Maulana Hasan Ali Rajani : ಅಯತುಲ್ಲಾ ಅಲಿ ಖಮೇನಿ ಶಿಯಾ ಮುಸ್ಲಿಮರ ಮುಖ್ಯಸ್ಥರಲ್ಲ !

  • ‘ಆಲ್ ಇಂಡಿಯಾ ಶಿಯಾ ಪರ್ಸನಲ್ ಲಾ ಬೋರ್ಡ್’ ನ ಉಪಾಧ್ಯಕ್ಷ ಮೌಲಾನಾ ಹಸನ್ ಅಲಿ ರಜನಿ ಸ್ಪಷ್ಟನೆ

  • ಇರಾನ್ ನಲ್ಲಿನ ಯಾವುದೇ ಮೌಲ್ವಿಯನ್ನು (ಇಸ್ಲಾಮಿನ ಧಾರ್ಮಿಕ ನಾಯಕರು) ಒಪ್ಪುವುದಿಲ್ಲ ಎಂದು ಸ್ಪಷ್ಟನೆ !

ಮುಂಬಯಿ: “ಯಾರ ಮನೆಯಲ್ಲಿ ಸಾವು ಸಂಭವಿಸಿದೆಯೋ, ಅವರ ಬಗ್ಗೆ ನಾವು ಶೋಕ ವ್ಯಕ್ತಪಡಿಸುತ್ತೇವೆ ಮತ್ತು ಅವರ ದುಃಖದಲ್ಲಿ ಭಾಗಿಗಳಾಗಿದ್ದೇವೆ. ಆದರೆ, ಪ್ರತಿ ದೇಶದ ವಿವಾದಗಳು ಆಯಾ ದೇಶಕ್ಕೇ ಸೀಮಿತವಾಗಿರಬೇಕು. ಆ ವಿವಾದಗಳನ್ನು ಬೇರೆಡೆಗೆ ತರಬಾರದು. ಇರಾನ್ ತನ್ನ ವಿವಾದವನ್ನು ಇರಾನ್‌ನಲ್ಲೇ ಇಟ್ಟುಕೊಳ್ಳಲಿ, ಅಮೆರಿಕ ತನ್ನ ವಿವಾದವನ್ನು ಅಮೆರಿಕದಲ್ಲೇ ಇಟ್ಟುಕೊಳ್ಳಲಿ. ಇಂದು ವಿಶ್ವದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ನಾವು ಕಠಿಣವಾಗಿ ಖಂಡಿಸುತ್ತೇವೆ; ಅದು ಭಾರತದಲ್ಲಿ ನಡೆಯಲಿ ಅಥವಾ ಪಾಕಿಸ್ತಾನದಲ್ಲಾಗಿರಲಿ. ಏಕೆಂದರೆ, ಮೃತಪಟ್ಟವರು ನಮ್ಮ ಮಾರ್ಗದರ್ಶಕರಲ್ಲ, ಅವರು ನಮ್ಮ ಮುಖ್ಯಸ್ಥರೂ ಅಲ್ಲ. ಇಡೀ ವಿಶ್ವದ ಶಿಯಾ ಸಮುದಾಯವು ಇರಾಕ್‌ನ ಅಯತುಲ್ಲಾ ಸಿಸ್ತಾನಿ ಅವರನ್ನು ಗೌರವಿಸುತ್ತದೆ. ಇರಾನ್‌ನ ಯಾವುದೇ ಮೌಲ್ವಿಗಳಿಗೆ ನಾವು ಮಾನ್ಯ ಮಾಡುವುದಿಲ್ಲ,” ಎಂದು ಆಲ್ ಇಂಡಿಯಾ ಶಿಯಾ ಪರ್ಸನಲ್ ಲಾ ಬೋರ್ಡ್‌ನ ಉಪಾಧ್ಯಕ್ಷ ಮೌಲಾನಾ ಹಸನ್ ಅಲಿ ರಜನಿ ಹೇಳಿದ್ದಾರೆ.

ಹಣ ನೀಡಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಆರೋಪ

ಪ್ರತಿಭಟನೆ ಕುರಿತು ಗಂಭೀರ ಆರೋಪ ಮಾಡಿದ ಮೌಲಾನಾ ರಜನಿ, “ಕೆಲವು ಜನರು ರಾಜಕೀಯ ಲಾಭಕ್ಕಾಗಿ ಹಣ ನೀಡುತ್ತಾರೆ ಮತ್ತು ಇಡೀ ವಿಶ್ವದಲ್ಲಿ ಪ್ರತಿಭಟನೆಗಳನ್ನು ನಡೆಸಿ ವಾತಾವರಣವನ್ನು ಹಾಳು ಮಾಡುತ್ತಾರೆ. ಇತ್ತೀಚೆಗೆ ನಮ್ಮ ಕಡೆಯ ಕೆಲವರು ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿದರು, ಅದರ ಪ್ರತಿಯಾಗಿ 35 ಶಿಯಾಗಳು ಕೊಲ್ಲಲ್ಪಟ್ಟರು. ಬಾಂಗ್ಲಾದೇಶ ಮತ್ತು ಕತಾರ್‌ನಲ್ಲಿಯೂ ಮುಸ್ಲಿಮರು ಸಾವನ್ನಪ್ಪಿದರು. ವಿಶ್ವದಾದ್ಯಂತ ಮುಸ್ಲಿಮರು ಬಲಿಯಾಗುತ್ತಿದ್ದಾರೆ. ನಾವು ಅವರಿಗೆ ಇಷ್ಟೇ ವಿನಂತಿಸುತ್ತೇವೆ – ನಿಮ್ಮ ದೇಶದ ಬಗ್ಗೆ ನಿಷ್ಠೆ ಇರಲಿ ಮತ್ತು ಈ ವಿಷಯಗಳನ್ನು ಆಯಾ ದೇಶಕ್ಕೆ ಮಾತ್ರ ಸೀಮಿತಗೊಳಿಸಿ,” ಎಂದರು.

ವಿಶ್ವದಲ್ಲಿ 2 ಕೋಟಿ ಮುಸ್ಲಿಮರು ಹತರಾದರು; ಆದರೆ ಭಾರತದ ಯಾವ ಮುಸ್ಲಿಮರೂ ಮಾತನಾಡುವುದಿಲ್ಲ !

“ಕಳೆದ 40 ವರ್ಷಗಳಲ್ಲಿ 2 ಕೋಟಿಗೂ ಹೆಚ್ಚು ಮುಸ್ಲಿಮರು ಕೊಲ್ಲಲ್ಪಟ್ಟಿದ್ದಾರೆ, ಆದರೆ ಭಾರತದ ಯಾವುದೇ ಮುಸ್ಲಿಮರು ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಭಾರತದಲ್ಲಿ ಒಬ್ಬ ಮುಸ್ಲಿಂ ಮೃತಪಟ್ಟರೆ, ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವದ ಎಲ್ಲಾ ಸುದ್ದಿವಾಹಿನಿಗಳು ತೋರಿಸುತ್ತವೆ. ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಅಥವಾ ಭಾವಚಿತ್ರವನ್ನು ನಾವು ಬೇರೆ ದೇಶದಲ್ಲಿ ಬಳಸಲು ಸಾಧ್ಯವಿಲ್ಲ; ಆದರೆ ನಮ್ಮ ದೇಶದಲ್ಲಿ ವಿದೇಶಿ ನಾಯಕರ ಭಾವಚಿತ್ರಗಳನ್ನು ಇಟ್ಟುಕೊಳ್ಳಲಾಗುತ್ತದೆ, ಅವರ ಧ್ವಜಗಳನ್ನು ಹಾರಿಸಲಾಗುತ್ತದೆ ಮತ್ತು ಅವರ ಸಾವಿನ ಕುರಿತು ಪ್ರತಿಭಟನೆ ನಡೆಸಲಾಗುತ್ತದೆ,” ಎಂದು ರಜನಿ ಅಸಮಾಧಾನ ವ್ಯಕ್ತಪಡಿಸಿದರು.

ಮೊಹರಂ ಮೆರವಣಿಗೆಯಲ್ಲಿ ಖಮೇನಿ ಭಾವಚಿತ್ರ ಬಳಸಬೇಡಿ !

ಖಮೇನಿ ಪರವಾಗಿ ಪ್ರತಿಭಟನೆಗಳು ನಡೆಯಬಾರದೆಂದು ಮೌಲಾನಾ ರಜನಿ ಸ್ಪಷ್ಟಪಡಿಸಿದರು. “ಮೊಹರಂ ಮೆರವಣಿಗೆಯಲ್ಲಿ ಖಮೇನಿ ಅವರ ಭಾವಚಿತ್ರವನ್ನು ಇರಿಸಿದರೆ, ನಾವು ಕೂಡ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಇಡುತ್ತೇವೆ; ಅದಕ್ಕಾಗಿ ನಮ್ಮನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ. ನಾವು ನಮ್ಮ ಪ್ರಧಾನಮಂತ್ರಿಯವರ ಹೆಸರು ಹೇಳಿದರೆ ನಮ್ಮನ್ನು ‘ಭಯೋತ್ಪಾದಕರು’ ಎಂದು ಕರೆಯಲಾಗುತ್ತದೆ. ಆದರೆ ಈ ಜನರು ಬೇರೆ ದೇಶದ ನಾಯಕರ ಹೆಸರು ಮತ್ತು ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಾರೆ, ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡುತ್ತಾರೆ; ಆಗ ಅವರು ಭಯೋತ್ಪಾದಕರೆನಿಸುವುದಿಲ್ಲವೇ? ನಾವು ಇದನ್ನು ಕಠಿಣವಾಗಿ ವಿರೋಧಿಸುತ್ತೇವೆ. ಇಡೀ ವಿಶ್ವದ ಶಿಯಾಗಳು ಇರಾನ್ ಪರವಾಗಿಲ್ಲ; ಕೇವಲ ಕೆಲವೇ ಕೆಲವು ಜನರು ಅವರ ಜೊತೆಗಿದ್ದಾರೆ,” ಎಂದು ರಜನಿ ವಿವರಿಸಿದರು.