ಪಂಡರಪುರದ ಪ್ರಖರ ಹಿಂದುತ್ವವಾದಿ ಮತ್ತು ವಾರಕರಿ ಸಂಪ್ರದಾಯದ ಅನುಯಾಯಿ ಹ.ಭ.ಪ. ಅನಿಲಕಾಕಾ ಬಡವೆ (85 ವರ್ಷ) ನಿಧನ

ಸೋಲಾಪುರ – ಪಂಡರಪುರದ ಪ್ರಖರ ಹಿಂದುತ್ವವಾದಿ ಚಿಂತಕ ಮತ್ತು ವಾರಕರಿ ಸಂಪ್ರದಾಯದ ಅನುಯಾಯಿ ಹ.ಭ.ಪ. ಅನಿಲಕಾಕಾ ಬಡವೆ (85 ವರ್ಷ) ಅವರು ಜನವರಿ 23 ರಂದು ಬೆಳಿಗ್ಗೆ ನಿಧನರಾದರು. ಅವರು ಶಿವಚರಿತ್ರೆ ಕಥೆಗಾರ ಸಂತ ಪ್ರಲ್ಹಾದ್ ಮಹಾರಾಜ್ ಬಡವೆ ಅವರ ವಂಶಸ್ಥರಾಗಿದ್ದರು. ಅನಿಲಕಾಕಾ ಬಡವೆ ಅವರು ಒಬ್ಬ ಮಗ, ಸೊಸೆ, ಮೂವರು ಪುತ್ರಿಯರು, ಮೂವರು ಅಳಿಯಂದಿರು ಹಾಗೂ 7 ಮೊಮ್ಮಕ್ಕಳು ಸೇರಿದಂತೆ ದೊಡ್ಡ ಕುಟುಂಬವನ್ನು ಅಗಲಿದ್ದಾರೆ. ಅವರು ಕೇವಲ ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದರು. ಅವರು ಮಹಾರಾಷ್ಟ್ರ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದರು. ಒಬ್ಬ ಸಿದ್ಧಹಸ್ತ ಬರಹಗಾರರಾಗಿ ಅವರು ಅನೇಕ ವಿಷಯಗಳ ಮೇಲೆ ಜಾಗೃತಿ ಮೂಡಿಸುವ ಲೇಖನಗಳನ್ನು ಬರೆದಿದ್ದರು.

ಹಿಂದುತ್ವದ ವೈಚಾರಿಕ ರಣರಂಗದ ನಿರ್ಭೀತ ಯೋಧನನ್ನು ಕಳೆದುಕೊಂಡೆವು ! – ಹಿಂದೂ ಜನಜಾಗೃತಿ ಸಮಿತಿ

ಸುನೀಲ ಘನವಟ

ಮುಂಬಯಿ – ಪಂಡರಪುರದ ಸಾವರ್ಕರ್ ವಿಚಾರಗಳ ಅಭ್ಯಾಸಕ, ಪ್ರಖರ ಹಿಂದುತ್ವವಾದಿ, ವಾರಕರಿ ಸಂಪ್ರದಾಯದ ಅನುಯಾಯಿ ಮತ್ತು ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನಿರಂತರ ನಿರತರಾಗಿದ್ದ ವಂದನೀಯ ಹ.ಭ.ಪ. ಅನಿಲಕಾಕಾ ಬಡವೆ ಅವರ ನಿಧನದಿಂದ ಹಿಂದುತ್ವದ ವೈಚಾರಿಕ ಹೋರಾಟದಲ್ಲಿ ಒಂದು ತೇಜಸ್ವಿ, ನಿರ್ಭೀತ ಮತ್ತು ಅಧ್ಯಯನಶೀಲ ನಾಯಕತ್ವವನ್ನು ಕಳೆದುಕೊಂಡಂತಾಗಿದೆ. ಹಿಂದೂ ಸಮಾಜದ ಅಸ್ತಿತ್ವ ರಕ್ಷಣೆಗಾಗಿ ವಿಚಾರ, ಕೃತಿ ಮತ್ತು ಸಂಘಟನೆ ಎಂಬ ಮೂರೂ ಮಟ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿಲಕಾಕಾ ಅವರು ಹಿಂದುತ್ವದ ಚಳವಳಿಯ ಪ್ರಮುಖ ಆಧಾರಸ್ತಂಭವಾಗಿದ್ದರು ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳ ಸಂಘಟಕ ಶ್ರೀ. ಸುನಿಲ್ ಘನವಟ್ ಅವರು ಶ್ರದ್ಧಾಂಜಲಿ ಸಲ್ಲಿಸುತ್ತಾ ಹೇಳಿದ್ದಾರೆ.

ಶ್ರೀ ಘನವಟ್ ಅವರು,

1. ಇಂದು ಹಿಂದೂ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ಮೇಲೆ ವ್ಯವಸ್ಥಿತ ದಾಳಿಗಳು ನಡೆಯುತ್ತಿರುವಾಗ, ಅದಕ್ಕೆ ತಕ್ಕ ವೈಚಾರಿಕ ಉತ್ತರ ನೀಡುವ ಕೆಲಸವನ್ನು ಅನಿಲಕಾಕಾ ಅವರು ಜೀವನಪೂರ್ತಿ ಮಾಡಿದರು. ಸ್ವಾತಂತ್ರ್ಯವೀರ ಸಾವರ್ಕರ್ ಅವರ ರಾಷ್ಟ್ರವಾದಿ ಮತ್ತು ತರ್ಕಬದ್ಧ ವಿಚಾರಗಳನ್ನು ಕೇವಲ ಗ್ರಂಥಗಳಿಗೆ ಸೀಮಿತಗೊಳಿಸದೆ ಸಾಮಾನ್ಯ ಹಿಂದೂಗಳಿಗೆ ತಲುಪಿಸುವ ಮಹತ್ವದ ಕೆಲಸ ಮಾಡಿದರು.

2. ಧಾರ್ಮಿಕ ಕೇಂದ್ರಗಳ ಮೇಲೆ ಸರಕಾರಿ ನಿಯಂತ್ರಣ ಹೇರುವ ಸಂಚು, ಮೂಢನಂಬಿಕೆ ವಿರೋಧಿ ಕಾಯ್ದೆಯ ಹೆಸರಿನಲ್ಲಿ ಹಿಂದೂ ಧರ್ಮವನ್ನೇ ಗುರಿ ಮಾಡುವ ಪ್ರವೃತ್ತಿ ಅಥವಾ ಪಂಡರಪುರ ಮಂದಿರ ಮುಕ್ತಿ ಅಭಿಯಾನದಂತಹ ವಿಷಯಗಳಲ್ಲಿ ಅನಿಲಕಾಕಾ ಅವರ ನಿಲುವು ಸ್ಪಷ್ಟ, ನಿರ್ಭೀತ ಮತ್ತು ವೈಚಾರಿಕವಾಗಿ ಸದೃಢವಾಗಿತ್ತು.

3. ಅವರು ನಡೆಸಿದ ಜನಜಾಗೃತಿ ಅಭಿಯಾನಗಳು ಕೇವಲ ಭಾವುಕ ಘೋಷಣೆಗಳ ಮೇಲೆ ನಿಂತಿರದೆ ಶಾಸ್ತ್ರ, ಇತಿಹಾಸ ಮತ್ತು ಸಂವಿಧಾನದ ನಿಬಂಧನೆಗಳ ಅಭ್ಯಯನದ ಮೇಲೆ ರೂಪಿತವಾಗಿದ್ದವು.

4. ವಾರಕರಿ ಸಂಪ್ರದಾಯದ ಅನುಯಾಯಿಯಾಗಿದ್ದರೂ ‘ಹಿಂದುತ್ವ, ಧರ್ಮ ಮತ್ತು ಆಧ್ಯಾತ್ಮ ಪರಸ್ಪರ ವಿರೋಧಿಯಲ್ಲ, ಬದಲಿಗೆ ಪರಸ್ಪರ ಪೂರಕ’ ಎಂಬುದನ್ನು ಅವರು ತಮ್ಮ ಆಚರಣೆಯ ಮೂಲಕ ತೋರಿಸಿಕೊಟ್ಟರು.

5. ಅನಿಲಕಾಕಾ ಅವರು ನೀಡಿದ ಮಾರ್ಗದರ್ಶನದಿಂದ ಸಾವಿರಾರು ಕಾರ್ಯಕರ್ತರು ತಯಾರಾದರು. ಇಂದು ಈ ಕಾರ್ಯಕರ್ತರು ಸಮಾಜ ಜಾಗೃತಿ, ಧರ್ಮ ರಕ್ಷಣೆ, ರಾಷ್ಟ್ರ ಹಿತ ಮತ್ತು ಹಿಂದೂ ಸಂಘಟನೆಯ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

6. ಇಂತಹ ಪ್ರಾತಃ ಸ್ಮರಣೀಯ, ವಂದನೀಯ ಮತ್ತು ವಿಚಾರವಂತ ವ್ಯಕ್ತಿತ್ವದ ನಿಧನವು ಇಡೀ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಆದರೆ ಅವರು ನೀಡಿದ ದಿಶೆ, ಅವರು ನಿರ್ಮಿಸಿದ ವೈಚಾರಿಕ ತಲೆಮಾರು ಮತ್ತು ಅವರ ಹೋರಾಟದ ಮನೋಭಾವವೇ ಅವರ ಕಾರ್ಯಕ್ಕೆ ಅಮರ ಸಾಕ್ಷಿಯಾಗಿ ಉಳಿಯಲಿದೆ.