ಹಿಂದೂಗಳಲ್ಲಿ ನಿರಂತರ ಜಾಗೃತಿ ಮೂಡಿಸಲು ಮುಂಬರುವ ಕಾಲದಲ್ಲಿ ಪ್ರಯತ್ನಿಸುವೆ! – “ಜಾಲ್ನಾದ ನೂತನವಾಗಿ ಆಯ್ಕೆಯಾದ ಹಿಂದುತ್ವನಿಷ್ಠ ನಗರಸೇವಕ ಶ್ರೀ ಶ್ರೀಕಾಂತ್ ಪಂಗಾರ್ಕರ್ Councilor Shrikant Pangarkar

“ಜಾಲ್ನಾದ ನೂತನವಾಗಿ ಆಯ್ಕೆಯಾದ ಹಿಂದುತ್ವನಿಷ್ಠ ನಗರಸೇವಕ ಶ್ರೀ ಶ್ರೀಕಾಂತ್ ಪಂಗಾರ್ಕರ್ ಅವರು ‘ಸನಾತನ ಪ್ರಭಾತ್‌’ ಮುಂದೆ ವ್ಯಕ್ತಪಡಿಸಿದ ಅಭಿಪ್ರಾಯ.”

ಜಾಲ್ನಾದ ನೂತನವಾಗಿ ಆಯ್ಕೆಯಾದ ಹಿಂದುತ್ವನಿಷ್ಠ ನಗರಸೇವಕ ಶ್ರೀ ಶ್ರೀಕಾಂತ್ ಪಂಗಾರ್ಕರ್

ಹಿಂದೂ ಧರ್ಮದ ಬಗ್ಗೆ ಅಚಲವಾದ ಪ್ರೀತಿ ಮತ್ತು ಅಭಿಮಾನ ನಿರ್ಮಾಣವಾದರೆ, ಆ ವ್ಯಕ್ತಿಯು ತನ್ನ ವೈಯಕ್ತಿಕ ಜೀವನದಲ್ಲಿ ಎಷ್ಟೇ ಕಠಿಣ ಪ್ರಸಂಗಗಳು ಬಂದರೂ, ಜೀವನವಿಡೀ ಧರ್ಮರಕ್ಷಣೆಗಾಗಿ ಕಾರ್ಯನಿರತನಾಗಿರುತ್ತಾನೆ. ಅಸಂಖ್ಯಾತ ಧರ್ಮನಿಷ್ಠರ ಧರ್ಮಕ್ಕಾಗಿ ಈ ಅಸಾಮಾನ್ಯ ತ್ಯಾಗದಿಂದಲೇ ಆಕ್ರಮಣಕಾರರಿಂದ ಹಿಂದೂ ಧರ್ಮವು ನಿರಂತರವಾಗಿ ರಕ್ಷಿಸಲ್ಪಟ್ಟಿದೆ. ಸಧ್ಯದ ಕಾಲದ ಇಂತಹದ್ದೇ ಒಂದು ಉದಾಹರಣೆಯೆಂದರೆ ಜಾಲನಾದ ಪ್ರಖರ ಹಿಂದುತ್ವನಿಷ್ಠ ಮತ್ತು ಪುನಃ ನಗರಸೇವಕರಾಗಿ ಆಯ್ಕೆಯಾಗಿರುವ ಶ್ರೀ. ಶ್ರೀಕಾಂತ ಪಾಂಗಾರಕರ. ವ್ಯವಸ್ಥೆಯು ಇವರನ್ನು ಗೌರಿ ಲಂಕೇಶ ಎಂಬ ಒಬ್ಬ ಸಾಮ್ಯವಾದಿ ಪತ್ರಕರ್ತೆಯ ಹತ್ಯೆಯ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿತು, ೮ ವರ್ಷಗಳ ಕಾಲ ಕಾರಾಗೃಹದಲ್ಲಿಟ್ಟು ಹಿಂಸೆ ನೀಡಿತು; ಆದರೆ ಅವರ ಮನಸ್ಸಿನ ಧರ್ಮಪ್ರೇಮ ಮತ್ತು ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಅವರ ಹಂಬಲ ಮಾತ್ರ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಸಮಾಜ ಮತ್ತು ಧರ್ಮ ಕಾರ್ಯ ಮಾಡಲು ಅವರು ಪುನಃ ಜಾಲನಾದಲ್ಲಿ ಪಕ್ಷೇತರ ನಗರಸೇವಕರಾಗಿ ಚುನಾಯಿತರಾಗಿದ್ದಾರೆ. ‘ಸನಾತನ ಪ್ರಭಾತ’ವು ಜಾಲನಾದ ಈ ಹಿಂದುತ್ವದ ಸೈನಿಕನೊಂದಿಗೆ ದೂರವಾಣಿ ಮೂಲಕ ನಡೆಸಿದ ಸಂದರ್ಶನದ ಸಾರಾಂಶ ಇಲ್ಲಿದೆ.

೧. ಪ್ರಶ್ನೆ : ಮೊಟ್ಟಮೊದಲಿಗೆ ‘ಸನಾತನ ಪ್ರಭಾತ’ದ ಪರವಾಗಿ ನಿಮಗೆ ಅಭಿನಂದನೆಗಳು! ಇಷ್ಟು ಕಠಿಣ ಕಾಲಘಟ್ಟದಿಂದ ಬಹಳ ಕಷ್ಟವನ್ನು ಸಹಿಸಿ ಇಲ್ಲಿಯವರೆಗೆ ಬಂದಿದ್ದೀರಿ, ಈ ಬಗ್ಗೆ ನಿಮಗೇನನ್ನಿಸುತ್ತದೆ? ನಿಮ್ಮ ಭಾವನೆಗಳೇನು?

ಶ್ರೀ. ಶ್ರೀಕಾಂತ ಪಾಂಗಾರಕರ : ನನ್ನ ಮೇಲೆ ಈಶ್ವರನ ಕೃಪೆಯಿರುವುದರಿಂದಲೇ ಈ ಕಠಿಣ ಕಾಲದಲ್ಲೂ ನಾನು ಸ್ಥಿರವಾಗಿರಲು ಸಾಧ್ಯವಾಯಿತು. ಮಾತೆ ಜಗದಂಬೆಯ ಕೃಪೆಯಿಂದ ನನಗೆ ಎಲ್ಲವನ್ನೂ ಎದುರಿಸುವ ಶಕ್ತಿ ಸಿಕ್ಕಿತು. ದೇವರೇ ನನ್ನಲ್ಲಿ ಆ ಸಹನಶಕ್ತಿಯನ್ನು ನಿರ್ಮಾಣ ಮಾಡಿದನು ಮತ್ತು ಎಲ್ಲವೂ ಸುಗಮವಾಯಿತು. ಇಂದಿನ ಚಿತ್ರಣವನ್ನು ನೋಡಿದರೆ, ನನ್ನ ವಾರ್ಡಿನ ಜನತೆ ನನ್ನ ಜೊತೆ ದೃಢವಾಗಿ ನಿಂತಿದ್ದಾರೆ.

೨. ಪ್ರಶ್ನೆ : ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ನೀವು ಜೈಲುವಾಸ ಅನುಭವಿಸಬೇಕಾಯಿತು. ಈ ಅನ್ಯಾಯವನ್ನು ನೀವು ಹೇಗೆ ನೋಡುತ್ತೀರಿ?

ಶ್ರೀ. ಶ್ರೀಕಾಂತ ಪಾಂಗಾರಕರ : ನಾನು ೨೦೧೮ ರಿಂದ ೨೦೨೪ ರವರೆಗೆ ಅಂದರೆ ೬ ವರ್ಷಗಳ ಕಾಲ ಜೈಲಿನಲ್ಲಿದ್ದೆನು. ನಾನು ಸಂಪೂರ್ಣವಾಗಿ ನಿರ್ದೋಷಿಯಾಗಿದ್ದರೂ ನನ್ನನ್ನು ಇದರಲ್ಲಿ ಸಿಲುಕಿಸಲಾಯಿತು. ಆರೋಪ ಸಾಬೀತಾಗುವವರೆಗೆ ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿಡುವುದು ಅತ್ಯಂತ ತಪ್ಪು ಎಂದು ನನಗನ್ನಿಸುತ್ತದೆ. ೧-೨ ವರ್ಷಗಳಲ್ಲಿ ವಿಚಾರಣೆ ನಡೆಸಿ ತೀರ್ಪನ್ನಾದರೂ ನೀಡಬೇಕು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸದೇ ೬ ವರ್ಷಗಳ ಕಾಲ ಜೈಲಿನಲ್ಲಿಡುವುದು ಅಕ್ಷಮ್ಯವಾಗಿದೆ. ನನ್ನ ಜೀವನದ ೬ ಅಮೂಲ್ಯ ವರ್ಷಗಳು ವ್ಯರ್ಥವಾಗಿವೆ. ಅವು ನನಗೆ ಮರಳಿ ಸಿಗುತ್ತವೆಯೇ?

೩. ಪ್ರಶ್ನೆ : ಗೌರಿ ಲಂಕೇಶ ಪ್ರಕರಣದ ಅಂತಹ ಕರಾಳ ಅಧ್ಯಾಯದ ನಂತರವೂ ಜನರು ನಿಮ್ಮನ್ನು ಪ್ರೀತಿಸಿದರು; ನಿಮ್ಮನ್ನು ಆಯ್ಕೆ ಮಾಡಿದರು. ಈ ಪ್ರೀತಿಯನ್ನು ನೀವು ಹೇಗೆ ಗಳಿಸಿದಿರಿ?

ಶ್ರೀ. ಶ್ರೀಕಾಂತ ಪಾಂಗಾರಕರ : ನನ್ನ ಮೇಲೆ ಆರೋಪ ಮಾಡಿ ಇತ್ತೀಚೆಗೆ ನನ್ನನ್ನು ಬಂಧಿಸಲಾಯಿತು. ಮೂಲತಃ ನಾನು ೨೦೦೧ ರಿಂದ ೨೦೧೧ ರ ಅವಧಿಯಲ್ಲಿ ಶಿವಸೇನೆಯ ನಗರಸೇವಕನಾಗಿದ್ದೆ. ನನ್ನ ವಾರ್ಡಿನ ಜನರಿಗೆ ನನ್ನ ಸ್ವಭಾವ ತಿಳಿದಿದೆ. ಗೌರಿ ಲಂಕೇಶ ಪ್ರಕರಣದಲ್ಲಿ ನನ್ನ ಹೆಸರು ಬಂದು ಬಂಧನವಾದರೂ ಜನರಿಗೆ ನಾನು ‘ನಿರ್ದೋಷಿ’ ಎಂಬುದು ತಿಳಿದಿತ್ತು. ಆದ್ದರಿಂದಲೇ ಜನತೆ ನನ್ನನ್ನು ಮತ್ತೆ ವಿಜಯಶಾಲಿಯನ್ನಾಗಿಸಿದ್ದಾರೆ.

೪. ಪ್ರಶ್ನೆ : ಸಾಮ್ಯವಾದಿಗಳು ಸುಳ್ಳು ಪ್ರಚಾರದ ಮೂಲಕ ನಿಮ್ಮ ಪ್ರತಿಷ್ಠೆಗೆ ಮಸಿ ಬಳಿಯಲು ಪ್ರಯತ್ನಿಸಿದರು. ಇದನ್ನು ನೀವು ಹೇಗೆ ಎದುರಿಸಿದಿರಿ?

ಶ್ರೀ. ಶ್ರೀಕಾಂತ ಪಾಂಗಾರಕರ : ಮೂಲದಲ್ಲಿ ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಬಂಧಿಸಲಾಯಿತು. ನಮಗೆ ಯಾತನೆಗಳನ್ನು ಅನುಭವಿಸುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ; ಆದರೆ ಒಳಗಿನಿಂದ ಈಶ್ವರನ ಪ್ರೇರಣೆ ಇತ್ತು. ನ್ಯಾಯಾಧೀಶರಿಂದ ನಮಗೆ ಕಾನೂನುಬದ್ಧವಾಗಿ ಹೋರಾಡಲು ಸರಿಯಾದ ಮಾರ್ಗದರ್ಶನವೂ ಸಿಗುತ್ತಿತ್ತು. ಇದರಿಂದಲೇ ನಾನು ಇವೆಲ್ಲವನ್ನೂ ಎದುರಿಸಲು ಸಾಧ್ಯವಾಯಿತು.

೫. ಪ್ರಶ್ನೆ : ಹಿಂದುತ್ವಕ್ಕಾಗಿ ನೀವು ಇಷ್ಟು ಕಷ್ಟಪಟ್ಟಿದ್ದೀರಿ. ಇವೆಲ್ಲವುಗಳಿಂದ ನೀವು ಅಗ್ನಿಪರೀಕ್ಷೆಯನ್ನು ಎದುರಿಸಿ ಶುದ್ಧರಾಗಿ ಹೊರಬಂದಿದ್ದೀರಿ ಇಂದು ಒಬ್ಬ ರಾಜಕೀಯ ನಾಯಕನಾಗಿ ಮತ್ತು ಹಿಂದುತ್ವನಿಷ್ಠನಾಗಿ ನಿಮ್ಮ ಮನೋಭಾವ ಹೇಗಿದೆ?

ಶ್ರೀ. ಶ್ರೀಕಾಂತ ಪಾಂಗಾರಕರ : ನನಗೆ ನನ್ನ ಜವಾಬ್ದಾರಿಯ ಅರಿವಾಗಿದೆ. ಜನರ ವಿಶ್ವಾಸವನ್ನು ಗಳಿಸುವುದು ಮತ್ತು ಅದನ್ನು ಉಳಿಸಿಕೊಳ್ಳಲು ನಿರಂತರವಾಗಿ ಜಾಗೃತನಾಗಿದ್ದು ಪ್ರಯತ್ನಿಸುತ್ತಿರಬೇಕು ಎಂಬುದರ ಅರಿವು ನನಗಾಯಿತು.

೬. ಪ್ರಶ್ನೆ : ನಗರಸೇವಕರಾಗಿ ನಿಮ್ಮ ಮುಂದಿನ ಯೋಜನೆಗಳೇನು?

ಶ್ರೀ. ಶ್ರೀಕಾಂತ ಪಾಂಗಾರಕರ : ನಗರಸೇವಕನಾಗಿ ನಾಗರಿಕರಿಗೆ ಅವರ ದೈನಂದಿನ ಮತ್ತು ಅತ್ಯಾವಶ್ಯಕ ಸೌಲಭ್ಯಗಳನ್ನು ಒದಗಿಸುವುದನ್ನು ನಾನು ಮುಂದುವರಿಸುತ್ತೇನೆ. ಉದಾಹರಣೆಗೆ ವಿದ್ಯುತ ಪೂರೈಕೆ, ನೀರು, ಬೀದಿ ದೀಪದ ವ್ಯವಸ್ಥೆ ಇತ್ಯಾದಿ. ಇದರೊಂದಿಗೆ, ಅಪರಾಧ ಕೃತ್ಯಗಳ ಮೂಲವಾಗಿರುವ ಮಾದಕ ದ್ರವ್ಯಗಳ ವಿರುದ್ಧ ನಾನು ಅಭಿಯಾನ ಆರಂಭಿಸಲಿದ್ದೇನೆ. ಮಹಿಳೆಯರ ರಕ್ಷಣೆಗಾಗಿ ಸದಾ ಶ್ರಮಿಸುತ್ತೇನೆ.

೭. ಪ್ರಶ್ನೆ : ಲವ್ ಜಿಹಾದ್ ವಿರೋಧಿ ಕಾನೂನಿಗಾಗಿ ಇಂದು ಹಿಂದೂಗಳಿಂದ ಬೇಡಿಕೆ ಕೇಳಿಬರುತ್ತಿದೆ. ನಿಮ್ಮ ವಾರ್ಡಿನಲ್ಲಿ ಈ ಕುರಿತು ನೀವು ಯಾವ ಪ್ರಯತ್ನ ಮಾಡುತ್ತೀರಿ? ಹಿಂದೂಗಳಲ್ಲಿ ಧರ್ಮಜಾಗೃತಿಗಾಗಿ ನಿಮ್ಮ ಬಳಿ ಏನಾದರೂ ಯೋಜನೆ ಇದೆಯೇ?

ಶ್ರೀ. ಶ್ರೀಕಾಂತ ಪಾಂಗಾರಕರ : ಖಂಡಿತ, ನಾನು ಕೂಡ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಯಾಗಲು ಪ್ರಯತ್ನಿಸುವೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರಲ್ಲಿ ನಿರಂತರ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಿದ್ದೇನೆ. ಇದರಲ್ಲಿ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಬಲರಾಗುವಂತೆ ಅವರಿಗೆ ಸ್ವರಕ್ಷಣೆ ತರಬೇತಿಯ ವ್ಯವಸ್ಥೆ ಮಾಡಲಿದ್ದೇನೆ. ಇದರೊಂದಿಗೆ ಯುವಕರು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಶಾಲೆಗಳನ್ನು ಪುನಃ ಪ್ರಾರಂಭಿಸುವತ್ತ ಗಮನ ಹರಿಸುವೆ. ಹಿಂದೂಗಳಳ್ಲಿ ನಿರಂತರವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ. ಸಮಾಜಕ್ಕೆ ಒಳ್ಳೆಯದು-ಕೆಟ್ಟದು ಎಂಬುದರ ಅರಿವು ಮೂಡಿಸಿ ಅವರನ್ನು ಸನ್ಮಾರ್ಗಕ್ಕೆ ಒಯ್ಯುವ ಪ್ರಯತ್ನ ಮಾಡುವೆ. ಒಟ್ಟಾರೆಯಾಗಿ ಹಿಂದೂ ಸಂಘಟನೆಯು ಕಾಲದ ಅವಶ್ಯಕತೆಯಾಗಿದೆ. ಇದಕ್ಕಾಗಿ ನನ್ನ ವಾರ್ಡಿನಲ್ಲಿ ಪ್ರಯತ್ನಿಸುವೆ.

೮. ಪ್ರಶ್ನೆ : ರಾಜಕೀಯ ಪಕ್ಷಗಳಲ್ಲಿನ ಒಡಕು, ಪಕ್ಷಾಂತರ ಮುಂತಾದ ಸಮಸ್ಯೆಗಳಿಂದ ರಾಜಕೀಯ ಕ್ಷೇತ್ರ ಬಳಲುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ, ಈ ಬಗ್ಗೆ ನಿಮ್ಮ ವಿಚಾರವೇನು?

ಶ್ರೀ. ಶ್ರೀಕಾಂತ ಪಾಂಗಾರಕರ : ಇಂದಿನ ಪರಿಸ್ಥಿತಿ ಏನೆಂದರೆ, ಯಾವುದೇ ರಾಜಕೀಯ ಪಕ್ಷಕ್ಕೆ ತತ್ವಗಳೇ ಉಳಿದಿಲ್ಲ. ಜನರಿಗೆ ಎಲ್ಲವೂ ತಿಳಿದಿದೆ. ಒಂದು ದಿನ ಜನರ ಆಕ್ರೋಶ ಸ್ಫೋಟಗೊಳ್ಳುವುದು ಖಚಿತ.

೯. ಪ್ರಶ್ನೆ : ನೀವು ಅನೇಕ ಕಷ್ಟಗಳನ್ನು ಅನುಭವಿಸಿದ್ದೀರಿ. ಹಿಂದುತ್ವದ ವ್ಯಾಪಕ ಹಿತಾಸಕ್ತಿಗಾಗಿ ನಿಮ್ಮ ಈ ತ್ಯಾಗವಾಗಿದೆಯೆನ್ನುವುದು ನಮ್ಮ ನಿಲುವಾಗಿದೆ. ಸಾಮ್ಯವಾದಿಗಳ ಷಡ್ಯಂತ್ರಕ್ಕೆ ನೀವು ಬಲಿಯಾಗಿದ್ದೀರಿ. ಈ ಕಾಲಾವಧಿಯಲ್ಲಿ ನಿಮಗೆ ವ್ಯವಸ್ಥೆಯಲ್ಲಿನ ಯಾವ ಲೋಪಗಳು ಗಮನಕ್ಕೆ ಬಂದಿವೆ?

ಶ್ರೀ. ಶ್ರೀಕಾಂತ ಪಾಂಗಾರಕರ : ನಮ್ಮಂತಹ ಹಿಂದುತ್ವನಿಷ್ಠರನ್ನು ಯಾವ ರೀತಿ ಬಂಧಿಸಲಾಯಿತೊ, ಅದೇ ರೀತಿ ಕೆಲವು ನಗರ ನಕ್ಸಲೀಯರನ್ನೂ ಬಂಧಿಸಲಾಗಿತ್ತು. ಆದರೆ ಮಾಧ್ಯಮಗಳು ಅವರ ಬಗ್ಗೆ ಸುದ್ದಿ ನೀಡುವಾಗ ಅವರನ್ನು ಸಕಾರಾತ್ಮಕವಾಗಿ ಚಿತ್ರಿಸುತ್ತಿದ್ದವು, ಆದರೆ ನಮ್ಮಂತಹ ಹಿಂದುತ್ವನಿಷ್ಠರ ಸುದ್ದಿಯನ್ನು ಅಯೋಗ್ಯ ಮತ್ತು ನಕಾರಾತ್ಮಕವಾಗಿ ಪ್ರಸಾರ ಮಾಡುತ್ತಿದ್ದವು. ಈ ದೃಷ್ಟಿಕೋನದಿಂದ ಹಿಂದೂಗಳು ಜಾಗೃತರಾಗಿ ಯಾರನ್ನು ಬೆಂಬಲಿಸಬೇಕು ಎಂಬ ವಿವೇಕ ಬೆಳೆಸಿಕೊಳ್ಳಬೇಕು.

೧೦. ಪ್ರಶ್ನೆ : ‘ದ ಕಾಶ್ಮೀರ್ ಫೈಲ್ಸ್’ನಂತಹ ಚಲನಚಿತ್ರಗಳಿಂದ ಹಿಂದೂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮೂಡಿತು. ಕೋಟ್ಯಾವಧಿ ಹಿಂದೂಗಳ ವರೆಗೆ ಕಾಶ್ಮೀರಿ ಹಿಂದೂಗಳ ವಿಷಯ ತಲುಪಿತು; ಆದರೆ ಇಂದಿಗೂ ಕಾಶ್ಮೀರಿ ಹಿಂದೂಗಳ ಪರ ಹೋರಾಡುತ್ತಿರುವುದು ಕೇವಲ `ಪನೂನ ಕಾಶ್ಮೀರ’ ದಂತಹ ಸಂಘಟನೆಗಳು ಮತ್ತು ಅದಕ್ಕೆ ಸಹಾಯ ಮಾಡುವ ಕೈಬೆರಳೆಣಿಕೆಯಷ್ಟು ಹಿಂದುತ್ವನಿಷ್ಠ ಸಂಘಟನೆಗಳಿವೆ. ಹೀಗಿರುವಾಗ ಹಿಂದೂಗಳಲ್ಲಿ ಜಾಗೃತಿಯನ್ನು ಯಾವ ರೀತಿ ಮೂಡಿಸಬೇಕು ಎಂದು ನಿಮಗನಿಸುತ್ತದೆ?

ಶ್ರೀ. ಶ್ರೀಕಾಂತ ಪಾಂಗಾರಕರ : `ದಿ ಕಾಶ್ಮೀರ ಫೈಲ್ಸ್ ‘ ನಂತಹ ಚಿತ್ರಗಳ ಮಾಧ್ಯಮದಿಂದ ಹಿಂದೂಗಳ ಮೇಲಿನ ಆಕ್ರಮಣಗಳ ವಿಷಯದಲ್ಲಿ ಹಿಂದೂ ಸಮಾಜದಲ್ಲಿ ಕ್ಷಣಿಕ ಭಾವನೆಯನ್ನು ಉಂಟುಮಾಡುತ್ತವೆ. ಕಾಲಾನಂತರದಲ್ಲಿ ಹಿಂದೂ ಸಮಾಜವು ತನ್ನ ಉದ್ಯೋಗ-ವ್ಯವಹಾರಗಳಲ್ಲಿ ಮಗ್ನವಾಗಿ ಧರ್ಮಜಾಗೃತಿಯ ವಿಚಾರವನ್ನು ಮರೆತುಬಿಡುತ್ತದೆ. ನಿಜವೇನೆಂದರೆ, ಅಂತಹ ಚಿತ್ರಗಳ ನಂತರ ಜನರಿಗೆ ಸತತವಾಗಿ ಪ್ರೇರಣೆ ನೀಡಿ ಜಾಗೃತಿಗೊಳಿಸುವುದು ಅಗತ್ಯವಾಗಿದೆ.

೧೧. ಪ್ರಶ್ನೆ : ಒಬ್ಬ ಹಿಂದುತ್ವನಿಷ್ಠ ನಗರಸೇವಕನಾಗಿ ಸ್ಥಳೀಯ ಮಟ್ಟದಲ್ಲಿ ಹಿಂದುತ್ವದ ಕಾರ್ಯವನ್ನು ಹೇಗೆ ಬೆಳೆಸುವಿರಿ?

ಶ್ರೀ. ಶ್ರೀಕಾಂತ ಪಾಂಗಾರಕರ : ನಾನು ‘ಕೋದಂಡ ಪ್ರತಿಷ್ಠಾನ’ ಎಂಬ ಸಂಘಟನೆಯನ್ನು ಸ್ಥಾಪಿಸಲಿದ್ದೇನೆ. ಅದರ ಪ್ರಕ್ರಿಯೆ ನಡೆಯುತ್ತಿದೆ. ಅದರ ಮೂಲಕ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸುವುದು, ಸಮಾಜವನ್ನು ವ್ಯಸನಮುಕ್ತಗೊಳಿಸುವುದು, ಮಹಿಳಾ ರಕ್ಷಣೆ ಮತ್ತು ‘ಲವ್ ಜಿಹಾದ್’ ಪ್ರಕರಣಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು ನಮ್ಮ ಗುರಿಯಾಗಿದೆ.

ನಿಮ್ಮ ಕಾರ್ಯಕ್ಕೆ ನಮ್ಮ ಶುಭ ಹಾರೈಕೆಗಳು ಮತ್ತು ನೀವು ಪುನಃ ನಗರಸೇವಕರಾಗಿ ಆಯ್ಕೆಯಾಗಿದ್ದಕ್ಕೆ ಮತ್ತೊಮ್ಮೆ ಮನಃಪೂರ್ವಕ ಅಭಿನಂದನೆಗಳು!