ಸರಿಯಾದ ಸಮಯ ಬಂದಾಗ ಪಾಕಿಸ್ತಾನವು ಅಫ್ಘಾನಿಸ್ತಾನ ತಾಲಿಬಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ! Pakistan Afghanistan Fight

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಂದ ಬೆದರಿಕೆ

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್

ಇಸ್ಲಾಮಾಬಾದ (ಪಾಕಿಸ್ತಾನ) – ಸರಿಯಾದ ಸಮಯ ಬಂದಾಗ ಪಾಕಿಸ್ತಾನವು ಅಫ್ಘಾನಿಸ್ತಾನ ತಾಲಿಬಾನ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ. ಈ ಕ್ರಮಗಳು ಸೈನಿಕ ಕಾರ್ಯಾಚರಣೆಯ ರೂಪದಲ್ಲಿಯೂ ಇರಬಹುದು ಅಥವಾ ರಾಜತಾಂತ್ರಿಕ ಮಟ್ಟದಲ್ಲಿ ಸಂಬಂಧಗಳನ್ನು ಕಡಿದುಕೊಳ್ಳುವ ನಿರ್ಧಾರವನ್ನೂ ತೆಗೆದುಕೊಳ್ಳಬಹುದು. ಪಾಕಿಸ್ತಾನದ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕ ಸಂಘಟನೆಗಳಿಗೆ ಸಿಗುವ ಬೆಂಬಲವನ್ನು ಸಹಿಸಲಾಗುವುದಿಲ್ಲ. ಪಾಕಿಸ್ತಾನವು ಇನ್ನು ಮುಂದೆ ಹೆಚ್ಚಿನ ಕಾಲ ಸಂಯಮದಿಂದ ಇರುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಬೆದರಿಕೆ ಹಾಕಿದ್ದಾರೆ. ಖ್ವಾಜಾ ಆಸಿಫ್ ಅವರು ತಾಲಿಬಾನ್ ಸರಕಾರವು ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಭಯೋತ್ಪಾದಕರಿಗೆ ಆಶ್ರಯ ಮತ್ತು ಸಹಾಯ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನವು ಪಾಕಿಸ್ತಾನದೊಂದಿಗೆ ಶತ್ರು ರಾಷ್ಟ್ರದಂತೆ ವರ್ತಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಸಧ್ಯ ಅಫ್ಘಾನಿಸ್ತಾನದ ಮೇಲೆ ಕ್ರಮ ಕೈಗೊಳ್ಳುವುದು ಜಾಣತನವಲ್ಲ ! – ಖ್ವಾಜಾ ಆಸಿಫ್

ರಕ್ಷಣಾ ಸಚಿವ ಆಸಿಫ್ ಅವರು ಮಾತನಾಡುತ್ತಾ, ಸಂಪೂರ್ಣ ಪ್ರದೇಶದ ಸ್ಥಿತಿಯು ಸದ್ಯ ಅತ್ಯಂತ ಸೂಕ್ಷ್ಮವಾಗಿದೆ. ಇರಾನಗೆ ಸಂಬಂಧಿಸಿದ ಅಪಾಯಗಳು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು, ವಿಶೇಷವಾಗಿ ಪ್ಯಾಲೆಸ್ಟೈನ್ ಮತ್ತು ಯೆಮೆನನಲ್ಲಿನ ಪರಿಸ್ಥಿತಿ, ಹಾಗೂ ಆಫ್ರಿಕಾದ ಅನೇಕ ಭಾಗಗಳಲ್ಲಿನ ಅಸ್ಥಿರತೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಪ್ರಸ್ತುತ ಅಫ್ಘಾನಿಸ್ತಾನದ ಮೇಲೆ ನೇರ ಸೈನಿಕ ಕಾರ್ಯಾಚರಣೆ ನಡೆಸುವುದು ಜಾಣತನವಲ್ಲ. ಪಾಕಿಸ್ತಾನವು ಪ್ರತಿ ಹೆಜ್ಜೆಯನ್ನೂ ಅತ್ಯಂತ ಯೋಚಿಸಿ ಇಡಬೇಕಾಗಿದೆ, ಇಲ್ಲದಿದ್ದರೆ ಅದು ದೊಡ್ಡ ಪ್ರಾದೇಶಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಟರ್ಕಿಯೊಂದಿಗೆ ಜೊತೆ ಹೆಚ್ಚುತ್ತಿರುವ ಸಹಕಾರ

ಪಾಕಿಸ್ತಾನ ಮತ್ತು ಟರ್ಕಿಯ ನಡುವಿನ ರಕ್ಷಣಾ ಮತ್ತು ವ್ಯೂಹಾತ್ಮಕ ಸಹಕಾರವು ವೇಗವಾಗಿ ಬೆಳೆಯುತ್ತಿದೆ ಎಂಬ ಸುಳಿವನ್ನು ಖ್ವಾಜಾ ಆಸಿಫ್ ನೀಡಿದ್ದಾರೆ. ಉಭಯ ದೇಶಗಳ ನಡುವೆ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಯಾವುದೇ ನಿರ್ದಿಷ್ಟ ಒಪ್ಪಂದದ ಬಗ್ಗೆ ಅವರು ಮಾಹಿತಿ ನೀಡಿಲ್ಲವಾದರೂ, ಮುಂಬರುವ ದಿನಗಳಲ್ಲಿ ಚಿತ್ರಣ ಸ್ಪಷ್ಟವಾಗಲಿದೆ ಎಂದು ಅವರು ಉಲ್ಲೇಖಿಸಿದ್ದಾರೆ.