ಸಿಂಹಸ್ಥ ಕುಂಭಮೇಳದ ಮೂಲಕ ವಿಶ್ವದಲ್ಲಿ ಮಹಾರಾಷ್ಟ್ರದ ಛಾಪನ್ನು ಮೂಡಿಸೋಣ! – ಮುಖ್ಯಮಂತ್ರಿ ಫಡ್ನವೀಸ

ಮುಂಬಯಿ, ಫೆಬ್ರವರಿ ೨೬ (ಸುದ್ದಿ) – ಕುಂಭಮೇಳವು ನಮ್ಮ ಸಂಸ್ಕೃತಿ ಮತ್ತು ಮಹಾರಾಷ್ಟ್ರ ಧರ್ಮವಾಗಿದೆ. ಅದನ್ನು ನಾವು ಪೋಷಿಸಬೇಕು. ಒಂದು ಮಹಾಕುಂಭಮೇಳದಿಂದಾಗಿ ಉತ್ತರಪ್ರದೇಶದ ಛಾಪು ಇಡೀ ಜಗತ್ತಿನಾದ್ಯಂತ ಪಸರಿಸಿತು. ಅದೇ ರೀತಿ ನಾಸಿಕ ಸಿಂಹಸ್ಥ ಕುಂಭಮೇಳದ ಮೂಲಕ ಮಹಾರಾಷ್ಟ್ರದ ಛಾಪನ್ನು ಜಗತ್ತಿನಲ್ಲಿ ಮೂಡಿಸೋಣ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಿಂಹಸ್ಥ ಕುಂಭಮೇಳದ ಅಂಗವಾಗಿ ನಾಸಿಕನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಹಾವಿಕಾಸ ಅಘಾಡಿಯಿಂದ(ಮೈತ್ರಿಕೂಟ) ಕೇಳಿ ಬರುತ್ತಿರುವ ಟೀಕೆಗಳಿಗೆ ರಾಜ್ಯಪಾಲರ ಭಾಷಣದ ಮೇಲಿನ ಅಭಿನಂದನಾ ನಿರ್ಣಯದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಿದರು.

ಮುಖ್ಯಮಂತ್ರಿಗಳು, ‘ಕುಂಭಮೇಳವು ಪ್ರತಿ ಹನ್ನೆರಡೂವರೆ ವರ್ಷಗಳಿಗೊಮ್ಮೆ ಬರುತ್ತದೆ. ಇದು ಸಾಂಸ್ಕೃತಿಕ ಜಾಗತಿಕ ಪರಂಪರೆಯಾಗಿದೆ. ಜಗತ್ತಿನಲ್ಲಿ ಬೇರೆಲ್ಲೂ ಇಂತಹ ಸಮಾವೇಶ ನಡೆಯುವುದಿಲ್ಲ. ಕುಂಭಮೇಳದಲ್ಲಿ ಯಾರೂ ಯಾರ ಜಾತಿಯನ್ನು ಕೇಳುವುದಿಲ್ಲ. ಎಲ್ಲಾ ಪಂಥದ ಮತ್ತು ಜಾತಿಯ ಜನರು ಕುಂಭಮೇಳಕ್ಕೆ ಬರುತ್ತಾರೆ. ಅನ್ಯ ಧರ್ಮೀಯರೂ ಸಹ ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ, ಪ್ರಯಾಗರಾಜನಲ್ಲಿ ಉತ್ತರಪ್ರದೇಶವು ಮಹಾಕುಂಭಮೇಳಕ್ಕಾಗಿ ಮಾಡಿದ ಹೂಡಿಕೆಗಿಂತ ಎಷ್ಟೋ ಪಟ್ಟು ಹೆಚ್ಚಿನ ಲಾಭವನ್ನು ಅವರು ಪಡೆದಿದ್ದಾರೆ. ನಾಸಿಕ ಕುಂಭಮೇಳದ ಅಂಗವಾಗಿ ಗೋದಾವರಿ ನದಿಯನ್ನು ಸ್ವಚ್ಛಗೊಳಿಸುವುದು, ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು, ರಸ್ತೆಗಳ ಅಗಲೀಕರಣ, ವಿಮಾನ ನಿಲ್ದಾಣ ಸಿದ್ಧಪಡಿಸುವುದು ಇವು ಕೇವಲ ತಾತ್ಕಾಲಿಕ ಸೌಲಭ್ಯಗಳಲ್ಲ, ಬದಲಿಗೆ ಭವಿಷ್ಯದಲ್ಲೂ ಉಪಯೋಗಕ್ಕೆ ಬರುವಂತಹ ಸೌಲಭ್ಯಗಳಾಗಿವೆ. ಇದರಿಂದ ಧಾರ್ಮಿಕ ಪ್ರವಾಸೋದ್ಯಮವೂ ಬೆಳೆಯಲಿದೆ’ ಎಂದು ಹೇಳಿದರು.