೫೦ ವರ್ಷಗಳ ನಂತರ ಹೊಸ ತೈಲ ಸಂಸ್ಕರಣಾಗಾರವನ್ನು ಸ್ಥಾಪಿಸಲಿರುವ ಅಮೆರಿಕಾ

  • ಭಾರತದ ರಿಲಯನ್ಸ್ ಸಂಸ್ಥೆಯಿಂದ ಹೂಡಿಕೆ

  • ರಿಲಯನ್ಸ್ ಮತ್ತು ಭಾರತಕ್ಕೆ ಧನ್ಯವಾದ ಸಲ್ಲಿಸಿದ ಟ್ರಂಪ್

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೆಕ್ಸಾಸ್‌ ನ ಬ್ರೌನಸ್ ವಿಲ್ಲೆ ಬಂದರಿನಲ್ಲಿ ಹೊಸ ತೈಲ ಸಂಸ್ಕರಣಾ ಯೋಜನೆಯನ್ನು (ಆಯಿಲ್ ರಿಫೈನರಿ) ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಸುಮಾರು ೫೦ ವರ್ಷಗಳ ನಂತರ ಅಮೆರಿಕದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಹೊಸ ತೈಲ ಸಂಸ್ಕರಣಾಗಾರ ಇದಾಗಲಿದೆ. ಈ ಯೋಜನೆಯಲ್ಲಿ ಅಂದಾಜು ೩೦೦ ಶತಕೋಟಿ ಡಾಲರ್ ಹೂಡಿಕೆಯನ್ನು ನಿರೀಕ್ಷಿಸಲಾಗಿದ್ದು, ಭಾರತದ ಪ್ರಮುಖ ಖಾಸಗಿ ಇಂಧನ ಸಂಸ್ಥೆ ‘ರಿಲಯನ್ಸ್ ಇಂಡಸ್ಟ್ರೀಸ್’ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಲಿದೆ. ಈ ಕಾರಣದಿಂದಾಗಿ, ಘೋಷಣೆಯ ಸಮಯದಲ್ಲಿ ಟ್ರಂಪ್ ಅವರು ಭಾರತ ಮತ್ತು ರಿಲಯನ್ಸ್ ಸಂಸ್ಥೆಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.

ಟ್ರಂಪ್ ಅವರ ಪ್ರಕಾರ, ಈ ಯೋಜನೆಯಿಂದ ಅಮೆರಿಕದ ಇಂಧನ ಉತ್ಪಾದನೆ ಹೆಚ್ಚಾಗಲಿದೆ, ದೇಶೀಯ ಮಾರುಕಟ್ಟೆಗೆ ಹೆಚ್ಚಿನ ಇಂಧನ ಲಭ್ಯವಾಗಲಿದೆ ಮತ್ತು ರಾಷ್ಟ್ರೀಯ ಭದ್ರತೆಯೂ ಬಲಗೊಳ್ಳಲಿದೆ. ಅಲ್ಲದೆ, ಈ ಯೋಜನೆಯಿಂದ ದಕ್ಷಿಣ ಟೆಕ್ಸಾಸ್ ಪ್ರದೇಶದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಮತ್ತು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗಲಿದೆ.

ಈ ಯೋಜನೆಯನ್ನು ಸ್ಥಾಪಿಸುವರು ಯಾರು?

ಅಮೆರಿಕ ಫಸ್ಟ್ ರಿಫೈನಿಂಗ್’ ಹೆಸರಿನ ಸಂಸ್ಥೆಯು ಈ ಯೋಜನೆಯನ್ನು ಅಭಿವೃದ್ಧಿಪಡಿಸಲಿದೆ. ಈ ಯೋಜನೆಗಾಗಿ ಜಾಗತಿಕ ಇಂಧನ ಸಂಸ್ಥೆಗಳಿಂದ ದೊಡ್ಡ ಹೂಡಿಕೆ ಲಭಿಸಿದ್ದು, ೨೦ ವರ್ಷಗಳ ಇಂಧನ ಖರೀದಿ-ಪೂರೈಕೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ರಿಫೈನರಿಯ ನಿರ್ಮಾಣ ಕಾರ್ಯವು ೨೦೨೬ ರ ಎರಡನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವ್ಯಕ್ತಪಡಿಸಲಾಗಿದೆ.

ಅಮೆರಿಕದಲ್ಲಿ ೫೦ ವರ್ಷಗಳಿಂದ ಹೊಸ ರಿಫೈನರಿ ಏಕೆ ನಿರ್ಮಿಸಲಿಲ್ಲ?

ತಜ್ಞರ ಪ್ರಕಾರ, ಇದರ ಹಿಂದೆ ಕೆಲವು ಕಾರಣಗಳಿದ್ದವು:

೧. ಕಠಿಣವಾಗಿರುವ ಪರಿಸರ ನಿಯಮಗಳು.

೨. ಹೊಸ ಯೋಜನೆಗೆ ತಗಲುವ ಭಾರಿ ಆರ್ಥಿಕ ವೆಚ್ಚ.

೩. ಹಳೆಯ ರಿಫೈನರಿಗಳನ್ನು ವಿಸ್ತರಿಸಿ ಉತ್ಪಾದನೆ ಹೆಚ್ಚಿಸುವುದು ಅಗ್ಗ.

೪. ಇಂಧನ ಪರಿವರ್ತನೆ ನೀತಿಗಳು.

ಇದೇ ಕಾರಣಕ್ಕಾಗಿ ಕಳೆದ ಕೆಲವು ದಶಕಗಳಲ್ಲಿ ಅಮೆರಿಕದಲ್ಲಿ ಹೊಸ ರಿಫೈನರಿಗಳನ್ನು ಸ್ಥಾಪಿಸದೆ ಹಳೆಯವುಗಳನ್ನೇ ವಿಸ್ತರಿಸಲಾಗುತ್ತಿತ್ತು.