ಜ್ಞಾನೇಶ್ವರ ಮಾವುಲಿಯವರ ಆಳಂದಿಯನ್ನು ‘ಮಂದಿರ ನಗರ ಅಭಿವೃದ್ಧಿ ಯೋಜನೆ’ಯಲ್ಲಿ ಸೇರ್ಪಡೆಗೊಳಿಸಿ!

ಸಂಸದ ಪ್ರೊ. ಡಾ. (ಸೌ.) ಮೇಧಾ ಕುಲಕರ್ಣಿ ಅವರಿಂದ ರಾಜ್ಯಸಭೆಯಲ್ಲಿ ಆಗ್ರಹಪೂರ್ವಕ ಬೇಡಿಕೆ

ಮುಂಬಯಿ – ಮಹಾರಾಷ್ಟ್ರದ ಆರಾಧ್ಯದೈವ ಮತ್ತು ವಾರಕರಿ ಸಂಪ್ರದಾಯದ ಪ್ರಾಣವಾಗಿರುವ ಸಂತಶ್ರೀ ಜ್ಞಾನೋಬಾ ಮಾವುಲಿ ಅವರ ‘ಸಂತಶ್ರೀ ಜ್ಞಾನೇಶ್ವರ ಮಹಾರಾಜ ಸಂಜೀವನ ಸಮಾಧಿ ಮಂದಿರ’ವು ಆಳಂದಿಯಲ್ಲಿದೆ. ಈ ‘ಪವಿತ್ರ ಆಳಂದಿ ನಗರಿ’ಯನ್ನು ಕೇಂದ್ರ ಸರ್ಕಾರದ ‘ಮಂದಿರ ನಗರ ಅಭಿವೃದ್ಧಿ ಯೋಜನೆ’ಯಲ್ಲಿ (Temple Town Development Plan) ಸೇರ್ಪಡೆಗೊಳಿಸಬೇಕೆಂದು ಭಾಜಪ ಸಂಸದೆ ಪ್ರೊ. ಡಾ. (ಸೌ.) ಮೇಧಾ ಕುಲಕರ್ಣಿ ಅವರು ಸಂಸತ್ತಿನಲ್ಲಿ ಆಗ್ರಹಪೂರ್ವಕವಾಗಿ ಒತ್ತಾಯಿಸಿದರು. “ಕೇಂದ್ರ ಸರ್ಕಾರದ ಮುಂಬರುವ ನೀತಿ ಅವಕಾಶದ ಲಾಭವು ಆಳಂದಿಗೆ ದೊರೆತರೆ, ಈ ತೀರ್ಥಕ್ಷೇತ್ರದ ಕಾಯಕಲ್ಪವಾಗಿ ಭಕ್ತಾದಿಗಳಿಗೆ ಜಾಗತಿಕ ಮಟ್ಟದ ಸೌಲಭ್ಯಗಳು ಲಭಿಸಲಿವೆ”, ಎಂದು ಕುಲಕರ್ಣಿ ಅವರು ರಾಜ್ಯಸಭೆಯಲ್ಲಿ ‘ವಿಶೇಷ ಉಲ್ಲೇಖ’ದ (Special Mention) ಮೂಲಕ ತಿಳಿಸಿದರು.

  • ಸಂಸತ್ತಿನಲ್ಲಿ ಮಂಡಿಸಲಾದ ಪ್ರಮುಖ ಅಂಶಗಳು

    ಮೂಲಭೂತ ಸೌಕರ್ಯಗಳ ಮೇಲಿನ ಒತ್ತಡ ನಿವಾರಿಸುವ ಅವಶ್ಯಕತೆ

ಆಳಂದಿಯು ದೇಶದ ಅತ್ಯಂತ ಪೂಜನೀಯ ತೀರ್ಥಕ್ಷೇತ್ರವಾಗಿದೆ. ಇಲ್ಲಿಗೆ ಪ್ರತಿ ವರ್ಷ ಆಷಾಢ ಮತ್ತು ಕಾರ್ತಿಕ ‘ವಾರಿ’ಯ (ಪಾದಯಾತ್ರೆ) ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಅಪಾರ ಜನಸಂದಣಿಯಿಂದಾಗಿ ಸ್ಥಳೀಯ ನಾಗರಿಕ ಸೌಲಭ್ಯಗಳು, ಸ್ವಚ್ಛತೆ, ಸಂಚಾರ ಮತ್ತು ಪರಿಸರ ಸಂಪನ್ಮೂಲಗಳ ಮೇಲೆ ಭಾರಿ ಒತ್ತಡ ಉಂಟಾಗುತ್ತದೆ. ಈ ಒತ್ತಡವನ್ನು ಕಡಿಮೆ ಮಾಡಲು ಯೋಜಿತ ಅಭಿವೃದ್ಧಿಯ ಅವಶ್ಯಕತೆಯಿದೆ.

ಅಯೋಜಿತ ನಗರೀಕರಣದ ಸವಾಲು

ರಾಷ್ಟ್ರೀಯ ಮಟ್ಟದಲ್ಲಿ ಆಧ್ಯಾತ್ಮಿಕ ಮಹತ್ವ ಹೊಂದಿದ್ದರೂ ಸಹ, ಇಂದು ಆಳಂದಿಯು ಅವೈಜ್ಞಾನಿಕ ನಗರೀಕರಣ ಮತ್ತು ಅಪೂರ್ಣ ಮೂಲಭೂತ ಸೌಕರ್ಯಗಳ ಸವಾಲನ್ನು ಎದುರಿಸುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ‘ಟಿಯರ್-೨’ ನಗರಗಳು ಮತ್ತು ಮಂದಿರ ನಗರಗಳ ಅಭಿವೃದ್ಧಿಗೆ ನೀಡಿರುವ ಒತ್ತು, ಈ ಸಮಸ್ಯೆಗಳನ್ನು ಬಗೆಹರಿಸಲು ಅತ್ಯುತ್ತಮ ಅವಕಾಶವಾಗಿದೆ. (ಟಿಯರ್-೨ ನಗರಗಳೆಂದರೆ ೧ ರಿಂದ ೫ ಲಕ್ಷ ಜನಸಂಖ್ಯೆ ಹೊಂದಿರುವ, ವೇಗವಾಗಿ ಬೆಳೆಯುತ್ತಿರುವ ನಗರಗಳು).

ಇಂದ್ರಾಯಣಿ ನದಿಯ ಮಾಲಿನ್ಯ ತಡೆ ಮತ್ತು ಪುನರುಜ್ಜೀವನ

ಆಳಂದಿಯ ಗುರುತು ಪವಿತ್ರ ಇಂದ್ರಾಯಣಿ ನದಿಯೊಂದಿಗೆ ಅವಿಭಾಜ್ಯವಾಗಿ ಬೆಸೆದುಕೊಂಡಿದೆ. ಪ್ರಸ್ತುತ ನದಿಯ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಅದರ ಪುನರುಜ್ಜೀವನ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ‘ಮಂದಿರ ನಗರ’ ಸ್ಥಾನಮಾನ ದೊರೆತರೆ ‘ರಿವರ್ ಫ್ರಂಟ್ ಡೆವಲಪ್‌ಮೆಂಟ್’ (ನದಿ ತೀರದ ಅಭಿವೃದ್ಧಿ) ಮತ್ತು ಪ್ರವಾಹ ನಿಯಂತ್ರಣಕ್ಕಾಗಿ ಏಕೀಕೃತ ಯೋಜನೆಯನ್ನು ರೂಪಿಸಲು ಸಾಧ್ಯವಾಗುತ್ತದೆ.

‘ಮಂದಿರ ನಗರ’ ಸ್ಥಾನಮಾನ ದೊರೆತರೆ ಆಗುವ ಲಾಭಗಳು

1. ಭಕ್ತಾದಿಗಳಿಗೆ ಸೌಲಭ್ಯ: ಶುದ್ಧ ನೀರು, ಒಳಚರಂಡಿ ಮತ್ತು ಘನತ್ಯಾಜ್ಯ ನಿರ್ವಹಣೆಯ ಆಧುನಿಕ ಯೋಜನೆಗಳ ಅನುಷ್ಠಾನ.

2. ಸಾರಿಗೆ ಸುಧಾರಣೆ: ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ರಸ್ತೆ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಬಲವರ್ಧನೆ.

3. ಪರಂಪರೆಯ ಸಂರಕ್ಷಣೆ: ಆಳಂದಿಯ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸಿ, ಆಧುನಿಕ ಮೂಲಭೂತ ಸೌಕರ್ಯಗಳ ನಿರ್ಮಾಣ.

4. ಜೀವನಮಟ್ಟದಲ್ಲಿ ಸುಧಾರಣೆ: ಸ್ಥಳೀಯ ನಿವಾಸಿಗಳ ಆರೋಗ್ಯ ಮತ್ತು ಜೀವನಮಟ್ಟದಲ್ಲಿ ಗಣನೀಯ ಸುಧಾರಣೆ.