ಇತರ ಬಡ ಮುಸ್ಲಿಮರಿಗಾಗಿ ಈ ಬೇಡಿಕೆಯನ್ನು ಏಕೆ ಮಾಡಲಾಗಿಲ್ಲ? – ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ – Pasmandas Muslim Reservation

ಪಸ್ಮಾಂದಾ’ ಮುಸ್ಲಿಮರನ್ನು ಓಬಿಸಿ ಪಟ್ಟಿಗೆ ಸೇರಿಸಲು ಬೇಡಿಕೆ

ನವದೆಹಲಿ – ‘ಪಸ್ಮಾಂದಾ’ ಮುಸ್ಲಿಮರನ್ನು ಇತರ ಹಿಂದುಳಿದ ವರ್ಗಗಳ (ಓಬಿಸಿ) ವರ್ಗಕ್ಕೆ ಸೇರಿಸುವ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪಸ್ಮಾಂದಾ ಮುಸ್ಲಿಮರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಆದರೆ, ‘ಇತರ ಬಡ ಮುಸ್ಲಿಮರಿಗಾಗಿ ಇಂತಹ ಬೇಡಿಕೆಯನ್ನು ಏಕೆ ಮಾಡಲಾಗಿಲ್ಲ?’ ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಆಶ್ಚರ್ಯ ವ್ಯಕ್ತಪಡಿಸಿದೆ.

1. ಮಹಮ್ಮದ್ ವಸೀಂ ಸೈಫಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠವು, “ಇತರ ಬಡ ಮುಸ್ಲಿಮರ ಹಿತಾಸಕ್ತಿಯನ್ನು ಬಲಿಗೊಟ್ಟು ನೀವು ಕೇವಲ ನಿಮ್ಮ ಪಸ್ಮಾಂದಾ ಗುಂಪನ್ನು ಮುಂದೆ ತರಲು ಬಯಸುತ್ತೀರಾ? ಹಿಂದುಳಿದ ವರ್ಗಗಳಲ್ಲಿ ವಾಸ್ತವವಾಗಿ ಎಷ್ಟು ಮುಸ್ಲಿಮರಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶಗಳಿವೆಯೇ?” ಎಂದು ಕಠಿಣ ಶಬ್ದಗಳಲ್ಲಿ ಪ್ರಶ್ನಿಸಿದೆ.

2. “ಪಸ್ಮಾಂದಾ ಮುಸ್ಲಿಂ ಸಮುದಾಯವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ” ಎಂದು ಅರ್ಜಿದಾರರ ಪರ ವಕೀಲರು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಓಬಿಸಿ ಎಂಬುದು ಕೇವಲ ಸಾಮಾಜಿಕ ಸ್ಥಾನಮಾನದ ವಿಷಯವಲ್ಲ, ಆರ್ಥಿಕ ಸ್ಥಿತಿಯೂ ಅದರ ಒಂದು ಪ್ರಮುಖ ಅಂಶವಾಗಿದೆ ಹೊಂದಿರುತ್ತದೆ ಎಂದು ನಮೂದಿಸಿದರು.

3. ಪಸ್ಮಾಂದಾ ಮುಸ್ಲಿಮರು ಮೀಸಲಾತಿ ಪಡೆಯಲು ಅರ್ಹರು ಎಂದು ಸಾಬೀತುಪಡಿಸಲು ತಮ್ಮ ವಾದಕ್ಕೆ ಪೂರಕವಾದ ಸಾಕಷ್ಟು ಅಂಕಿಅಂಶಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ 4 ವಾರಗಳ ನಂತರ ನಡೆಯಲಿದೆ.

ಯಾರು ಈ ಪಸ್ಮಾಂದಾ ಮುಸ್ಲಿಮರು?

‘ಪಸ್ಮಾಂದಾ’ ಎಂಬುದು ಪರ್ಷಿಯನ್ ಪದವಾಗಿದ್ದು, ಇದರ ಅರ್ಥ ‘ಹಿಂದೆ ಉಳಿದವರು’ ಎಂದಾಗುತ್ತದೆ. ಈ ಪದವನ್ನು ಸಾಮಾನ್ಯವಾಗಿ ಮುಸ್ಲಿಂ ಸಮುದಾಯದ ವಂಚಿತ ವರ್ಗಗಳಿಗಾಗಿ ಬಳಸಲಾಗುತ್ತದೆ. ಈ ಹಿಂದೆ ಪಸ್ಮಾಂದಾಗಳನ್ನು ದಲಿತರೆಂದು ಪರಿಗಣಿಸಲಾಗುತ್ತಿತ್ತು; ಆದರೆ ಎಲ್ಲಾ ಪಸ್ಮಾಂದಾಗಳು ದಲಿತರಲ್ಲ. ಅವರು ಓಬಿಸಿ ಮತ್ತು ಪರಿಶಿಷ್ಟ ಜಾತಿಗಳಲ್ಲೂ ಇರಬಹುದು. 2004-05ರ ಸಚ್ಚರ್ ಸಮಿತಿ ವರದಿಯ ಪ್ರಕಾರ, ಓಬಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿರುವ ಮುಸ್ಲಿಮರ ಸಂಖ್ಯೆ ಸುಮಾರು ಶೇಕಡಾ 40 ರಷ್ಟಿದೆ ಎಂದು ಉಲ್ಲೇಖಿಸಲಾಗಿತ್ತು. ಆದಾಗ್ಯೂ, ಭಾರತದ ಒಟ್ಟು ಮುಸ್ಲಿಂ ಜನಸಂಖ್ಯೆಯಲ್ಲಿ ಶೇಕಡಾ 80 ರಿಂದ 85 ರಷ್ಟು ಜನರು ಪಸ್ಮಾಂದಾಗಳಿದ್ದಾರೆ ಎಂದು ಈ ಗುಂಪು ವಾದಿಸುತ್ತದೆ. ಆದರೆ, ಈ ಅಂಕಿಅಂಶಗಳು ಈಗ ಹಳೆಯದಾಗಿವೆ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಜಾತಿಗಳು ಕೇವಲ ಹಿಂದೂಗಳಲ್ಲಿ ಮಾತ್ರ ಇವೆ, ಇತರ ಧರ್ಮೀಯರಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿರುವಾಗ, ಈ ರೀತಿ ಮುಸ್ಲಿಮರಲ್ಲಿ ಜಾತಿಗಳಿವೆ ಎಂದು ತೋರಿಸಿ ಮೀಸಲಾತಿಯ ಲಾಭ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂಬುದನ್ನು ಗಮನಿಸಿ!