ಪ.ಬಂಗಾಳದ ಎಸ್‌.ಐ.ಆರ್. ಪ್ರಕ್ರಿಯೆಯಿಂದ 66 ಲಕ್ಷ ಮತದಾರರು ಹೊರಕ್ಕೆ!

60 ಲಕ್ಷ ಮತದಾರರಿಗೆ ಸಂಬಂಧಿಸಿದ ನಿರ್ಧಾರ ಬಾಕಿ

(‘ಎಸ್‌.ಐ.ಆರ್.’ ಅಂದರೆ ‘ಸ್ಪೆಷಲ್ ಇಂಟೆನ್ಸಿವ್ ರಿವಿಷನ್’ – ಮತದಾರರ ವಿಶೇಷ ಆಳವಾದ ಮರುಪರಿಶೀಲನೆ)

ಪ.ಬಂಗಾಳ – ಇಲ್ಲಿನ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಆ ದೃಷ್ಟಿಯಿಂದ ರಾಜ್ಯದಲ್ಲಿ ಮತದಾರರ ವಿಶೇಷ ಆಳವಾದ ಮರುಪರಿಶೀಲನಾ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದ್ದು, ಫೆಬ್ರವರಿ 28 ರಂದು ಹೊಸ ಮತದಾರರ ಪಟ್ಟಿಯನ್ನು ಘೋಷಿಸಲಾಗಿದೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಒಟ್ಟು ಮತದಾರರ ಸಂಖ್ಯೆ ಈಗ 7 ಕೋಟಿಗಿಂತ ಹೆಚ್ಚಿದೆ. ಈ ಪಟ್ಟಿಯಿಂದ ಈಗ ಅಂದಾಜು 66 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ, ಹಾಗೆಯೇ 60 ಲಕ್ಷ ಮತದಾರರ ಹೆಸರುಗಳಿಗೆ ಸಂಬಂಧಿಸಿದ ನಿರ್ಧಾರವು ಇನ್ನೂ ಬಾಕಿಯಿದೆ. ಅಂದರೆ ಅವರ ಮತದಾನದ ಹಕ್ಕಿನ ಬಗ್ಗೆ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಳ್ಳಬೇಕಿದೆ.

1. ಪ.ಬಂಗಾಳ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಅವರು, ಈ ಪ್ರಕ್ರಿಯೆಯ ಸಮಯದಲ್ಲಿ ಅಂದಾಜು 58 ಲಕ್ಷ ಅರ್ಜಿಗಳು ಕಂಡುಬಂದಿದ್ದು, ಅದರಲ್ಲಿ ಮತದಾರರು ಮೃತರಾಗಿದ್ದರು, ಬೇರೆಡೆಗೆ ವಲಸೆ ಹೋಗಿದ್ದರು ಅಥವಾ ಅವರ ಹೆಸರುಗಳು ಎರಡು ಬಾರಿ ನೋಂದಣಿಯಾಗಿದ್ದವು ಎಂದು ತಿಳಿಸಿದ್ದಾರೆ. ಸುಮಾರು 116 ದಿನಗಳ ಕಾಲ ಮನೆ-ಮನೆಗೆ ಹೋಗಿ ಪರಿಶೀಲಿಸಿದ ನಂತರ ಈ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಪ್ರಕ್ರಿಯೆಯ ಸಮಯದಲ್ಲಿ ‘ಫಾರ್ಮ್-7’ ಮೂಲಕ 5 ಲಕ್ಷ 46 ಸಾವಿರದ 53 ಹೆಸರುಗಳನ್ನು ತೆಗೆದುಹಾಕಲಾಗಿದ್ದರೆ, 1 ಲಕ್ಷ 82 ಸಾವಿರ ಹೊಸ ಹೆಸರುಗಳನ್ನು ಸೇರಿಸಲಾಗಿದೆ.

2. ರಾಜ್ಯದ ನಾಡಿಯಾ ಜಿಲ್ಲೆಯಲ್ಲಿ ಅಂದಾಜು 2 ಲಕ್ಷ 73 ಸಾವಿರ ಮತ್ತು ಬಂಕುರಾದಲ್ಲಿ 1 ಲಕ್ಷ 18 ಸಾವಿರ ಹೆಸರುಗಳನ್ನು ಕೈಬಿಡಲಾಗಿದೆ. ಉತ್ತರ ಕೋಲಕಾತಾದ 7 ಕ್ಷೇತ್ರಗಳಿಂದ 4 ಲಕ್ಷ 7 ಸಾವಿರ ಹೆಸರುಗಳು ಕಡಿಮೆಯಾಗಿವೆ. ಹೂಗ್ಲಿಯಲ್ಲಿ 3 ಲಕ್ಷ 34 ಸಾವಿರ ಮತ್ತು ಅಲಿಪುರ್ದುವಾರ್‌ನಲ್ಲಿ 1 ಲಕ್ಷಕ್ಕೂ ಅಧಿಕ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರುಗಳನ್ನು ಕೈಬಿಟ್ಟಿರುವುದು ಚುನಾವಣಾ ಫಲಿತಾಂಶದ ಮೇಲೆ ಭಾರಿ ಪರಿಣಾಮ ಬೀರಬಹುದು.

‘ಇದು ಬಂಗಾಳಿ ಜನರಿಗೆ ತೊಂದರೆ ನೀಡುವ ಪಿತೂರಿ!’- ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಹೊಸ ಮತದಾರರ ಪಟ್ಟಿ ಪ್ರಕಟವಾದ ನಂತರ ಪ.ಬಂಗಾಳದ ರಾಜಕೀಯ ವಾತಾವರಣ ಬಿಸಿಯಾಗಿದೆ. ಬಂಗಾಳಿ ಜನರನ್ನು ಪೀಡಿಸಲು ನಡೆಯುತ್ತಿರುವ ಪಿತೂರಿ ಇದಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಪಟ್ಟಿಯಿಂದ ಕೈಬಿಡಲಾದ ಹೆಸರುಗಳ ಸಂಖ್ಯೆ ೮೦ ಲಕ್ಷಕ್ಕೆ ತಲುಪಬಹುದು ಎಂದು ಅವರು ಅಂದಾಜಿಸಿದ್ದಾರೆ. (ಮಮತಾ ಬ್ಯಾನರ್ಜಿ ಅವರಿಗೆ ಈ ಅಂಕಿ-ಅಂಶ ಹೇಗೆ ತಿಳಿಯಿತು? ತಾವು ಸೃಷ್ಟಿಸಿದ ನಕಲಿ ಮತದಾರರ ಸಂಖ್ಯೆ ತಮಗೆ ತಿಳಿದಿರುವುದರಿಂದಲೇ ಅವರು ಈ ಅಂಕಿ-ಅಂಶವನ್ನು ಹೇಳುತ್ತಿದ್ದಾರೆಯೇ? – ಸಂಪಾದಕರು)

ತೃಣಮೂಲ ಕಾಂಗ್ರೆಸ್ ನಾಯಕ ತನ್ಮಯ್ ಘೋಷ್ ಅವರು ಕಾನೂನು ಮತ್ತು ರಾಜಕೀಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಆದರೆ, “ಕೇವಲ ಸರಿಯಾದ ಮತದಾರರ ಪಟ್ಟಿಯ ಆಧಾರದ ಮೇಲೆ ಚುನಾವಣೆ ಎದುರಿಸುವುದೇ ಪಕ್ಷಗಳ ಕೆಲಸ ಹೊರತು, ಲಾಭ ಅಥವಾ ನಷ್ಟದ ಬಗ್ಗೆ ಯೋಚಿಸುವುದಲ್ಲ” ಎಂದು ಬಿಜೆಪಿ ಹೇಳಿದೆ.

ಸಂಪಾದಕೀಯ ನಿಲುವು

ಪ.ಬಂಗಾಳದ ಪಟ್ಟಿಯಿಂದ ಕೈಬಿಡಲಾದ ಮತದಾರರ ಸಂಖ್ಯೆ ಸುಮಾರು 1 ಕೋಟಿಯ ಹತ್ತಿರ ತಲುಪುತ್ತಿದೆ. ಇದುವರೆಗೆ ಇಂತಹದ್ದೇ ನಕಲಿ ಮತದಾರರ ಬಲದ ಮೇಲೆ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಪ.ಬಂಗಾಳದಲ್ಲಿ ಆಡಳಿತ ನಡೆಸುತ್ತಾ ಬಂದಿದ್ದಾರೆಂದು ಹೇಳಲು ಅವಕಾಶವಿದೆ!