ಭಾರತಕ್ಕೆ ರಹಸ್ಯ ಭೇಟಿ ನೀಡಿದ ಬಾಂಗ್ಲಾದೇಶದ ಗುಪ್ತಚರ ಮುಖ್ಯಸ್ಥ ! – Bangladesh DGFI Chief Visited India

  • ಅಜಿತ್ ಡೊವಾಲ ಅವರೊಂದಿಗೆ ಭೇಟಿ

  • ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧ ಸುಧಾರಣೆಗೆ ಪ್ರಯತ್ನ


ನವದೆಹಲಿ – ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರಕಾರ ಪತನಗೊಂಡ ನಂತರ, ಮಧ್ಯಂತರ ಸರಕಾರದ ಅವಧಿಯಲ್ಲಿ ಭಾರತದೊಂದಿಗಿನ ಸಂಬಂಧಗಳು ಸಾಕಷ್ಟು ಹದಗೆಟ್ಟಿದ್ದವು. ಇದೀಗ ಬಾಂಗ್ಲಾದೇಶದಲ್ಲಿ ತಾರಿಕ್ ರೆಹಮಾನ್ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಭಾರತದೊಂದಿಗೆ ಸಂಬಂಧ ಸುಧಾರಿಸುವ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ‘ಡೈರೆಕ್ಟರೇಟ್ ಜನರಲ್ ಆಫ್ ಫೋರ್ಸಸ್ ಇಂಟೆಲಿಜೆನ್ಸ್’ (DGFI) ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಕೈಸರ್ ರಶೀದ್ ಚೌಧರಿ ಅವರು ಭಾರತಕ್ಕೆ ರಹಸ್ಯ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಭೇಟಿಯ ಬಗ್ಗೆ ಭಾರತ ಅಥವಾ ಬಾಂಗ್ಲಾದೇಶ ಸರಕಾರಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಪ್ರವಾಸದ ಸಂದರ್ಭದಲ್ಲಿ ಜನರಲ್ ಚೌಧರಿ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಾಲ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿದರು. ಇದರಲ್ಲಿ ‘ರಾ’ (R&AW) ಮುಖ್ಯಸ್ಥ ಪರಾಗ ಜೈನ್ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಏಜೆನ್ಸಿಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಆರ್.ಎಸ್. ರಮಣ ಅವರನ್ನು ಭೇಟಿಯಾದರು. ಕಳೆದ 2 ವರ್ಷಗಳಿಂದ ಹದಗೆಟ್ಟಿದ್ದ ಉಭಯ ದೇಶಗಳ ನಡುವಿನ ಸಂಬಂಧವನ್ನು ಮರಳಿ ಹಳಿಗೆ ತರುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಬಾಂಗ್ಲಾದೇಶದ ದೈನಿಕ ‘ಪ್ರಥೋಮೊಲೋ’ ವರದಿ ಮಾಡಿದೆ.
ಚೌಕಟ್ಟು

ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು?

  • ಉಭಯ ದೇಶಗಳು ಪರಸ್ಪರರ ವಿರುದ್ಧ ತಮ್ಮ ಭೂಮಿಯನ್ನು ಬಳಸಲು ಅವಕಾಶ ನೀಡಬಾರದು ಎಂಬ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡಿದೆ. ಚೌಧರಿ ಅವರ ಪ್ರವಾಸದ ಬಗ್ಗೆ ತಿಳಿದಿರುವ ಮೂಲಗಳನ್ನು ಉಲ್ಲೇಖಿಸಿ ‘ದಿ ಪ್ರಿಂಟ್’ ಈ ವರದಿಯನ್ನು ನೀಡಿದೆ.
  • ಜನರಲ್ ಚೌಧರಿ ಅವರ ಈ ಪ್ರವಾಸವನ್ನು ಅಧಿಕೃತವಾಗಿ ‘ವೈದ್ಯಕೀಯ ಪ್ರವಾಸ’ ಎಂದು ಕರೆಯಲಾಗಿತ್ತು.
  • ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತದ ಭದ್ರತೆಯ ದೃಷ್ಟಿಯಿಂದ ಈ ಭೇಟಿಯು ಅತ್ಯಂತ ಮಹತ್ವದ್ದಾಗಿದೆ. ಬಾಂಗ್ಲಾದೇಶದೊಂದಿಗೆ ಸಂಬಂಧ ಹದಗೆಟ್ಟರೆ ಈಶಾನ್ಯ ರಾಜ್ಯಗಳ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆಯಾಗಬಹುದು ಎಂಬ ಆತಂಕ ಭಾರತಕ್ಕಿದೆ.