ಬಿಹಾರ: ಇನ್ಮುಂದೆ ಚಿನ್ನದ ಅಂಗಡಿಗಳಲ್ಲಿ ಹಿಜಾಬ್ಗೆ ನಿಷೇಧ! Bihar Gold Shops Ban Hijab

ಸರಫಾ (ಚಿನ್ನದ) ಅಂಗಡಿಗಳಲ್ಲಿ ಹೆಚ್ಚುತ್ತಿರುವ ಲೂಟಿ ಪ್ರಕರಣಗಳ ಹಿನ್ನೆಲೆಯಲ್ಲಿ ನಿರ್ಧಾರ

(ಹಿಜಾಬ್ ಎಂದರೆ ಮುಸಲ್ಮಾನ ಸ್ತ್ರೀಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳುವ ವಸ್ತ್ರ)

ಪಾಟಲಿಪುತ್ರ (ಬಿಹಾರ): ರಾಜ್ಯದ ಚಿನ್ನದ ಅಂಗಡಿಗಳಲ್ಲಿ ಇನ್ಮುಂದೆ ಹಿಜಾಬ್, ನಕಾಬ್ (ಮುಖವನ್ನು ಮುಚ್ಚುವ ಜಾಲರಿಯುಳ್ಳ ವಸ್ತ್ರ) ಮತ್ತು ಬುರ್ಖಾ (ಸಂಪೂರ್ಣ ದೇಹವನ್ನು ಮುಚ್ಚುವ ವಸ್ತ್ರ) ಧರಿಸಿ ಬರುವವರಿಗೆ ಪ್ರವೇಶ ನೀಡದಿರಲು ‘ಬಿಹಾರ ಜ್ಯುವೆಲ್ಲರ್ಸ್ ಅಸೋಸಿಯೇಷನ್’ ನಿರ್ಧರಿಸಿದೆ. ಕಳೆದ ಕೆಲವು ಸಮಯದಿಂದ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಚಿನ್ನದ ಅಂಗಡಿಗಳಲ್ಲಿ ಸರಣಿ ಲೂಟಿ ಮತ್ತು ಕಳ್ಳತನದ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚೆಗಷ್ಟೇ ಉತ್ತರಪ್ರದೇಶದ ಝಾನ್ಸಿಯಲ್ಲೂ ಇಂತಹದ್ದೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದರೊಂದಿಗೆ ಹೆಲ್ಮೆಟ್ ಧರಿಸಿ ಬರುವ ಪುರುಷರಿಗೂ ಪ್ರವೇಶ ನಿಷೇಧಿಸಲಾಗಿದೆ. ಈ ನಿರ್ಧಾರದ ಪ್ರತಿಯನ್ನು ಚಿನ್ನದ ಅಂಗಡಿಗಳ ಹೊರಗೆ ಅಂಟಿಸುವ ಕಾರ್ಯ ಆರಂಭವಾಗಿದೆ.

ಆರ್ಜೆಡಿ ಆರೋಪ, ಆಡಳಿತಾರೂಢ ಬಿಜೆಪಿಯಿಂದ ಪ್ರತ್ಯುತ್ತರ!

ಈ ನಿರ್ಧಾರದ ಕುರಿತು ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ವಕ್ತಾರ ಎಜಾಜ್ ಅಹ್ಮದ್ ಮಾತನಾಡಿ, “ಸುರಕ್ಷತೆಯ ಹೆಸರಿನಲ್ಲಿ ಹಿಜಾಬ್ ಮತ್ತು ನಕಾಬ್ ಅನ್ನು ಗುರಿ ಮಾಡುವುದು ಕೇವಲ ತಪ್ಪು ಹಾಗೂ ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವಾಗಿದೆ. ಇಂತಹ ನಿರ್ಧಾರಗಳು ಸಂವಿಧಾನದ ಅಡಿಯಲ್ಲಿ ನಾಗರಿಕರಿಗೆ ಸಿಕ್ಕಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಸಂಚಿನ ಭಾಗವಾಗಿದೆ” ಎಂದಿದ್ದಾರೆ. ‘ಎಐಎಂಐಎಂ’ (AIMIM) ಪಕ್ಷವೂ ಈ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ. ಇದಕ್ಕೆ ಬಿಜೆಪಿಯು ಆರ್ಜೆಡಿಗೆ ತಿರುಗೇಟು ನೀಡುತ್ತಾ, “ಇದು ಭಾರತ, ಇಸ್ಲಾಮಿಕ್ ರಾಷ್ಟ್ರವಲ್ಲ. ಇಲ್ಲಿ ಹಿಜಾಬ್ನ ಕೆಲಸವೇನಿದೆ?” ಎಂದು ಪ್ರಶ್ನಿಸಿದೆ.

ಸುರಕ್ಷತೆಗಾಗಿಯೇ ಈ ನಿರ್ಧಾರ! – ಅಶೋಕ್ ಕುಮಾರ್ ವರ್ಮಾ

ಸೌಜನ್ಯ : IANS

ಈ ವಿವಾದದ ಕುರಿತು ಚಿನ್ನದ ವ್ಯಾಪಾರಿಗಳು ಪ್ರತಿಕ್ರಿಯಿಸಿ, “ಈ ಕ್ರಮವು ಯಾವುದೇ ಸಮುದಾಯ ಅಥವಾ ವರ್ಗದ ವಿರುದ್ಧವಾದುದಲ್ಲ. ಕೇವಲ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ. ‘ಆಲ್ ಇಂಡಿಯಾ ಗೋಲ್ಡ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್’ನ ಬಿಹಾರ ರಾಜ್ಯಾಧ್ಯಕ್ಷ ಅಶೋಕ್ ಕುಮಾರ್ ವರ್ಮಾ ಮಾತನಾಡಿ, “ಚಿನ್ನ ಉದ್ಯಮದ ಮೇಲೆ ಯಾವಾಗಲೂ ಅಪರಾಧಿಗಳ ಕಣ್ಣಿರುತ್ತದೆ. ಪ್ರತಿದಿನ ಅಂಗಡಿಗಳಲ್ಲಿ ಲೂಟಿ ಘಟನೆಗಳು ನಡೆಯುತ್ತಿವೆ. ಮುಖ ಮುಚ್ಚಿರುವುದರಿಂದ ಅಪರಾಧಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಇದನ್ನು ತಡೆಯಲು ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.