ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಎಲ್ಲಾ 23 ಮಂದಿ ಖುಲಾಸೆ ! Arvind Kejriwal Acquitted Excise Policy scam

  • ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣ: ದೆಹಲಿ ನ್ಯಾಯಾಲಯದ ತೀರ್ಪು

  • ಸಿಬಿಐಗೆ ತರಾಟೆ ತೆಗೆದುಕೊಂಡ ನ್ಯಾಯಾಲಯ, ತನಿಖೆಗೆ ಆದೇಶ!

ನವದೆಹಲಿ – ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಸೇರಿದಂತೆ ಎಲ್ಲಾ 23 ಆರೋಪಿಗಳನ್ನು ದೆಹಲಿ ನ್ಯಾಯಾಲಯವು ನಿರ್ದೋಷಿಗಳೆಂದು ಘೋಷಿಸಿ ಬಿಡುಗಡೆ ಮಾಡಿದೆ. “ಅಬಕಾರಿ ನೀತಿಯಲ್ಲಿ ಯಾವುದೇ ವ್ಯಾಪಕ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶವಿರಲಿಲ್ಲ” ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

1. ಈ ಪ್ರಕರಣವು ನ್ಯಾಯಾಂಗ ತಪಾಸಣೆಯಲ್ಲಿ ನಿಲ್ಲುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಿಬಿಐ ಕೇವಲ ಊಹೆಗಳ ಆಧಾರದ ಮೇಲೆ ಪಿತೂರಿಯನ್ನು ಬಿಂಬಿಸಲು ಪ್ರಯತ್ನಿಸಿದೆ. ಮೇಲ್ನೋಟಕ್ಕೆ 23 ಆರೋಪಿಗಳ ಪೈಕಿ ಯಾರೊಬ್ಬರ ಮೇಲಿನ ಆರೋಪವೂ ಸಾಬೀತಾಗಿಲ್ಲ.

2. ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, “ಇಂತಹ ನಡವಳಿಕೆಗೆ ಅನುಮತಿ ನೀಡಿದರೆ ಅದು ಸಾಂವಿಧಾನಿಕ ತತ್ವಗಳ ಗಂಭೀರ ಉಲ್ಲಂಘನೆಯಾಗುತ್ತದೆ. ಒಬ್ಬ ಆರೋಪಿಯನ್ನು ಕ್ಷಮಿಸಿ, ನಂತರ ಅವನನ್ನು ಸರಕಾರಿ ಸಾಕ್ಷಿಯನ್ನಾಗಿ ಮಾಡಿ, ಅವನ ಹೇಳಿಕೆಗಳನ್ನು ತನಿಖೆಯ ನ್ಯೂನತೆಗಳನ್ನು ಮುಚ್ಚಿ ಹಾಕಲು ಅಥವಾ ಹೆಚ್ಚಿನ ಜನರನ್ನು ಆರೋಪಿಗಳನ್ನಾಗಿ ಮಾಡಲು ಬಳಸುವುದು ತಪ್ಪು” ಎಂದು ಹೇಳಿದೆ. ಇದರ ಜೊತೆಗೆ, ನ್ಯಾಯಾಲಯವು ಸಿಬಿಐ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದೆ.

“ಸತ್ಯಕ್ಕೆ ಜಯ ಸಿಕ್ಕಿದೆ!” – ಅರವಿಂದ ಕೇಜ್ರಿವಾಲ್

“ಸತ್ಯಕ್ಕೆ ಜಯ ಸಿಕ್ಕಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದೊಡ್ಡ ರಾಜಕೀಯ ಪಿತೂರಿ ನಡೆಸಿ ಆಮ್ ಆದ್ಮಿ ಪಕ್ಷದ ಐವರು ಪ್ರಮುಖ ನಾಯಕರನ್ನು ಜೈಲಿಗೆ ಹಾಕಿದ್ದರು. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸಲಾಯಿತು. ಸಿಸೋಡಿಯಾ ಅವರನ್ನು ಎರಡು ವರ್ಷಗಳ ಕಾಲ ಜೈಲಿನಲ್ಲಿ ಇಡಲಾಯಿತು. ‘ಕೇಜ್ರಿವಾಲ್ ಭ್ರಷ್ಟ’ ಎಂದು ಆರೋಪಿಸಲಾಯಿತು; ಆದರೆ ನಾನು ಭ್ರಷ್ಟನಲ್ಲ” ಎಂದು ತೀರ್ಪಿನ ನಂತರ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. “ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಯಿತು. ಅಧಿಕಾರಕ್ಕಾಗಿ ದೇಶ ಮತ್ತು ಸಂವಿಧಾನದೊಂದಿಗೆ ಹೀಗೆ ಆಟವಾಡಬೇಡಿ. ಸುಳ್ಳು ಪ್ರಕರಣಗಳನ್ನು ದಾಖಲಿಸುವ ಬದಲು ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಅಧಿಕಾರಕ್ಕೆ ಬನ್ನಿ” ಎಂದು ಕೇಜ್ರಿವಾಲ ಇದೇ ಸಂದರ್ಭದಲ್ಲಿ ಹೇಳಿದರು.

ಏನಿದು ದೆಹಲಿ ಅಬಕಾರಿ ನೀತಿ ಹಗರಣ?

ನವೆಂಬರ್ 2021 ರಲ್ಲಿ ದೆಹಲಿಯ ಅಂದಿನ ಆಮ್ ಆದ್ಮಿ ಪಕ್ಷದ ಸರಕಾರವು ಹೊಸ ಮದ್ಯ ನೀತಿಯನ್ನು ಜಾರಿಗೆ ತಂದಿತು. ಜೂನ್ 2022 ರಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ಹೊಸ ಅಬಕಾರಿ ನೀತಿಯಲ್ಲಿ 100 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ದೂರು ನೀಡಿತು. ಜುಲೈ 2022 ರಲ್ಲಿ ದೆಹಲಿಯ ಮುಖ್ಯ ಕಾರ್ಯದರ್ಶಿಗಳು ಸದರಿ ನೀತಿಯಲ್ಲಿನ ಅಕ್ರಮಗಳನ್ನು ಎತ್ತಿ ತೋರಿಸಿದರು. ದೆಹಲಿಯ ಉಪರಾಜ್ಯಪಾಲರು ಸಿಬಿಐ ತನಿಖೆಗೆ ವಿನಂತಿಸಿದರು. ಜಾರಿ ನಿರ್ದೇಶನಾಲಯವು (ED) ಕೂಡ ಪಿ.ಎಂ.ಎಲ್.ಎ. (ಹಣ ವರ್ಗಾವಣೆ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತು. ತದನಂತರ ದೆಹಲಿಯ ಅಂದಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಸೇರಿದಂತೆ ಹಲವರನ್ನು ಬಂಧಿಸಲಾಯಿತು.