್ರಮದಿಂದ ಸರಕಾರಕ್ಕೆ ದೊಡ್ಡ ಮುಖಭಂಗವಾಗಿದೆ. ಸಚಿವರು ಮತ್ತು ಸರಕಾರದ ಧೋರಣೆಯ ಬಗ್ಗೆ ಸಭಾಪತಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಲಿಖಿತ ಉತ್ತರಗಳನ್ನು ನೀಡುವ ಬಗ್ಗೆ ಸಭಾಪತಿಗಳು ಸರಕಾರಕ್ಕೆ ಪದೇ ಪದೇ ಸೂಚನೆ ನೀಡುತ್ತಿದ್ದರು. ಆದರೂ ಮಾರ್ಚ್ ೧೬ ರಂದು ೨೩೦ ಪ್ರಶ್ನೆಗಳ ಪೈಕಿ ಕೇವಲ ೮೪ ಪ್ರಶ್ನೆಗಳಿಗೆ ಮಾತ್ರ ಸರಕಾರದಿಂದ ಉತ್ತರಗಳನ್ನು ಮಂಡಿಸಲಾಯಿತು. ಈ ವಿಷಯವಾಗಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

೧. ಈ ಸಂದರ್ಭದಲ್ಲಿ ಸಭಾಪತಿ ಖಾದರ್ ಅವರು, ‘ನಾನು ಈ ವಿಷಯವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದೇನೆ. ಸದನವು ಸಚಿವರಿಗಾಗಿ ನಡೆಯುವುದಿಲ್ಲ. ಈ ಅಧಿವೇಶನವು ಶಾಸಕರಿಗಾಗಿ ಇರುತ್ತದೆ. ಪ್ರತಿಯೊಬ್ಬರಿಗೂ ಹೈಲೈಟ್ ಪ್ರಶ್ನೆ ಕೇಳಲು ಸಾಧ್ಯವಾಗುವುದಿಲ್ಲ. ದಿನಕ್ಕೆ ಕೇವಲ ೧೫ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲು ಸಾಧ್ಯವಿರುತ್ತದೆ. ಉಳಿದ ಪ್ರಶ್ನೆಗಳಿಗೆ ಸರಕಾರವು ಲಿಖಿತ ರೂಪದಲ್ಲಿ ಉತ್ತರ ನೀಡುವುದು ಅವಶ್ಯಕವಾಗಿದೆ; ಆದರೆ ಅವುಗಳನ್ನು ನೀಡಲಾಗುತ್ತಿಲ್ಲ. ಹೀಗಿದ್ದಲ್ಲಿ ಶಾಸಕರು ಸದನಕ್ಕೆ ಏಕೆ ಬರಬೇಕು?’’ ಎಂದು ಪ್ರಶ್ನಿಸಿದರು.

೨. ‘ಪ್ರಶ್ನೆಗಳಿಗೆ ಉತ್ತರಗಳಿಲ್ಲ, ಸಚಿವರು ಸಮಯಕ್ಕೆ ಸರಿಯಾಗಿ ಸದನಕ್ಕೆ ಬರುವುದಿಲ್ಲ. ನಾನು ಸತತ ೪ ಬಾರಿ ಸೂಚನೆ ನೀಡಿದರೂ ಸುಧಾರಣೆಯಾಗಿಲ್ಲ. ಸರಕಾರದ ಈ ವರ್ತನೆ ಸರಿಯಲ್ಲ. ಹೀಗಿದ್ದಲ್ಲಿ ಸದನವನ್ನು ಹೇಗೆ ನಡೆಸುವುದು?’, ಎಂದು ಸಭಾಪತಿಗಳು ಆಕ್ರೋಶ ವ್ಯಕ್ತಪಡಿಸಿದರು.

೩. ‘ಸಚಿವರು ಮತ್ತು ಕಾರ್ಯದರ್ಶಿಗಳು ಈ ಬಗ್ಗೆ ಸ್ಪಷ್ಟನೆ ನೀಡುವವರೆಗೆ ಸದನವನ್ನು ನಡೆಸುವುದಿಲ್ಲ’, ಎಂದು ಹೇಳುತ್ತಾ ಸಭಾಪತಿ ಖಾದರ್ ಅವರು ಪೀಠದಿಂದ ಎದ್ದು ಹೊರನಡೆದರು.

೪. ಸರಕಾರದ ಆಡಳಿತದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಭಾಪತಿ ಯು.ಟಿ. ಖಾದರ್ ಅವರ ಮನವೊಲಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯತ್ನಿಸಿದರು.

೫. ಸಭಾಪತಿಗಳ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆದಿದ್ದು, ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭಾಪತಿ ಖಾದರ್ ಅವರು ಮಾಹಿತಿ ನೀಡಿದರು.