ಮುಟ್ಟಿನ ವೇಳೆ ಮಹಿಳೆಯರಿಗೆ ಕಡ್ಡಾಯ ರಜೆ ನೀಡುವ ಕುರಿತ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ !

ನಿಯಮ ರೂಪಿಸಿದರೆ ಮಹಿಳೆಯರಿಗೆ ಹಾನಿಯಾಗಲಿದೆ ಎಂದ ನ್ಯಾಯಾಲಯ

ನವ ದೆಹಲಿ – ಉದ್ಯೋಗಸ್ಥ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ (ಮಾಸಿಕ ರಜೆ) ಸಮಯದಲ್ಲಿ ಕಡ್ಡಾಯ ರಜೆ ನೀಡುವ ಕುರಿತು ನಿಯಮ ರೂಪಿಸುವುದಕ್ಕೆ ಸುಪ್ರೀಂ ಕೋರ್ಟ್ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಮಾಸಿಕ ರಜೆಯನ್ನು ಕಡ್ಡಾಯಗೊಳಿಸಿದರೆ ಮಹಿಳೆಯರ ‘ವೃತ್ತಿಜೀವನ’ದ ಮೇಲೆ ಪರಿಣಾಮ ಬೀರಬಹುದೆಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಮಾಣವೂ ಕಡಿಮೆಯಾಗಬಹುದೆಂದು ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ವಿಭಾಗೀಯ ಪೀಠದ ಮುಂದೆ ಈ ವಿಚಾರಣೆ ನಡೆಯಿತು.

​ಖಾಸಗಿ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮಾಸಿಕ ಸಮಯದಲ್ಲಿ ಮಹಿಳಾ ಉದ್ಯೋಗಿಗಳಿಗೆ ರಜೆ ನೀಡಿದರೆ ಸಂತೋಷ; ಆದರೆ ಈ ಬಗ್ಗೆ ನಿಯಮ ರೂಪಿಸಿದರೆ, ನೇರವಾಗಿ ಮಹಿಳೆಯರ ವೃತ್ತಿಜೀವನದ ಮೇಲೆ ಉಲ್ಟಾ ಪರಿಣಾಮ ಬೀರಬಹುದೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೇರಳ ರಾಜ್ಯದಲ್ಲಿ ನಿಯಮವಿರುವ ಕುರಿತು ಅರ್ಜಿದಾರರ ವಾದ

ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ತಮ್ಮ ಅರ್ಜಿಯಲ್ಲಿ, ಕೇರಳ ರಾಜ್ಯವು ಮಹಿಳೆಯರಿಗೆ ಮಾಸಿಕ ಸಮಯದಲ್ಲಿ ರಜೆ ನೀಡುವ ನಿಯಮ ಮಾಡಿದೆ ಎಂದು ಉಲ್ಲೇಖಿಸಿದ್ದರು. ಶಾಲೆ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ನಿಯಮದಿಂದ ಪ್ರಯೋಜನವಾಗುತ್ತಿದೆ ಎಂದು ಅವರು ವಾದಿಸಿದರು.