ಬಾಂಗ್ಲಾದೇಶದ ಕಾರಾಗೃಹದಲ್ಲಿ ಅವಾಮಿ ಲೀಗ್‌ನ ಹಿರಿಯ ಹಿಂದೂ ನಾಯಕನ ನಿಧನ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಹಿರಿಯ ನಾಯಕ ರಮೇಶ್ ಚಂದ್ರ ಸೇನ್ ಅವರು ದಿನಾಜ್‌ಪುರ ಜಿಲ್ಲಾ ಕಾರಾಗೃಹದಲ್ಲಿ ನಿಧನರಾಗಿದ್ದಾರೆ. ೮೩ ವರ್ಷದ ರಮೇಶ್ ಚಂದ್ರ ಸೇನ್ ಅವರು ಶೇಖ್ ಹಸೀನಾ ಅವರ ಆಪ್ತರೆಂದು ಪರಿಗಣಿಸಲ್ಪಟ್ಟಿದ್ದರು ಮತ್ತು ಹಸೀನಾ ಅವರ ಅಧಿಕಾರ ಅಂತ್ಯಗೊಂಡ ನಂತರ ಅವರು ಜೈಲಿನಲ್ಲಿದ್ದರು. ಕಾರಾಗೃಹದ ಆಡಳಿತದ ಪ್ರಕಾರ, ಫೆಬ್ರವರಿ ೭ ರ ಬೆಳಿಗ್ಗೆ ಅವರ ಆರೋಗ್ಯವು ಇದ್ದಕ್ಕಿದ್ದಂತೆ ಕ್ಷೀಣಿಸಿತು. ತಕ್ಷಣವೇ ಅವರನ್ನು ದಿನಾಜ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಬೆಳಿಗ್ಗೆ ಸುಮಾರು ೯.೩೦ ಕ್ಕೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ದಿನಾಜ್‌ಪುರ ಜೈಲು ಅಧೀಕ್ಷಕ ಫರ್ಹಾದ್ ಸರ್ಕಾರ್ ತಿಳಿಸಿದ್ದಾರೆ.

​ಕಾರಾಗೃಹದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಸಾವು! – ಅವಾಮಿ ಲೀಗ್ ನ ಆರೋಪ

ಅವಾಮಿ ಲೀಗ್‌ನ ಕೇಂದ್ರ ಸಂಘಟನಾ ಕಾರ್ಯದರ್ಶಿ ಶಫಿಯುಲ್ ಆಲಂ ಚೌಧರಿ ನಾದೆಲ್ ಅವರು ಆರೋಪ ಮಾಡಿ, ರಮೇಶ್ ಚಂದ್ರ ಸೇನ್ ಅವರು ೫ ಬಾರಿ ಸಂಸತ್ ಸದಸ್ಯರಾಗಿದ್ದರು ಮತ್ತು ಮಾಜಿ ಸಚಿವರೂ ಆಗಿದ್ದರು. ಅವರು ಅನಾರೋಗ್ಯದಿಂದ ಮತ್ತು ವಯೋವೃದ್ಧರಾಗಿದ್ದರೂ ಅವರನ್ನು ಸರಪಳಿಗಳಿಂದ ಕಟ್ಟಿ ಬಂಧಿಸಲಾಗಿತ್ತು. ಕಾರಾಗೃಹದಲ್ಲಿ ಅವರಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ, ಅದಕ್ಕಾಗಿಯೇ ಅವರು ಸಾವನ್ನಪ್ಪಿದ್ದಾರೆ, ಎಂದು ಆರೋಪಿಸಿದ್ದಾರೆ. ಹಾಗೂ ಈ ಸಾವಿನ ಬಗ್ಗೆ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನಸ್ ಅವರಿಂದ ಉತ್ತರವನ್ನು ಕೇಳಿದ್ದಾರೆ.

ಬಾಂಗ್ಲಾದೇಶ ಛಾತ್ರ ಲೀಗ್ ಅಧ್ಯಕ್ಷ ಸದ್ದಾಂ ಹುಸೇನ್ ಸಹ ಗಂಭೀರ ಆರೋಪ ಮಾಡಿದ್ದಾರೆ. ಯಾವುದೇ ಬಲವಾದ ಆರೋಪಗಳಿಲ್ಲದಿದ್ದರೂ ಅವರನ್ನು ಕಾರಾಗೃಹದಲ್ಲಿ ಇಡಲಾಗಿತ್ತು. ಜಾಮೀನು ನಿರಾಕರಿಸಲಾಗಿತ್ತು. ಕನಿಷ್ಠ ವೈದ್ಯಕೀಯ ಸೌಲಭ್ಯ ಅಥವಾ ಮೂಲಭೂತ ಮಾನವ ಹಕ್ಕುಗಳನ್ನು ಸಹ ನೀಡಲಿಲ್ಲ. ಒಂದೂವರೆ ವರ್ಷಗಳ ಕಾಲ ವಿಚಾರಣೆ ನಡೆಸದೆ ಜೈಲಿನಲ್ಲಿ ಇರಿಸಿದ್ದರಿಂದ ಅವರ ಆರೋಗ್ಯವು ದಿನೇ ದಿನೇ ಕ್ಷೀಣಿಸುತ್ತಾ ಹೋಯಿತು, ಎಂದು ಅವರು ಹೇಳಿದ್ದಾರೆ.

​೨೦೨೫ ನೇ ವರ್ಷದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ೧೦೭ ಜನರ ಸಾವು

ಮಾನವ ಹಕ್ಕುಗಳ ಸಂಘಟನೆ ‘ಎನ್. ಓ. ಸಾಲಿಶ್ ಕೇಂದ್ರ’ದ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದಲ್ಲಿ ೨೦೨೫ ರಲ್ಲಿ ಕಸ್ಟಡಿಯಲ್ಲಿ ೧೦೭ ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಹೆಚ್ಚಿನವರು ಅವಾಮಿ ಲೀಗ್‌ನ ನಾಯಕರು ಮತ್ತು ಕಾರ್ಯಕರ್ತರಾಗಿದ್ದರು. ಹೆಚ್ಚಿನ ಪ್ರಕರಣಗಳಲ್ಲಿ ಸಾವಿಗೆ ಕಾರಣ ಹೃದಯಾಘಾತ ಅಥವಾ ಹಠಾತ್ ಅನಾರೋಗ್ಯ ಎಂದು ನಮೂದಿಸಲಾಗಿದೆ; ಆದರೆ ಯಾವುದೇ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆದಿಲ್ಲ ಎಂದು ಸಹ ದಾವೆಯೂ ಮಾಡಲಾಗಿದೆ.