ಧರ್ಮದ ಹೆಸರಿನಲ್ಲಿ ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿದೆ ಎಂದು ಸಂತರ ಅಭಿಪ್ರಾಯ Nepal Hindus Protest Bangladesh Attacks

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ನೇಪಾಳದಲ್ಲಿ ಆಕ್ರೋಶ

ಕಾಠ್ಮಂಡು (ನೇಪಾಳ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳನ್ನು ಖಂಡಿಸಿ, ನೇಪಾಳದ ಜನಕಪುರಧಾಮದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಮತ್ತು ಸಂತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರಾಚೀನ ಜನಕಪುರ ನಗರದ ಜಾನಕಿ ಮಂದಿರದ ಆವರಣದಿಂದ ಆರಂಭವಾದ ಈ ಪ್ರತಿಭಟನಾ ಮೆರವಣಿಗೆಯಲ್ಲಿ, ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನಾಕಾರರು ಈ ಘಟನೆಯನ್ನು ‘ಅಮಾನವೀಯ ಮತ್ತು ಧರ್ಮದ ಹೆಸರಿನಲ್ಲಿ ಮಾನವೀಯತೆಯ ವಿರುದ್ಧ ನಡೆದ ಅಪರಾಧ’, ಎಂದು ಕರೆದರು. ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ಘೋಷಣೆಗಳನ್ನು ಕೂಗಿದ ಅವರು ಬಾಂಗ್ಲಾದೇಶದ ಧ್ವಜವನ್ನು ಸುಟ್ಟು ಹಾಕಿದರು. ಈ ಪ್ರತಿಭಟನಾ ಮೆರವಣಿಗೆಯನ್ನು ‘ರಾಮಾನಂದಿಯ ವೈಷ್ಣವ ಸಂಘ’ ಆಯೋಜಿಸಿತ್ತು. ಜಾನಕಿ ದೇವಸ್ಥಾನದ ಉತ್ತರಾಧಿಕಾರಿ ಮಹಂತ ರಾಮ ರೋಷನ ದಾಸ್ ಅವರು ಮಾತನಾಡಿ, ‘ಬಾಂಗ್ಲಾದೇಶದ ಮೇಲೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಒತ್ತಡ ಹೇರಬೇಕೆಂದು ನಾನು ನೇಪಾಳ ಸರಕಾರಕ್ಕೆ ಎಚ್ಚರಿಕೆ ನೀಡಿದ್ದೇನೆ. ಇನ್ನೊಬ್ಬರ ಜೀವ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ’ ಎಂದು ಹೇಳಿದರು.

ಯೂನುಸ್ ಆಡಳಿತದಲ್ಲಿ ಹಿಂದೂಗಳನ್ನು ಜೀವಂತವಾಗಿ ಸುಡಲಾಗುತ್ತಿದೆ! – ಶೇಖ್ ಹಸೀನಾ

ಮೊಹಮ್ಮದ್ ಯೂನಸ್ ಮತ್ತು ಶೇಖ್ ಹಸೀನಾ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ, ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನುಸ್ ಅವರ ಆಡಳಿತದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ. ಹಿಂದೂಗಳನ್ನು ಜೀವಂತವಾಗಿ ಸುಡಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಅಕ್ರಮವಾಗಿ ಅಧಿಕಾರ ಹಿಡಿದಿರುವ ಪ್ರಸ್ತುತ ಸರಕಾರವು ಎಲ್ಲಾ ಧರ್ಮೀಯರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಿದೆ. ವಿಶೇಷವಾಗಿ ಮುಸ್ಲಿಮೇತರರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಸುಟ್ಟು ಕೊಲ್ಲುವಂತಹ ಭೀಕರ ಘಟನೆಗಳು ಸಂಭವಿಸಿವೆ. ಬಾಂಗ್ಲಾದೇಶದ ಜನರು ಈ ‘ಕರಾಳ ಕಾಲ’ವನ್ನು ಹೆಚ್ಚು ಕಾಲ ಸಹಿಸುವುದಿಲ್ಲ ಎಂಬ ಪೂರ್ಣ ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದ್ದಾರೆ.