U.S. – Iran War : ಯುದ್ಧ ನಿಲ್ಲಿಸಲು ಇರಾನ್ ನಿಂದ ೩ ಷರತ್ತುಗಳು !

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ರಾಷ್ಟ್ರಾಧ್ಯಕ್ಷರಾದ ಮಸೂದ್ ಪೆಜೆಶ್ಕಿಯಾನ್

ನವ ದೆಹಲಿ – ಅಮೆರಿಕ ಮತ್ತು ಇಸ್ರೈಲ್ ದೇಶಗಳು ಇರಾನ್ ಮೇಲೆ ನಡೆಸಿರುವ ದಾಳಿಯಿಂದಾಗಿ ಕಳೆದ ೧೩ ದಿನಗಳಿಂದ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್ ರಾಷ್ಟ್ರಾಧ್ಯಕ್ಷರಾದ ಮಸೂದ್ ಪೆಜೆಶ್ಕಿಯಾನ್ ಅವರು ೩ ಷರತ್ತುಗಳನ್ನು ವಿಧಿಸಿದ್ದಾರೆ. ಈ ಬಗ್ಗೆ ‘ಎಕ್ಸ್’ನಲ್ಲಿ ಬರೆದ ಅವರು, ಈ ಯುದ್ಧವನ್ನು ನಿಲ್ಲಿಸಲು ಇರಾನ್ ವಿಧಿಸಿರುವ ಷರತ್ತುಗಳನ್ನು ಒಪ್ಪಿಕೊಳ್ಳುವುದೊಂದೇ ಏಕೈಕ ಮಾರ್ಗವಾಗಿದೆ ಎಂದಿದ್ದಾರೆ. ‘ಅಂತರಾಷ್ಟ್ರೀಯ ಮಟ್ಟದಲ್ಲಿ ಇರಾನಿನ ಸಾರ್ವಭೌಮ ಅಧಿಕಾರಗಳನ್ನು ಅಂಗೀಕರಿಸುವುದು, ಯುದ್ಧದಿಂದಾದ ನಷ್ಟಕ್ಕೆ ಯೋಗ್ಯ ಆರ್ಥಿಕ ಅಥವಾ ರಾಜತಾಂತ್ರಿಕ ಪರಿಹಾರ ನೀಡುವುದು ಮತ್ತು ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ರೀತಿಯ ಆಕ್ರಮಣ ನಡೆಯದಂತೆ ಅಂತರಾಷ್ಟ್ರೀಯ ಸಮುದಾಯ ಭದ್ರತೆಯ ಖಾತರಿ ನೀಡುವುದು ಎಂಬ ಷರತ್ತುಗಳನ್ನು ಇಡಲಾಗಿದೆ.

ಅಧ್ಯಕ್ಷರು ಇಂತಹ ಷರತ್ತುಗಳನ್ನು ವಿಧಿಸಿದ್ದರೂ ಸಹ, ಇದಕ್ಕೆ ಇರಾನ್ ಸೇನೆಯ ಸಮ್ಮತಿ ಇದೆಯೇ ಎಂಬುದು ತಿಳಿದುಬಂದಿಲ್ಲ. ಕೆಲವು ದಿನಗಳ ಹಿಂದೆ ಪೆಜೆಶ್ಕಿಯಾನ್ ಅವರು ನೆರೆಯ ದೇಶಗಳ ಮೇಲೆ ಆಕ್ರಮಣ ಮಾಡುವುದಿಲ್ಲ ಎಂದು ಘೋಷಿಸಿದ್ದರು; ಆದರೆ ಸೇನೆಯು ಈ ಘೋಷಣೆಯನ್ನು ತಿರಸ್ಕರಿಸಿ ಆಕ್ರಮಣವನ್ನು ಮುಂದುವರಿಸಿದಾಗ ಪೆಜೆಶ್ಕಿಯಾನ್ ಅವರು ಸ್ಪಷ್ಟನೆ ನೀಡಬೇಕಾಯಿತು.

ಯುದ್ಧ ಗೆದ್ದಿರುವುದಾಗಿ ಟ್ರಂಪ್ ಹೇಳಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕ ಈ ಯುದ್ಧವನ್ನು ಯಾವಾಗಲೋ ಗೆದ್ದಿದೆ; ಆದರೆ ಗುರಿ ಪೂರ್ಣಗೊಳ್ಳುವವರೆಗೆ ಅಮೆರಿಕದ ಸೈನಿಕರು ಅಲ್ಲಿ ನಿಯೋಜಿತರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ತೆರೆಯಲಾಗಿದೆ ಎಂಬ ವಾರ್ತೆ ಸುಳ್ಳು! – ಇರಾನ್

ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಹಡಗುಗಳಿಗೆ ಸಂಚರಿಸಲು ಅನುಮತಿ ನೀಡಲಾಗಿದೆ ಎಂಬ ಸುದ್ದಿಯನ್ನು ಇರಾನ್ ತಿರಸ್ಕರಿಸಿದೆ. ‘ಭಾರತದ ಧ್ವಜವಿರುವ ತೈಲ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಅನುಮತಿ ನೀಡಿಲ್ಲ’, ಎಂಬ ವಾರ್ತೆಯನ್ನು ಇರಾನ್ ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಪ್ರಕಟಿಸಿದೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರ ನಡುವಿನ ಸಂವಾದದ ನಂತರ ಇರಾನ್ ಭಾರತದ ನೌಕೆಗಳಿಗೆ ಅವಕಾಶ ನೀಡಿದೆ ಎಂದು ಹೇಳಲಾಗುತ್ತಿತ್ತು. ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸಾಗಾಟಕ್ಕೆ ಈ ಪ್ರಮುಖ ಮಾರ್ಗವು ಭಾರತಕ್ಕೆ ಮುಕ್ತವಾಗಿದೆ ಎಂದು ಹೇಳಲಾಗಿತ್ತು; ಆದರೆ ಈಗ ಇರಾನ್ ಇದನ್ನು ನಿರಾಕರಿಸಿದೆ. ಸದ್ಯಕ್ಕೆ ಕೇವಲ ಚೀನಾದ ತೈಲ ಟ್ಯಾಂಕರ್‌ಗಳಿಗೆ ಮಾತ್ರ ಇಲ್ಲಿಂದ ಹೋಗಲು ಅನುಮತಿ ನೀಡಲಾಗಿದೆ.
ಇರಾನ್ ಎಲ್ಲಾ ದೇಶಗಳ ಮುಂದೆ ಒಂದು ಷರತ್ತು ಇಟ್ಟಿದೆ. ‘ಯಾವ ದೇಶವು ಇಸ್ರೈಲಿ ರಾಯಭಾರಿಯನ್ನು ಹೊರಹಾಕುವುದೋ, ಆ ದೇಶಕ್ಕೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಅನುಮತಿ ನೀಡಲಾಗುವುದು’ ಎಂದು ಇರಾನ್ ಹೇಳಿದೆ. ಇರಾನಿನ ಇತ್ತೀಚಿನ ಈ ಹೇಳಿಕೆಯ ಬಗ್ಗೆ ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿಂದೆ ಭಾರತೀಯ ಮೂಲಗಳು, ಭಾರತೀಯ ಟ್ಯಾಂಕರ್‌ಗಳಾದ ‘ಪುಷ್ಪಕ್’ ಮತ್ತು ‘ಪರಿಮಲ್’ ಹಾರ್ಮುಜ್ ಮೂಲಕ ಸುರಕ್ಷಿತವಾಗಿ ಸಂಚರಿಸುತ್ತಿವೆ ಎಂದು ಹೇಳಿದ್ದವು.

ಹಾರ್ಮುಜ್ ಮೂಲಕ ಹೋಗಲು ಹಡಗುಗಳು ನಮ್ಮ ಅನುಮತಿ ಪಡೆಯಲೇಬೇಕು! – ಇರಾನ್

ಇನ್ನೊಂದೆಡೆ, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಎಲ್ಲಾ ಹಡಗುಗಳು ಇನ್ನು ಮುಂದೆ ಇರಾನಿನ ಅನುಮತಿ ಪಡೆಯಬೇಕಾಗುತ್ತದೆ ಎಂದು ಇರಾನಿನ ‘ರೆವಲ್ಯೂಷನರಿ ಗಾರ್ಡ್’ ಎಚ್ಚರಿಕೆ ನೀಡಿದ್ದು, ಅನುಮತಿ ಪಡೆಯದ ಕಾರಣಕ್ಕಾಗಿಯೇ ಥೈಲ್ಯಾಂಡ್‌ ನ ಹಡಗಿನ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿದೆ.
ಯುದ್ಧದ ಕಾರಣದಿಂದ ಹಾರ್ಮುಜ್ ಮುಚ್ಚಿರುವುದರಿಂದ ಸಾವಿರಾರು ನೌಕೆಗಳು ಸಿಲುಕಿಕೊಂಡಿವೆ. ಭಾರತದ ಧ್ವಜವಿರುವ ೩೭ ನೌಕೆಗಳು ಕೂಡ ಈ ಜಲಸಂಧಿಯಲ್ಲಿ ಸಿಲುಕಿವೆ ಮತ್ತು ಈ ನೌಕೆಗಳಲ್ಲಿ ೧,೧೦೯ ನಾವಿಕರಿದ್ದಾರೆ.

ಮುಂಬಯಿ ತಲುಪಿದ ಸೌದಿ ಅರೇಬಿಯಾ ತೈಲ ಟ್ಯಾಂಕರ್ !

ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಲೈಬೀರಿಯಾ ಧ್ವಜದ ತೈಲ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಮುಂಬಯಿ ತಲುಪಿದೆ. ಈ ನೌಕೆಯ ಕ್ಯಾಪ್ಟನ್ ಭಾರತೀಯರಾಗಿದ್ದರು. ಯುದ್ಧದ ಕಾರಣ ಹಾರ್ಮುಜ್‌ ನಲ್ಲಿ ಸಂಚಾರ ಸ್ಥಗಿತಗೊಂಡಿರುವ ಸಮಯದಲ್ಲಿ ಭಾರತಕ್ಕೆ ತಲುಪಿದ ಮೊದಲ ಹಡಗು ಇದಾಗಿದೆ.

ಭಾರತಕ್ಕೆ ಬರುತ್ತಿದ್ದ ಥೈಲ್ಯಾಂಡ್ ನೌಕೆಯ ಮೇಲೆ ಹಾರ್ಮುಜ್‌ ನಲ್ಲಿ ಆಕ್ರಮಣ !

ಭಾರತದ ಗುಜರಾತಿನ ಕಾಂಡ್ಲಾ ಬಂದರಿನತ್ತ ಸಾಗುತ್ತಿದ್ದ ಥೈಲ್ಯಾಂಡ್‌ ನ ವ್ಯಾಪಾರಿ ನೌಕೆ ‘ಮಯೂರಿ ನಾರಿ’ ಮೇಲೆ ಹಾರ್ಮುಜ್‌ ನಲ್ಲಿ ದಾಳಿ ಮಾಡಲಾಗಿದೆ. ದಾಳಿಯಿಂದಾಗಿ ನೌಕೆಯ ಇಂಜಿನ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ನೌಕೆಯಲ್ಲಿ ೨೩ ಸಿಬ್ಬಂದಿಗಳಿದ್ದರು. ಆಕ್ರಮಣದ ನಂತರ ಓಮನ್ ನೌಕಾಪಡೆಯು ೨೦ ಸಿಬ್ಬಂದಿಗಳನ್ನು ರಕ್ಷಿಸಿ ಖಸಾಬ್ ನಗರಕ್ಕೆ ತಲುಪಿಸಿದೆ, ಆದರೆ ೩ ನಾವಿಕರು ಇನ್ನೂ ನಾಪತ್ತೆಯಾಗಿದ್ದಾರೆ.

ಅಮೆರಿಕದ ತೈಲ ಟ್ಯಾಂಕರ್ ‘ಸೇಫಸಿ ವಿಷ್ಣು’ ಮೇಲೆ ಇರಾನ್ ದಾಳಿ; ಓರ್ವ ಭಾರತೀಯ ಸಾವು

ಇರಾಕ್ ಬಳಿ ಅಮೆರಿಕದ ಒಡೆತನದ ‘ಸೇಫಸಿ ವಿಷ್ಣು’ ಎಂಬ ತೈಲ ನೌಕೆಯ ಮೇಲೆ ಸಣ್ಣ ನೌಕೆಯ ಮೂಲಕ ಇರಾನ್ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಓರ್ವ ಭಾರತೀಯ ಪ್ರಜೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಯುದ್ಧದಲ್ಲಿ ಇದುವರೆಗೆ ೩ ಭಾರತೀಯರು ಸಾವನ್ನಪ್ಪಿದ್ದು, ೨೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಓಮನ್ ತೈಲ ದಾಸ್ತಾನಿನ ಮೇಲೆ ಇರಾನ್‌ ನಿಂದ ಡ್ರೋನ್ ದಾಳಿ

ಓಮನ್‌ ನ ಸಾಲಾಲಾ ಬಂದರಿನಲ್ಲಿರುವ ತೈಲ ಸಂಗ್ರಹಣಾ ಟ್ಯಾಂಕ್‌ ಗಳನ್ನು ಗುರಿಯಾಗಿಸಿಕೊಂಡು ಇರಾನ್ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ನಂತರ ಓಮನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅಲ್-ಸೈದ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಸಂಪರ್ಕಿಸಿ, ಓಮನ್ ಭೂಪ್ರದೇಶದ ಮೇಲೆ ನಡೆಯುತ್ತಿರುವ ಈ ದಾಳಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಓಮನ್ ಸುಲ್ತಾನರು ಯುದ್ಧದಲ್ಲಿ ತಮ್ಮ ತಟಸ್ಥ ನಿಲುವನ್ನು ಪುನರುಚ್ಚರಿಸಿದರು ಮತ್ತು ‘ಸುರಕ್ಷತೆ ಹಾಗೂ ಸ್ಥಿರತೆಯನ್ನು ಕಾಯ್ದುಕೊಳ್ಳಲು ಓಮನ್ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದರು.

ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ೨೦೦ ಡಾಲರ್‌ ತಲುಪಬಹುದು! – ಇರಾನ್

ಯುದ್ಧದ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ೨೦೦ ಡಾಲರ್‌ಗಳವರೆಗೆ (ಸುಮಾರು ೧೮,೪೦೦ ರೂಪಾಯಿ) ತಲುಪಬಹುದು ಎಂದು ಇರಾನ್ ಎಚ್ಚರಿಸಿದೆ.

ಆತ್ಮಹತ್ಯಾ ಡ್ರೋನ್‌ಗಳ ಮೂಲಕ ಅಮೆರಿಕದ ಸಮುದ್ರ ತೀರಗಳ ಮೇಲೆ ದಾಳಿ ನಡೆಸಲು ಇರಾನ್ ಸಿದ್ಧತೆ !

ಇರಾನ್ ಅಜ್ಞಾತ ನೌಕೆಯ ಮೂಲಕ ಅಮೆರಿಕದ ಸಮುದ್ರ ತೀರಗಳಿಗೆ ಘಾತಕ ಡ್ರೋನ್‌ಗಳನ್ನು ತಲುಪಿಸಲು ಪ್ರಯತ್ನಿಸುತ್ತಿದೆ. ಈ ಡ್ರೋನ್‌ ಗಳ ಮೂಲಕ ಇರಾನ್ ಅಮೆರಿಕದ ಮೇಲೆ ದಾಳಿ ನಡೆಸಲು ಯೋಜಿಸಿದೆ. ಈ ಹಿಂದೆಯೂ ಅಮೆರಿಕ ಇಂತಹ ಡ್ರೋನ್‌ಗಳನ್ನು ತಡೆಯಲು ವಿಫಲವಾಗಿತ್ತು. ಕೊಲ್ಲಿ ದೇಶಗಳಲ್ಲಿನ ಅಮೆರಿಕದ ಸೈನಿಕ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ಇಂತಹ ಆತ್ಮಹತ್ಯಾ ಡ್ರೋನ್‌ ಗಳ ಮೂಲಕವೇ ದಾಳಿ ನಡೆಸಲಾಗಿದೆ. ಇದು ಅಮೆರಿಕದ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಕ್ಯಾಲಿಫೋರ್ನಿಯಾ ಹೆಚ್ಚಿನ ಸಂಖ್ಯೆಯ ತಂತ್ರಜ್ಞಾನ ಮತ್ತು ರಕ್ಷಣಾ ಸಂಸ್ಥೆ ಹೊಂದಿರುವುದರಿಂದ, ಕ್ಯಾಲಿಫೋರ್ನಿಯಾ ಇರಾನಿನ ಗುರಿಯಾಗಿದೆಯೆಂದು ತಜ್ಞರು ಹೇಳುತ್ತಿದ್ದಾರೆ. ಇದರಿಂದಾಗಿ ಕ್ಯಾಲಿಫೋರ್ನಿಯಾ ಸೇರಿದಂತೆ ಇಡೀ ಅಮೆರಿಕದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಸರಕಾರಿ ಕಟ್ಟಡಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಭಾರತಕ್ಕೆ ತೈಲ ಖರೀದಿಸಲು ಯಾರ ಅನುಮತಿಯೂ ಬೇಕಿಲ್ಲ: ಅಮೆರಿಕಕ್ಕೆ ರಷ್ಯಾ ರಾಯಭಾರಿಯಿಂದ ಪ್ರತ್ಯುತ್ತರ

ಅಮೆರಿಕದ ಟ್ರಂಪ್ ಆಡಳಿತವು ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸಲು ಸಮ್ಮತಿ ನೀಡಿದೆ ಎಂಬ ಹೇಳಿಕೆಯ ಬಗ್ಗೆ ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತವು ತೈಲ ಖರೀದಿಸಲು ಯಾರಿಂದಲೂ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಅವರು, ಭಾರತೀಯ ತೈಲ ಸಂಸ್ಕರಣಾ ಘಟಕಗಳಿಗೆ ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಹಣಕಾಸು ಸಚಿವಾಲಯವು ೩೦ ದಿನಗಳ ವಿನಾಯಿತಿ ನೀಡಿದೆ ಎಂದು ಹೇಳಿದ್ದರು.