ಮೊಬೈಲ್ ಡೇಟಾ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರಕಾರದ ಚಿಂತನೆ! – Data Tax

ನವ ದೆಹಲಿ – ಭಾರತದಲ್ಲಿ ಮುಂದಿನ ದಿನಗಳಲ್ಲಿ ಮೊಬೈಲ್ ಮೂಲಕ ಇಂಟರ್ನೆಟ್ ಬಳಕೆಯು ದುಬಾರಿಯಾಗಬಹುದು. ಸರಕಾರವು ಮೊಬೈಲ್ ಡೇಟಾ ಬಳಕೆಯ ಮೇಲೆ ಹೊಸ ತೆರಿಗೆಯನ್ನು ವಿಧಿಸುವ ಆಯ್ಕೆಯನ್ನು ಪರಿಗಣಿಸುತ್ತಿದೆ. ಈ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆಗೆ ಅಧ್ಯಯನ ನಡೆಸಿ ‘ಮೊಬೈಲ್ ಡೇಟಾ ಬಳಕೆಯ ಮೇಲೆ ತೆರಿಗೆ ವಿಧಿಸಲು ಸಾಧ್ಯವೇ? ವಿಧಿಸಿದರೆ ಅದರ ಅನುಷ್ಠಾನ ಹೇಗೆ ಮಾಡಬೇಕು?’, ಎಂಬ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸರಕಾರದಿಂದ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ; ಆದರೆ ಕಳೆದ ಕೆಲವು ದಿನಗಳಿಂದ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಮೂಲಗಳನ್ನಾಧರಿಸಿ ಈ ಸುದ್ದಿಯು ಚರ್ಚೆಯಲ್ಲಿದೆ.

ಪ್ರತಿ ಜಿಬಿ ಡೇಟಾಗೆ ೧ ರೂಪಾಯಿ ತೆರಿಗೆ ವಿಧಿಸುವ ಚಿಂತನೆ

ಸರಕಾರವು ಯಾವ ಆಯ್ಕೆಯನ್ನು ಪರಿಗಣಿಸುತ್ತಿದೆಯೆಂದರೆ, ಅದರಂತೆ ಪ್ರತಿ ಜಿಬಿ ಡೇಟಾಗೆ ೧ ರೂಪಾಯಿ ತೆರಿಗೆ ವಿಧಿಸಬಹುದು. ಹೀಗಾದಲ್ಲಿ ಬಳಕೆದಾರರು ಮೊಬೈಲ್ ಡೇಟಾ ಬಳಸಿದಾಗ, ಅದರ ಮೇಲೆ ಈ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು. ಈ ರೀತಿಯಾಗಿ ತೆರಿಗೆ ವಿಧಿಸಿದರೆ ಸರಕಾರಕ್ಕೆ ಪ್ರತಿ ವರ್ಷ ಸುಮಾರು ೨೨ ಸಾವಿರದ ೯೦೦ ಕೋಟಿ ರೂಪಾಯಿಗಳಷ್ಟು ಆದಾಯ ಬರಬಹುದು ಎಂದು ಹೇಳಲಾಗುತ್ತಿದೆ; ಆದರೆ ಇದು ಕೇವಲ ಪ್ರಸ್ತಾವನೆಯಾಗಿದ್ದು, ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಭಾರತದಲ್ಲಿ ಅಗ್ಗದ ಡೇಟಾ ಮತ್ತು ಹೆಚ್ಚುತ್ತಿರುವ ಬಳಕೆ

ಭಾರತವು ವಿಶ್ವದ ಅಗ್ಗದ ಮೊಬೈಲ್ ಡೇಟಾ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಅಗ್ಗದ ಇಂಟರ್ನೆಟ್‌ ನಿಂದಾಗಿ ದೇಶದಲ್ಲಿ ಡೇಟಾ ಬಳಕೆ ವೇಗವಾಗಿ ಹೆಚ್ಚಿದೆ. ವಿಡಿಯೋ ಸೇವೆಗಳು, ಸಾಮಾಜಿಕ ಮಾಧ್ಯಮಗಳು, ಆನ್‌ಲೈನ್ ಆಟಗಳು ಮತ್ತು ಕಿರು ವಿಡಿಯೋಗಳನ್ನು ವೀಕ್ಷಿಸುವುದರಿಂದ ಮೊಬೈಲ್ ಡೇಟಾ ಬಳಕೆ ನಿರಂತರವಾಗಿ ಹೆಚ್ಚುತ್ತಿದೆ.

ಈಗಾಗಲೇ ಶೇ. ೧೮ ರಷ್ಟು ಜಿ.ಎಸ್.ಟಿ. ಅನ್ವಯ

ಪ್ರಸ್ತುತ ಮೊಬೈಲ್ ರೀಚಾರ್ಜ್ ಮೇಲೆ ಶೇ. ೧೮ ರಷ್ಟು ಜಿ.ಎಸ್.ಟಿ. (ಸರಕು ಮತ್ತು ಸೇವಾ ತೆರಿಗೆ) ವಿಧಿಸಲಾಗುತ್ತಿದೆ. ಅಂದರೆ ಬಳಕೆದಾರರು ದೂರಸಂಪರ್ಕ ಸೇವೆಗಳ ಮೇಲೆ ಈಗಾಗಲೇ ತೆರಿಗೆ ಪಾವತಿಸುತ್ತಿದ್ದಾರೆ. ಭವಿಷ್ಯದಲ್ಲಿ ಡೇಟಾ ಮೇಲೆ ಪ್ರತ್ಯೇಕ ತೆರಿಗೆ ವಿಧಿಸಿದರೆ, ಅದು ಅಸ್ತಿತ್ವದಲ್ಲಿರುವ ತೆರಿಗೆಯ ಹೊರತಾಗಿ ಹೊಸ ಶುಲ್ಕವಾಗಬಹುದು.

ಅಧ್ಯಯನದ ನಂತರವೇ ಅಂತಿಮ ನಿರ್ಧಾರ

ಪ್ರಸ್ತುತ ಸರಕಾರವು ದೂರಸಂಪರ್ಕ ಇಲಾಖೆಗೆ ಪ್ರಸ್ತಾವನೆಯ ಬಗ್ಗೆ ಸವಿಸ್ತಾರವಾಗಿ ಅಧ್ಯಯನ ನಡೆಸಿ ಅದರ ಲಾಭ ಮತ್ತು ಹಾನಿಗಳನ್ನು ತಿಳಿದುಕೊಳ್ಳಲು ತಿಳಿಸಿದೆ. ವರದಿ ಬಂದ ನಂತರವೇ ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯ ಮೇಲೆ ಹೊಸ ತೆರಿಗೆ ವಿಧಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು.