‘ರಂಜಾನ್ ಸಮಯದಲ್ಲಿ ಮುಸಲ್ಮಾನರಿಗೆ ಕೆಟ್ಟದೆನಿಸಬಾರದು’ ಎಂಬ ಕಾರಣಕ್ಕೆ 9 ವರ್ಷದ ವಿದ್ಯಾರ್ಥಿಗಳ ಆಹಾರ ಸೇವನೆಯ ಮೇಲೂ ನಿಷೇಧ !

ಕ್ಯಾಲ್ಗರಿ (ಕೆನಡಾ)ಯ ಶಾಲೆಯೊಂದರ ‘ಗಾಂಧಿಗಿರಿ’

ಓಟಾವಾ (ಕೆನಡಾ): ಕೆನಡಾದ ಕ್ಯಾಲ್ಗರಿಯ ಶಾಲೆಯೊಂದು ಸಮಾನತೆಯ (Inclusivity) ಹೆಸರಿನಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳ ಆಹಾರ ಸೇವನೆಯ ಮೇಲೆ ನಿಷೇಧ ಹೇರಿದೆ. ಕ್ಯಾಲ್ಗರಿಯ ‘ಫೇರ್‌ವ್ಯೂ ಸ್ಕೂಲ್’, ರಂಜಾನ್ ತಿಂಗಳಿನಲ್ಲಿ ಉಪವಾಸ ಮಾಡುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಕಟವಾಗಬಾರದು ಎಂಬ ಕಾರಣ ನೀಡಿ, ಶಾಲೆಯ ‘ಕ್ಯಾಫೆಟೇರಿಯಾ’ದಲ್ಲಿ (ಭೋಜನ ಶಾಲೆ) ಆಹಾರ ಸೇವನೆಯನ್ನು ನಿಷೇಧಿಸಿದೆ. ಶಾಲಾ ಆಡಳಿತ ಮಂಡಳಿಯ ಈ ಆದೇಶದಿಂದಾಗಿ, ಉಪವಾಸ ಮಾಡದ ಸುಮಾರು 911 ಮುಸ್ಲಿಮೇತರ ವಿದ್ಯಾರ್ಥಿಗಳು ಮಧ್ಯಾಹ್ನದ ವಿರಾಮದ ಸಮಯದಲ್ಲಿ ಹಸಿವಿನಿಂದ ಇರಬೇಕಾದ ಅಥವಾ ಆಹಾರ ಸೇವಿಸಲು ಬೇರೆ ಸ್ಥಳವನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇತರ ಮಕ್ಕಳ ಮೇಲೆ ಧಾರ್ಮಿಕ ಆಚರಣೆಗಳನ್ನು ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

1.ಪೋಷಕರಿಗೆ ಕಳುಹಿಸಲಾದ ಅಧಿಕೃತ ಇ-ಮೇಲ್‌ನಲ್ಲಿ: ಕ್ಯಾಫೆಟೇರಿಯಾದ ಭೋಜನ ಪ್ರದೇಶವನ್ನು ‘ಆಹಾರ ಮುಕ್ತ’ (Food-free) ಎಂದು ಘೋಷಿಸಿರುವುದಾಗಿ ಉಲ್ಲೇಖಿಸಲಾಗಿದೆ. ಇದರಲ್ಲಿ ನಾಲ್ಕನೇ ತರಗತಿಯ, ಅಂದರೆ ಕೇವಲ 9 ವರ್ಷದ ಚಿಕ್ಕ ಮಕ್ಕಳನ್ನೂ ಸೇರಿಸಲಾಗಿದೆ.

2. ಇನ್ನೊಂದೆಡೆ 7 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳ ಸ್ಥಿತಿ: ಈ ವಿದ್ಯಾರ್ಥಿಗಳಿಗೆ ಪೂರ್ಣ 1 ಗಂಟೆಯ ವಿರಾಮದ ಸಮಯದಲ್ಲಿ ಭೋಜನಗೃಹದಲ್ಲಿ ಆಹಾರ ಸೇವಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಶೇಷವೆಂದರೆ, ಪ್ರಸ್ತುತ ಕೆನಡಾದಲ್ಲಿ ವಿಪರೀತ ಚಳಿಯಿದ್ದು, ಅಂತಹ ಸಮಯದಲ್ಲಿ ಹೊರಗೆ ಹೋಗಿ ಆಹಾರ ಸೇವಿಸುವುದು ವಿದ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆಯಾಗುತ್ತಿದೆ.

3.ವಿಪರ್ಯಾಸವೆಂದರೆ: ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ಮಗುವು ಪ್ರೌಢಾವಸ್ಥೆಗೆ ತಲುಪಿದಾಗ (ಅಂದರೆ ಸುಮಾರು 13 ರಿಂದ 14 ವರ್ಷ) ರಂಜಾನ್ ಉಪವಾಸವನ್ನು ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಆದರೆ, ‘ಫೇರ್‌ವ್ಯೂ ಸ್ಕೂಲ್’ ಈ ನಿಯಮದಲ್ಲಿ ಕೇವಲ 9 ವರ್ಷದ ನಾಲ್ಕನೇ ತರಗತಿಯ ಮಕ್ಕಳನ್ನೂ ಸೇರಿಸಿಕೊಂಡಿದೆ.

ಶಿಕ್ಷಣ ಮಂಡಳಿಯ ಅಸ್ಪಷ್ಟ ನಿಲುವು !

ವಿವಾದ ಉಲ್ಬಣಗೊಂಡ ನಂತರ ಕ್ಯಾಲ್ಗರಿ ಶಿಕ್ಷಣ ಮಂಡಳಿಯು ಸ್ಪಷ್ಟೀಕರಣ ನೀಡಿದೆ; ಆದರೆ ಅದು ಮತ್ತಷ್ಟು ಗೊಂದಲವನ್ನು ಸೃಷ್ಟಿಸಿದೆ. ಒಂದೆಡೆ ಇ-ಮೇಲ್ ಕಳುಹಿಸಿರುವುದನ್ನು ಮಂಡಳಿ ಒಪ್ಪಿಕೊಂಡಿದೆ, ಆದರೆ ಇನ್ನೊಂದೆಡೆ ಮಧ್ಯಾಹ್ನದ ವಿರಾಮದ ಸಮಯದಲ್ಲಿ ಹೇರಲಾದ ಆಹಾರ ನಿಷೇಧದ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸಂಪಾದಕೀಯ ನಿಲುವು

ಕೆನಡಾದಂತಹ ಸುಧಾರಣಾವಾದಿ ಸಮಾಜಕ್ಕೂ ಈ ‘ಸರ್ವಧರ್ಮ ಸಮಭಾವ’ದ ಜ್ವರ ಏರಿದೆ ಎಂಬುದು ಇದರಿಂದ ತಿಳಿದುಬರುತ್ತದೆ ! ಈ ಅತಿರೇಕದ ಸಮಭಾವವು ಅಲ್ಲಿನ ಸಮಾಜದ ಅಸ್ತಿತ್ವಕ್ಕೇ ಮುಳುವಾದರೆ ಆಶ್ಚರ್ಯಪಡಬೇಕಿಲ್ಲ !