ಪರಾತ್ಪರ ಗುರು ಡಾ. ಆಠವಲೆ ಅವರಲ್ಲಿ ಕಂಡುಬಂದ ಅಸಾಮಾನ್ಯ ವೈಶಿಷ್ಟ್ಯಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ‘ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ’ ಎಂದು ಕಲಿಸಿ, ಅದನ್ನು ಸ್ವತಃ ಕೃತಿಯಲ್ಲಿ ತರುವ ಮೂಲಕ ಇತರರಿಗೂ ಅದರಂತೆ ಬದುಕಲು ಕಲಿಸುವುದು 

 ‘ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ’ ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆ ಅವರು ಸಾಧಕರಿಗೆ ಆರಂಭದಿಂದಲೂ ಕಲಿಸಿದ್ದಾರೆ. ಅವರು ಅದನ್ನು ಕೇವಲ ಕಲಿಸುವುದು ಮಾತ್ರವಲ್ಲ, ಪ್ರತ್ಯಕ್ಷವಾಗಿ ಕೃತಿಯಲ್ಲಿಯೂ ತಂದಿದ್ದಾರೆ. ಪರಾತ್ಪರ ಗುರು ಡಾಕ್ಟರರು ಪ್ರತಿ ಕ್ಷಣವೂ ಮತ್ತು ಪ್ರತಿ ಕೃತಿಯಲ್ಲಿಯೂ ಅಧ್ಯಾತ್ಮದಂತೆ ಬದುಕುತ್ತಾರೆ. ಉದಾಹರಣೆಗೆ, ಬರೆಯಲು ಸಣ್ಣ ಕಾಗದಗಳನ್ನು ಬಳಸುವುದು, ಬೆರಳೆಣಿಕೆಯಷ್ಟು ಬಟ್ಟೆಗಳನ್ನು ಬಳಸುವುದು, ಸರಳ ಜೀವನಶೈಲಿ – ಈ ಕೃತಿಗಳ ಮೂಲಕ ಅವರು ‘ಮಿತವ್ಯಯ’ ಎಂಬ ದೇವರ ಗುಣವನ್ನು ಸಾಧಕರಿಗೆ ಕಲಿಸಿದರು. ‘ವಿವಿಧ ಸಂತರು ಹೇಳಿದ ಬೇರೆ ಬೇರೆ ಆಧ್ಯಾತ್ಮಿಕ ಸ್ತರದ ಕೃತಿಗಳನ್ನು ಅನೇಕ ವರ್ಷಗಳ ಕಾಲ ನಿಯಮಿತವಾಗಿ ಮಾಡುವುದು, ವೈದ್ಯರು ಹೇಳಿದ ಔಷಧಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳುವುದು’ ಈ ಕೃತಿಗಳ ಮೂಲಕ ಅವರು ಆಜ್ಞಾಪಾಲನೆಯ ಆದರ್ಶವನ್ನು ಸಾಧಕರಿಗೆ ತೋರಿಸಿಕೊಟ್ಟರು.

ಅಭ್ಯಾಸ ವರ್ಗ, ಸತ್ಸಂಗ ಮತ್ತು ಸಭೆಗಳನ್ನು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಆರಂಭಿಸಿ ಮುಕ್ತಾಯಗೊಳಿಸುವ ಮೂಲಕ ಅವರು ಸಮಯದ ಗಾಂಭೀರ್ಯವನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸಿದರು. ‘ಆಶ್ರಮವು ಗುರುವಿನದ್ದಾಗಿದೆ’ ಎಂಬ ಭಾವದಿಂದಿದ್ದು, ಆಶ್ರಮದಲ್ಲಿ ಕಟ್ಟಡ ನಿರ್ಮಾಣ ಕಾರ್ಯದ ಸಮಯದಲ್ಲಿ ಕಾಣುವ ಕಸವನ್ನು ಸ್ವತಃ ಎತ್ತುವುದು, ಅಸ್ತವ್ಯಸ್ತವಾಗಿರುವ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವುದು – ಈ ಕೃತಿಗಳ ಮೂಲಕ ಅವರು ‘ಕಂಡದ್ದು ಕರ್ತವ್ಯ’ ಎಂಬ ಭಾಗವನ್ನು ಸಾಧಕರಲ್ಲಿ ಬಿತ್ತಿದರು. ಅವರು ಯಾರನ್ನೂ ತಮಗೆ ನಮಸ್ಕರಿಸಲು ಬಿಡುವುದಿಲ್ಲ. ಆಶ್ರಮಕ್ಕೆ ಬಂದ ಸಂತರು ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವರಿದ್ದರೂ, ಅವರು ಅವರ ಚರಣಗಳಿಗೆ ಸ್ಪರ್ಶಿಸಿ ನಮಸ್ಕರಿಸುತ್ತಾರೆ. ಅವರು ಎಲ್ಲಿಯೂ ತಮ್ಮ ಪ್ರತ್ಯೇಕತೆಯನ್ನು ಪ್ರದರ್ಶಿಸುವುದಿಲ್ಲ. ಹೀಗೆ ಅವರ ಪ್ರತಿಯೊಂದು ಕೃತಿಯೂ ಸಾಧಕರಿಗೆ ಆದರ್ಶಪ್ರಾಯವಾಗಿದೆ. ಸಣ್ಣ ವಿಷಯವನ್ನೂ ಆಧ್ಯಾತ್ಮಿಕ ಸ್ತರದಲ್ಲಿ ನೋಡುವುದು ಮತ್ತು ಅದನ್ನು ಪ್ರತ್ಯಕ್ಷ ಬದುಕುವ ಕಲೆ ಅವರಲ್ಲಿದೆ. ಸನಾತನದ ಸಾವಿರಾರು ಸಾಧಕರು ಇದನ್ನು ಅನುಭವಿಸಿದ್ದಾರೆ.’ ಅಧ್ಯಾತ್ಮ ಇದು ಕೃತಿಯ ಶಾಸ್ತ್ರ ಹೇಗೆ ಆಗಿದೆ ?’ ಇದರ ಆದರ್ಶ ಉದಾಹರಣೆ ಎಂದರೆ ಪರಾತ್ಪರ ಗುರು ಡಾಕ್ಟರ್ ಆಗಿದ್ದಾರೆ .

೨. ಯಾವುದೇ ವಿಷಯದ ಬಗ್ಗೆ ಬರೆಯುವಾಗ ಅದರ ಬಗ್ಗೆ ಸೂಕ್ಷ್ಮಾತಿಸೂಕ್ಷ್ಮ ನೋಟ್ಸ್‌ಗಳನ್ನು ಕಾಲಕಾಲಕ್ಕೆ ಮಾಡಿಕೊಳ್ಳುವುದು

ಪರಾತ್ಪರ ಗುರು ಡಾಕ್ಟರರು ‘ಕೆಟ್ಟ ಶಕ್ತಿಗಳು ಅವರ ಮೇಲೆ ಸೂಕ್ಷ್ಮದಿಂದ ಮಾಡಿದ ಆಕ್ರಮಣಗಳು ಮತ್ತು ಸೂಕ್ಷ್ಮ ಜಗತ್ತು’ ಈ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಸೂಕ್ಷ್ಮ ದಾಖಲೆಗಳನ್ನು ಇಟ್ಟಿದ್ದಾರೆ. ಯಾವುದೇ ವಿಷಯದ ಬರವಣಿಗೆಯಿರಲಿ, ಅವರು ಅಂತಹ ದಾಖಲೆಗಳನ್ನು ಇಟ್ಟುಕೊಂಡು ಅದನ್ನು ಅಭ್ಯಾಸ ಮಾಡಿದ್ದಾರೆ. ಇತರ ವಿಷಯಗಳ ಸಂದರ್ಭದಲ್ಲಿಯೂ ಅವರು ಅನೇಕ ವರ್ಷಗಳಿಂದ ಇಂತಹ ಬರವಣಿಗೆಯನ್ನು ಮಾಡುತ್ತಾ ಬಂದಿದ್ದಾರೆ. ಇದು ಸಾಮಾನ್ಯ ವ್ಯಕ್ತಿಯ ಸಾಮರ್ಥ್ಯಕ್ಕೆ ಮೀರಿದ್ದು. ಸಾಮಾನ್ಯ ವ್ಯಕ್ತಿಗೆ ಇಂತಹ ದಾಖಲೆಗಳನ್ನು ಮಾಡಲು ಹೊಳೆಯುವುದು ಮತ್ತು ಆಯಾ ಸಮಯದಲ್ಲಿ ಅದನ್ನು ಬರೆದಿಡುವುದು ಅಸಾಧ್ಯವಾಗಿದೆ. ಪರಾತ್ಪರ ಗುರು ಡಾಕ್ಟರರಲ್ಲಿರುವ ಈ ಗುಣವು ಅಸಾಮಾನ್ಯವಾದುದಾಗಿದೆ.

೩. ಕೆಟ್ಟ ಶಕ್ತಿಗಳ ಸೂಕ್ಷ್ಮ ಆಕ್ರಮಣಗಳಿಂದಾಗಿ ೨೫ ವರ್ಷಗಳ ಕಾಲ ತೀವ್ರ ಶಾರೀರಿಕ ತೊಂದರೆ ಅನುಭವಿಸಿದರೂ ಅದನ್ನು ಸಾಕ್ಷಿಭಾವದಿಂದ ನೋಡುವುದು

೨೦೦೦ ರಿಂದ ೨೦೨೫ ರ ಅವಧಿಯಲ್ಲಿ ಪರಾತ್ಪರ ಗುರು ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಅನೇಕ ಆಕ್ರಮಣಗಳನ್ನು ಮಾಡಿದವು. ಇದರಿಂದಾಗಿ ಅವರು ತೀವ್ರ ದೈಹಿಕ ನೋವುಗಳನ್ನು ಅನುಭವಿಸಬೇಕಾಯಿತು. ಮೈಮೇಲೆ ಕೆಂಪು ಕಲೆಗಳು ಅಥವಾ ಪರಚಿದ ಗುರುತುಗಳು ಬರುವುದು, ವಾಕರಿಕೆ, ಹಸಿವು ಕಡಿಮೆಯಾಗುವುದು, ಊಟ ಸೇರದಿರುವುದು, ವಿವಿಧ ಅಂಗಗಳಲ್ಲಿ ಊತ ಮತ್ತು ನೋವು, ಕಣ್ಣಿನ ಕೆಳಗೆ ಕಪ್ಪಾಗುವುದು, ತಲೆಸುತ್ತು ಬರುವುದು, ಒಂದು ಹೆಜ್ಜೆ ಮುಂದಿಡಲು ಸಾಧ್ಯವಾಗದಷ್ಟು ಪ್ರಾಣಶಕ್ತಿ ಕಡಿಮೆಯಾಗುವುದು, ಮೈ ಕೈ ಸೋಲುವುದು ಮತ್ತು ಯಾವುದೇ ಸ್ಥೂಲ ಕಾರಣವಿಲ್ಲದೆ ರಕ್ತದಲ್ಲಿ ಸೀಸದ (ಟeಚಿಜ) ಪ್ರಮಾಣ ಹೆಚ್ಚಾಗುವುದು – ಇಂತಹ ಅನೇಕ ತೊಂದರೆಗಳನ್ನು ಅವರು ಅನುಭವಿಸಿದ್ದಾರೆ ಮತ್ತು ಈಗಲೂ ಅನುಭವಿಸುತ್ತಿದ್ದಾರೆ. ಇಷ್ಟೊಂದು ತೀವ್ರ ದೈಹಿಕ ತೊಂದರೆಗಳಿದ್ದರೂ ಅವರು ಅದನ್ನು ಸಾಕ್ಷಿಭಾವದಿಂದ ನೋಡುತ್ತಾರೆ. ಇಂತಹ ಅದ್ಭುತವಾದ ಸಾಕ್ಷಿಭಾವವು ಅವರಲ್ಲಿರುವ ದೈವತ್ವದ ಪರಿಚಯವನ್ನು ಮಾಡಿಕೊಡುತ್ತದೆ.

– ಸೌ. ಶ್ರದ್ಧಾ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೧೨.೨೦೨೫)